
ಬೆಂಗಳೂರು(ನ.05): ವಿರಾಟ್ ಕೊಹ್ಲಿ ಅವರ ಏಕದಿನ ಕ್ರಿಕೆಟ್ ವೃತ್ತಿಜೀವನ ಅತ್ಯಂತ ಅದ್ಭುತವಾದುದು. 306 ಇನಿಂಗ್ಸ್ಗಳಲ್ಲಿ 58.84ರ ಸರಾಸರಿಯಲ್ಲಿ 15,183 ರನ್ ಗಳಿಸಿರುವ ಅವರು, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಅವರ ಖಾತೆಯಲ್ಲಿ ಬರೋಬ್ಬರಿ 55 ಶತಕಗಳಿದ್ದು, ಇದರ ಜೊತೆಗೆ 80 ಅರ್ಧಶತಕಗಳೂ ಇವೆ. ಈ ಅವಧಿಯಲ್ಲಿ ಕೊಹ್ಲಿ ಅನೇಕ ಸ್ಮರಣೀಯ ಇನಿಂಗ್ಸ್ಗಳನ್ನು ಆಡಿದ್ದಾರೆ.
ಹಾಗಾದರೆ, ತಮ್ಮ ವೃತ್ತಿಜೀವನದ ಈ ಅದ್ಭುತ ಇನಿಂಗ್ಸ್ಗಳಲ್ಲಿ ಕೊಹ್ಲಿ ಯಾವುದನ್ನು ಅತ್ಯುತ್ತಮ ಯಾವುದು ಗೊತ್ತಾ? ಆಶ್ಚರ್ಯಕರ ಸಂಗತಿಯೆಂದರೆ, ಅದು ಅವರ ಯಾವುದೇ ಶತಕ ಅಥವಾ ಅರ್ಧಶತಕದ ಇನಿಂಗ್ಸ್ ಅಲ್ಲ. ಪಾಕಿಸ್ತಾನ ವಿರುದ್ಧದ 183 ರನ್ಗಳ ಸ್ಫೋಟಕ ಆಟವೂ ಅಲ್ಲ. 2012ರಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ಒಳಗೊಂಡ ತ್ರಿಕೋನ ಸರಣಿಯಲ್ಲಿ, ಫೈನಲ್ ತಲುಪುವ ಭಾರತದ ಆಸೆಯನ್ನು ಜೀವಂತವಾಗಿರಿಸಲು ಕೇವಲ 37 ಓವರ್ಗಳಲ್ಲೇ 321 ರನ್ಗಳ ಗುರಿ ಬೆನ್ನಟ್ಟುವಂತೆ ಮಾಡಿದ್ದ ಶ್ರೀಲಂಕಾ ವಿರುದ್ಧದ 133 ರನ್ಗಳ ಇನ್ನಿಂಗ್ಸ್ ಕೂಡ ಅಲ್ಲ.
ಬದಲಿಗೆ, 2013ರ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಕೊಹ್ಲಿ ಗಳಿಸಿದ್ದ ಅಜೇಯವಲ್ಲದ 43 ರನ್ಗಳ ಆಟವೇ ಅವರ ಪಾಲಿನ ಅತ್ಯುತ್ತಮ ಇನಿಂಗ್ಸ್. ಈ ಗೆಲುವಿನೊಂದಿಗೆ ಭಾರತ ಎರಡನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಗೆದ್ದುಕೊಂಡಿತ್ತು. ಈ ಪೈಕಿ ಭಾರತ ಏಕೈಕ ಚಾಂಪಿಯನ್ ಆಗಿ ಪ್ರಶಸ್ತಿ ಗೆದ್ದ ಮೊದಲ ಸಂದರ್ಭವೂ ಇದಾಗಿತ್ತು. ಇದಕ್ಕೂ ಮೊದಲು 2002ರಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಜಂಟಿಯಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು.
ಕೊಹ್ಲಿ ಅವರಿಗೆ 38ನೇ ಹುಟ್ಟುಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ, ಸ್ಟಾರ್ ಸ್ಪೋರ್ಟ್ಸ್ ಅವರೊಂದಿಗಿನ ಪ್ರಶ್ನೋತ್ತರ ಕಾರ್ಯಕ್ರಮವೊಂದನ್ನು ಹಂಚಿಕೊಂಡಿದೆ. ಇದರಲ್ಲಿ ಕೊಹ್ಲಿ ತಮ್ಮ ವೃತ್ತಿಜೀವನದ ಕೆಲವು ಸ್ಮರಣೀಯ ಏಕದಿನ ಇನಿಂಗ್ಸ್ಗಳ ನಡುವೆ ಹೋಲಿಕೆ ಮಾಡಿ, ತಮ್ಮ ಆಯ್ಕೆಯನ್ನು ತಿಳಿಸಿದ್ದಾರೆ.
ಈ ಪಟ್ಟಿಯಲ್ಲಿ ಶ್ರೀಲಂಕಾ ವಿರುದ್ಧದ 133 ರನ್, 2012ರ ಏಷ್ಯಾಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಗಳಿಸಿದ 183 ರನ್, ಇಂಗ್ಲೆಂಡ್ ವಿರುದ್ಧ ಪುಣೆಯಲ್ಲಿ ಬಾರಿಸಿದ 122 ರನ್, ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗಳಿಸಿದ 138 ರನ್ ಹಾಗೂ 2015ರ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಸಿಡಿಸಿದ 107 ರನ್ಗಳು ಸೇರಿದ್ದವು. ವಿಶ್ವಕಪ್ನಲ್ಲಿ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನು ಆ 107 ರನ್ಗಳ ಇನಿಂಗ್ಸ್ ಮೂಲಕ ಕೊಹ್ಲಿ ಪಡೆದಿದ್ದರು.
ಆರಂಭದಲ್ಲಿ 2011ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಶ್ರೀಲಂಕಾ ವಿರುದ್ಧ ಗಳಿಸಿದ್ದ 35 ರನ್ಗಳ ಇನಿಂಗ್ಸ್ ಅನ್ನು ಕೊಹ್ಲಿ ತಮ್ಮ ಅತ್ಯುತ್ತಮ ಆಟವೆಂದು ಆಯ್ಕೆ ಮಾಡಿದ್ದರು. ಆದರೆ, ನಂತರ ಈ ಇನಿಂಗ್ಸ್ ಅನ್ನು ಎಡ್ಜ್ಬಾಸ್ಟನ್ನಲ್ಲಿ ಇಂಗ್ಲೆಂಡ್ ವಿರುದ್ಧ 2013ರ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಗಳಿಸಿದ 43 ರನ್ಗಳೊಂದಿಗೆ ಹೋಲಿಸಲಾಯಿತು. ಆಗ ಕೊಹ್ಲಿ 43 ರನ್ಗಳ ಇನಿಂಗ್ಸ್ಗೆ ಮಣೆ ಹಾಕಿದರು.
2013ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯವು ಎಡ್ಜ್ಬಾಸ್ಟನ್ನಲ್ಲಿ ನಡೆದಿತ್ತು. ನಿರಂತರ ಮಳೆಯಿಂದಾಗಿ ಹಲವು ಗಂಟೆಗಳ ಕಾಲ ಪಂದ್ಯ ಆರಂಭವಾಗುವುದು ವಿಳಂಬವಾಗಿತ್ತು. ಹೀಗಾಗಿ ಉಭಯ ತಂಡಗಳಿಗೂ ತಲಾ 20 ಓವರ್ಗಳ ಪಂದ್ಯವನ್ನು ನಿಗದಿಪಡಿಸಲಾಗಿತ್ತು. ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲಿ ಶಿಖರ್ ಧವನ್ 24 ಎಸೆತಗಳಲ್ಲಿ 31 ರನ್ ಗಳಿಸುವ ಮೂಲಕ ಭಾರತಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಆದರೆ, ಬಳಿಕ ಭಾರತದ ಬ್ಯಾಟಿಂಗ್ ಕುಸಿತ ಕಂಡಿತು. 8.1 ಓವರ್ಗಳಲ್ಲಿ 1 ವಿಕೆಟ್ಗೆ 50 ರನ್ ಗಳಿಸಿದ್ದ ಭಾರತ, 13 ಓವರ್ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 66 ರನ್ಗಳಿಗೆ ಕುಸಿದಿತ್ತು.
ಆರಂಭಿಕ ಆಟಗಾರ ರೋಹಿತ್ ಶರ್ಮಾ ವಿಕೆಟ್ ಪತನದ ಬಳಿಕ ಕ್ರೀಸ್ಗೆ ಬಂದಿದ್ದ ಕೊಹ್ಲಿ, ರವೀಂದ್ರ ಜಡೇಜಾ ಅವರೊಂದಿಗೆ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತುಕೊಂಡರು. ಈ ವೇಳೆ ಇಬ್ಬರೂ ನಿರ್ಣಾಯಕ 47 ರನ್ಗಳ ಜೊತೆಯಾಟವಾಡಿದರು. ಇದು ಭಾರತ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾಯಿತು. ಕೊಹ್ಲಿ 36 ರನ್ ಗಳಿಸಿದ್ದಾಗ ಸ್ಟುವರ್ಟ್ ಬ್ರಾಡ್ ಬೌಲಿಂಗ್ನಲ್ಲಿ ಜೋನಾಥನ್ ಟ್ರಾಟ್ ಕ್ಯಾಚ್ ಕೈಚೆಲ್ಲಿದರು. ಇದಾದ ಬಳಿಕ ಅದೇ ಓವರ್ನಲ್ಲಿ ಬ್ರಾಡ್ ಎಸೆತವನ್ನು ಸಿಕ್ಸರ್ಗೆ ಅಟ್ಟುವ ಮೂಲಕ ಕೊಹ್ಲಿ ತಮ್ಮ ಆಕ್ರಮಣಕಾರಿ ಆಟ ಮುಂದುವರಿಸಿದರು. ಅಂತಿಮವಾಗಿ ಕೊಹ್ಲಿ 34 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 43 ರನ್ ಗಳಿಸಿ ಔಟಾದರು. ಮತ್ತೊಂದೆಡೆ ಜಡೇಜಾ ಅಜೇಯ 33 ರನ್ (25 ಎಸೆತ) ಸಿಡಿಸುವ ಮೂಲಕ ಭಾರತ ತಂಡ ತನ್ನ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 129 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕುವಂತೆ ಮಾಡಿದರು.
129 ರನ್ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಕೊನೆಯವರೆಗೂ ಹೋರಾಟ ನಡೆಸಿತು. ಇಯಾನ್ ಮಾರ್ಗನ್ ಮತ್ತು ಬೋಪಾರಾ ಐದನೇ ವಿಕೆಟ್ಗೆ 64 ರನ್ಗಳ ಜೊತೆಯಾಟವಾಡುವ ಮೂಲಕ ಇಂಗ್ಲೆಂಡ್ ಗೆಲುವಿನ ಆಸೆಯನ್ನು ಜೀವಂತವಾಗಿಟ್ಟಿದ್ದರು. ಆದರೆ, ಪಂದ್ಯದ 18ನೇ ಓವರ್ನಲ್ಲಿ ಇಶಾಂತ್ ಶರ್ಮಾ ಸತತ ಎರಡು ಎಸೆತಗಳಲ್ಲಿ ಮಾರ್ಗನ್ ಮತ್ತು ಬೋಪಾರಾ ಅವರನ್ನು ಪೆವಿಲಿಯನ್ಗೆ ಕಳುಹಿಸಿದರು. ಈ ಎರಡು ವಿಕೆಟ್ಗಳು ಪಂದ್ಯದ ದಿಕ್ಕನ್ನೇ ಬದಲಿಸಿದವು. ಅಂತಿಮವಾಗಿ ಒತ್ತಡದ ನಡುವೆಯೂ ಭಾರತ ತಂಡ ಗೆಲುವಿನ ನಗೆ ಬೀರಿತು. ಈ ಮೂಲಕ ಎರಡನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಈ ಪಂದ್ಯದಲ್ಲಿ ಕೊಹ್ಲಿ ಗಳಿಸಿದ 43 ರನ್ಗಳು ಶತಕದ ಲೆಕ್ಕದಲ್ಲಿ ದೊಡ್ಡ ಮೊತ್ತವಾಗಿರಲಿಲ್ಲ. ಆದರೆ, ತಂಡ ಸಂಕಷ್ಟದಲ್ಲಿದ್ದಾಗ ಜವಾಬ್ದಾರಿಯುತವಾಗಿ ಆಡಿದ ಈ ಇನಿಂಗ್ಸ್ ಭಾರತ ಪ್ರಶಸ್ತಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಇದೇ ಕಾರಣಕ್ಕೆ ತಮ್ಮ ವೃತ್ತಿಜೀವನದ ಅನೇಕ ಭರ್ಜರಿ ಶತಕಗಳಿಗಿಂತ ಈ 43 ರನ್ಗಳ ಆಟವೇ ಶ್ರೇಷ್ಠ ಎಂದು ಕೊಹ್ಲಿ ಆಯ್ಕೆ ಮಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.