Virat Kohli ಐಪಿಎಲ್ ಟಿ20 ಕ್ರಿಕೆಟ್‌ನಲ್ಲಿ ಹೊಸ ಮೈಲುಗಲ್ಲು ನೆಟ್ಟ ಕಿಂಗ್ ಕೊಹ್ಲಿ..!

By Naveen KodaseFirst Published May 20, 2022, 8:56 AM IST
Highlights

* ಐಪಿಎಲ್‌ನಲ್ಲಿ ಮತ್ತೊಂದು ಅಪರೂಪದ ದಾಖಲೆ ಬರೆದ ವಿರಾಟ್ ಕೊಹ್ಲಿ

* ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 7000 ರನ್ ಪೂರೈಸಿದ ಕಿಂಗ್ ಕೊಹ್ಲಿ

* ಐಪಿಎಲ್‌ನಲ್ಲಿ 7 ಸಾವಿರ ರನ್ ಬಾರಿಸಿದ ಮೊದಲ ಬ್ಯಾಟರ್ ಎನ್ನುವ ಶ್ರೇಯ ಕೊಹ್ಲಿ ಪಾಲು

ಮುಂಬೈ(ಮೇ.20): ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು (Royal Challengers Bangalore) ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli crosses 7000 IPL runs) ಟಿ20 ಕ್ರಿಕೆಟ್‌ನಲ್ಲಿ ತಂಡವೊಂದರ ಪರ 7,000 ರನ್‌ ಪೂರ್ತಿಗೊಳಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಗುರುವಾರ ಗುಜರಾತ್‌ ಟೈಟಾನ್ಸ್‌ (Gujarat Titans) ವಿರುದ್ಧ 73 ರನ್‌ ಗಳಿಸಿದರು. ವಿರಾಟ್ ಕೊಹ್ಲಿ ಗುಜರಾತ್ ಎದುರು ವಿರಾಟ್ ಕೊಹ್ಲಿ 53 ರನ್‌ ಬಾರಿಸುತ್ತಿದ್ದಂತೆಯೇ 7 ಸಾವಿರ ರನ್‌ಗಳ ಗಡಿ ದಾಟಿದರು. 

ಆರ್‌ಸಿಬಿ ಪರ 221 ಐಪಿಎಲ್‌ ಪಂದ್ಯಗಳನ್ನಾಡಿರುವ ಕೊಹ್ಲಿ 5 ಶತಕ, 44 ಅರ್ಧಶತಗಳೊಂದಿಗೆ 6,592 ಕಲೆ ಹಾಕಿದ್ದಾರೆ. ಚಾಂಪಿಯನ್ಸ್‌ ಲೀಗ್‌ ಟಿ20ಯಲ್ಲಿಯೂ ಆರ್‌ಸಿಬಿಯನ್ನು ಪ್ರತಿನಿಧಿಸಿರುವ ಅವರು 15 ಪಂದ್ಯಗಳಲ್ಲಿ 424 ರನ್‌ ಗಳಿಸಿದ್ದಾರೆ. 2008ರಲ್ಲಿ ಆರ್‌ಸಿಬಿ ಸೇರಿದ್ದ ವಿರಾಟ್ ಕೊಹ್ಲಿ ಇಷ್ಟು ವರ್ಷ ಒಂದೇ ತಂಡದ ಪರ ಐಪಿಎಲ್‌ ಆಡಿದ ಏಕೈಕ ಕ್ರಿಕೆಟಿಗ ಎಂಬ ದಾಖಲೆ ಸಹ ಹೊಂದಿದ್ದಾರೆ. ಇನ್ನು ತಂಡವೊಂದರ ಪರ ಅತೀ ಹೆಚ್ಚು ರನ್‌ ಗಳಿಸಿದರ ಪಟ್ಟಿಯಲ್ಲಿ ಸುರೇಶ್‌ ರೈನಾ 2ನೇ ಸ್ಥಾನದಲ್ಲಿದ್ದು, ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಅವರು ಒಟ್ಟು 5,529 ರನ್‌ ಕಲೆ ಹಾಕಿದ್ದಾರೆ. ತಂಡದ ಪರ ಅವರು ಐಪಿಎಲ್‌ನಲ್ಲಿ 4,687, ಚಾಂಪಿಯನ್ಸ್‌ ಲೀಗ್‌ನಲ್ಲಿ 842 ರನ್‌ ಗಳಿಸಿದ್ದಾರೆ.

ಇನ್ನು ಐಪಿಎಲ್‌ನಲ್ಲಿ ಗರಿಷ್ಠ ರನ್ ಬಾರಿಸಿದ್ದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಬಳಿಕ ಡೆಲ್ಲಿ ಮೂಲದ ಶಿಖರ್ ಧವನ್(6,205) ಎರಡನೇ ಸ್ಥಾನದಲ್ಲಿದ್ದರೆ, ಆ ಬಳಿಕ ರೋಹಿತ್ ಶರ್ಮಾ(5,877), ಡೇವಿಡ್ ವಾರ್ನರ್‌(5,876), ಸುರೇಶ್ ರೈನಾ(5,528) ಹಾಗೂ ಎಬಿ ಡಿವಿಲಿಯರ್ಸ್‌(5,162) ಟಾಪ್ 5 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ.

ಟೈಟಾನ್ಸ್‌ನ ಅಗ್ರ 5ರಲ್ಲಿ ನಾಲ್ವರು 300+ ರನ್‌!

ಮುಂಬೈ: ಚೊಚ್ಚಲ ಬಾರಿ ಐಪಿಎಲ್‌ ಆಡುತ್ತಿರುವ ಗುಜರಾತ್‌ ಟೈಟಾನ್ಸ್‌ ಟೂರ್ನಿಯಲ್ಲಿ ಬಲಿಷ್ಠ ಬ್ಯಾಟಿಂಗ್‌ ಪಡೆ ಹೊಂದಿರುವ ತಂಡಗಳಲ್ಲಿ ಒಂದಾಗಿದ್ದು, ತಂಡದ ಅಗ್ರ ಐವರು ಬ್ಯಾಟರ್‌ಗಳ ಪೈಕಿ ನಾಲ್ವರು ಈ ಆವೃತ್ತಿಯಲ್ಲಿ 300ಕ್ಕೂ ಹೆಚ್ಚು ರನ್‌ ಕಲೆ ಹಾಕಿದ್ದಾರೆ. 

IPL 2022 ಗುಜರಾತ್ ವಿರುದ್ಧ ಭರ್ಜರಿ ಗೆಲುವು, ಡೆಲ್ಲಿ ಫಲಿತಾಂಶದತ್ತ ಆರ್‌ಸಿಬಿ ಚಿತ್ತ!

ಗುರುವಾರ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 31 ರನ್‌ ಸಿಡಿಸಿದ ವೃದ್ಧಿಮಾನ್‌ ಸಾಹ ಈ ಬಾರಿ 300+ ರನ್‌ ಪೂರೈಸಿದ ತಂಡದ ನಾಲ್ಕನೇ ಬ್ಯಾಟರ್‌. ನಾಯಕ ಹಾರ್ದಿಕ್‌ ಪಾಂಡ್ಯ 13 ಪಂದ್ಯಗಳಲ್ಲಿ 41.30ರ ಸರಾಸರಿಯಲ್ಲಿ 413 ರನ್‌ ಕಲೆ ಹಾಕಿದ್ದು, ಶುಭ್‌ಮನ್‌ ಗಿಲ್‌ 14 ಪಂದ್ಯಗಳಲ್ಲಿ 403 ರನ್‌ ಗಳಿಸಿದ್ದಾರೆ. ಡೇವಿಡ್‌ ಮಿಲ್ಲರ್‌ 14 ಪಂದ್ಯಗಳಲ್ಲಿ 381 ರನ್‌ ಬಾರಿಸಿ 3ನೇ ಸ್ಥಾನದಲ್ಲಿದ್ದಾರೆ. ಒಟ್ಟಾರೆ ಈ ಆವೃತ್ತಿಯ ಅಗ್ರ ರನ್‌ ಸರದಾರರ ಪಟ್ಟಿಯಲ್ಲಿ ರಾಜಸ್ಥಾನದ ಜೋಸ್‌ ಬಟ್ಲರ್‌(13 ಪಂದ್ಯಗಳಲ್ಲಿ 627) ಮುಂಚೂಣಿಯಲ್ಲಿದ್ದಾರೆ.

ಆರ್‌ಸಿಬಿ ಅಭಿಮಾನಿಗಳಿಂದ ಗಿನ್ನಿಸ್‌ ದಾಖಲೆ!

ಬೆಂಗಳೂರು: ಆರ್‌ಸಿಬಿ ಅಭಿಮಾನಿಗಳು ಗುರುವಾರ ನಗರದ ಖಾಸಗಿ ಹೋಟೆಲ್‌ ಆವರಣದಲ್ಲಿ ಆಯೋಜಿಸಿದ್ದ ಕಾರ‍್ಯಕ್ರಮದಲ್ಲಿ ಒಂದು ಗಂಟೆಯಲ್ಲಿ ಅತಿಹೆಚ್ಚು ರನ್‌ ಓಡಿ ಗಿನ್ನಿಸ್‌ ದಾಖಲೆ ಬರೆದಿದ್ದಾರೆ. 187 ಅಭಿಮಾನಿಗಳು 60 ನಿಮಿಷಗಳಲ್ಲಿ ಒಟ್ಟು 823 ರನ್‌ ಓಡಿದರು. ಒಬ್ಬ ಅಭಿಮಾನಿ ತಲಾ 4 ರನ್‌ ಓಡಬೇಕಿತ್ತು. ಈ ಸ್ಪರ್ಧೆಗೆ ಭಾರತದ ತಾರಾ ಅಥ್ಲೀಟ್‌ ದ್ಯುತಿ ಚಂದ್‌ ಚಾಲನೆ ನೀಡಿದರು. ದ್ಯುತಿ ಮೊದಲ 4 ರನ್‌ ಓಡಿ ಅಭಿಮಾನಿಗಳನ್ನು ಹುರಿದುಂಬಿಸಿದರು. ಭಾರತ ಹಾಕಿ ತಂಡದ ಆಟಗಾರ ರೂಪಿಂದರ್‌ ಪಾಲ್‌ ಸಿಂಗ್‌ ಸಹ ಉಪಸ್ಥಿತರಿದ್ದರು.

click me!