
ಇಂಗ್ಲೆಂಡ್ (England) ವಿರುದ್ಧ ನಡೆದ ಟೆಸ್ಟ್ (Test) ಪಂದ್ಯಾವಳಿಯಲ್ಲಿ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ (Virat Kohli) ಹಾಗೂ ರೋಹಿತ್ ಶರ್ಮಾ (Rohit Sharma) ಅವರನ್ನು ಕ್ರಿಕೆಟ್ ಪ್ರೇಮಿಗಳು ಮಿಸ್ ಮಾಡ್ಕೊಂಡಿದ್ದಾರೆ. ಈಗಾಗಲೇ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ, ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಸದ್ಯ ಇಬ್ಬರು ಆಟಗಾರರು ಏಕದಿನ ಪಂದ್ಯವನ್ನು ಮಾತ್ರ ಆಡ್ತಿದ್ದು, ಮುಂಬರುವ ವಿಶ್ವಕಪ್ ಗೆ ಅವರು ಲಭ್ಯರಾಗ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡ್ತಿದೆ.
ಟಿ20 ವಿಶ್ವಕಪ್ 2024 ಪ್ರಶಸ್ತಿ ಮುಡಿಗೇರಿಸಿಕೊಂಡ ನಂತ್ರ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ, ಟಿ 20 ಕ್ರಿಕೆಟ್ ಆವೃತ್ತಿಗೆ ವಿದಾಯ ಹೇಳಿದ್ದರು. ತಮ್ಮ ನಿವೃತ್ತಿ ಘೋಷಣೆ ಮಾಡಿ ಕ್ರಿಕೆಟ್ ಪ್ರೇಮಿಗಳಿಗೆ ಶಾಕ್ ನೀಡಿದ್ದರು. ಇದಾದ್ಮೇಲೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಮತ್ತೊಂದು ಶಾಕ್ ಕಾದಿತ್ತು. ಇಬ್ಬರು ಆಟಗಾರರೂ ಟೆಸ್ಟ್ ಪಂದ್ಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ರು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ, ಐಸಿಸಿ ಏಕದಿನ ವಿಶ್ವಕಪ್ 2027 ರಲ್ಲಿ ಆಡ್ತಾರಾ ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಈಗ ಮಹತ್ವದ ವಿಷ್ಯವನ್ನು ಬಹಿರಂಗಪಡಿಸಿದೆ. ಇಬ್ಬರೂ ವಿಶ್ವಕಪ್ ಆಡ್ತಾರಾ ಇಲ್ವಾ ಎಂಬುದನ್ನು ಬಿಸಿಸಿಐ ತಿಳಿಸಿದೆ.
ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಲಂಡನ್ನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ಏಕದಿನ ಸ್ವರೂಪಕ್ಕೆ ಲಭ್ಯವಿದ್ದಾರೆ. ನಾವೆಲ್ಲರೂ ವಿರಾಟ್ ಮತ್ತು ರೋಹಿತ್ ಅವರನ್ನು ಮಿಸ್ ಮಾಡಿಕೊಳ್ತಿದ್ದೇವೆ. ಆದ್ರೆ ನಿವೃತ್ತಿಯ ನಿರ್ಧಾರ ಅವರದ್ದು. ಯಾವುದೇ ಆಟಗಾರನನ್ನು ಯಾವುದೇ ಸ್ವರೂಪದಿಂದ ನಿವೃತ್ತಿ ಹೊಂದುವಂತೆ ಬಿಸಿಸಿಐ ಕೇಳೋದಿಲ್ಲ. ಇದು ಬಿಸಿಸಿಐ ನಿಯಮಕ್ಕೆ ವಿರುದ್ಧ. ಯಾವ ಸ್ವರೂಪಕ್ಕೆ ನಿವೃತ್ತಿ ಘೋಷಣೆ ಮಾಡ್ಬೇಕು ಎಂಬುದು ಆಟಗಾರನನ್ನು ಅವಲಂಬಿಸಿರುತ್ತದೆ. ಟೆಸ್ಟ್ನಿಂದ ನಿವೃತ್ತಿ ಹೊಂದುವ ನಿರ್ಧಾರ ಕೊಹ್ಲಿ ಮತ್ತು ಶರ್ಮಾ ಅವರದ್ದಾಗಿತ್ತು ಎಂದಿದ್ದಾರೆ. ಟೆಸ್ಟ್ ನಿವೃತ್ತಿಯ ಸಮಯದಲ್ಲಿ ರೋಹಿತ್ ಏಕದಿನ ಪಂದ್ಯ ಆಡೋದಾಗಿ ಹೇಳಿದ್ದರು, ವಿರಾಟ್ ಕೂಡ 2027 ರ ವಿಶ್ವಕಪ್ ವರೆಗೆ ಏಕದಿನ ಕ್ರಿಕೆಟ್ ಆಡಲು ಬಯಸೋದಾಗಿ ಹೇಳಿದ್ದಾರೆ ಎಂದು ಶುಕ್ಲಾ ಮಾಹಿತಿ ನೀಡಿದ್ದಾರೆ. ಈ ವಿಶ್ವಕಪ್ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ.
ಕೊಹ್ಲಿ ವೃತ್ತಿ ಜೀವನ : ವಿರಾಟ್ ಕೊಹ್ಲಿ ಮೂರು ಸ್ವರೂಪದ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಟೀಮ್ ಇಂಡಿಯಾ ಸದ್ಯ ಕೊಹ್ಲಿಯನ್ನು ಟಿ 20 ಹಾಗೂ ಟೆಸ್ಟ್ ಕ್ರಿಕೆಟ್ ನಲ್ಲಿ ಮಿಸ್ ಮಾಡಿಕೊಳ್ತಿದೆ. ವಿರಾಟ್ ಇದುವರೆಗೆ 302 ಏಕದಿನ ಪಂದ್ಯಗಳನ್ನು ಆಡಿದ್ದು,14181 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ ಅವರು 74 ಅರ್ಧಶತಕ ಮತ್ತು 51 ಶತಕ ಸಿಡಿಸಿದ್ದಾರೆ. ಕೊಹ್ಲಿ 123 ಟೆಸ್ಟ್ ಪಂದ್ಯಗಳಲ್ಲಿ 9230 ರನ್ ಗಳಿಸಿದ್ದಾರೆ. 30 ಶತಕ ಗಳಿಸಿದ್ದಾರೆ. ಇನ್ನು ಕೊಹ್ಲಿ ಟಿ 20 ಯ 125 ಪಂದ್ಯಗಳನ್ನು ಆಡಿದ್ದು, ಒಟ್ಟೂ 4188 ರನ್ ಗಳಿಸಿದ್ದಾರೆ. ಟಿ 20 ಪಂದ್ಯದಲ್ಲಿ ಕೊಹ್ಲಿ ಬಾರಿಸಿದ್ದು ಒಂದೇ ಒಂದು ಶತಕ.
ರೋಹಿತ್ ಶರ್ಮಾ ವೃತ್ತಿ ಜೀವನ : ರೋಹಿತ್ ಶರ್ಮಾ ಈವರೆಗೆ 273 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ ಒಟ್ಟೂ 11168 ರನ್ ಗಳಿಸಿದ್ದಾರೆ. ಒಟ್ಟು 32 ಶತಕ ಮತ್ತು 58 ಅರ್ಧಶತಕ ಸಿಡಿಸಲು ಯಶಸ್ವಿಯಾಗಿದ್ದಾರೆ. ರೋಹಿತ್ ಏಕದಿನ ಪಂದ್ಯಗಳಲ್ಲಿ 264 ರನ್ಗಳ ಇನ್ನಿಂಗ್ಸ್ ಆಡಿದ್ದಾರೆ.ಅವರ ದಾಖಲೆ ಮುರಿಯುವುದು ಅಸಾಧ್ಯ. ಇನ್ನು ರೋಹಿತ್ 67 ಟೆಸ್ಟ್ಗಳಲ್ಲಿ 4301 ರನ್ ಗಳಿಸಿದ್ದು, 159 ಟಿ20 ಪಂದ್ಯಗಳಲ್ಲಿ 4231 ರನ್ ಕಲೆ ಹಾಕಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.