Vijay Hazare Trophy: ತಮಿಳುನಾಡಿಗೆ ಶರಣಾದ ಮನೀಶ್ ಪಡೆ, ಕರ್ನಾಟಕದ ಸೆಮೀಸ್ ಕನಸು ಭಗ್ನ..!

By Suvarna NewsFirst Published Dec 21, 2021, 5:46 PM IST
Highlights

* ವಿಜಯ್ ಹಜಾರೆ ಟೂರ್ನಿಯ ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡಕ್ಕೆ ಶಾಕ್‌

* ತಮಿಳುನಾಡು ವಿರುದ್ದ 151 ರನ್‌ಗಳ ಸೋಲು ಕಂಡ ಮನೀಶ್ ಪಾಂಡೆ ಪಡೆ

* ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ ರಾಜ್ಯ ತಂಡ

ಜೈಪುರ(ಡಿ.21): ಆರಂಭಿಕ ಬ್ಯಾಟರ್‌ ಎನ್‌. ಜಗದೀಶನ್ (N Jagadeesan) ಆಕರ್ಷಕ ಶತಕ ಹಾಗೂ ಶಾರುಕ್ ಖಾನ್ (Shahrukh Khan) ಸ್ಪೋಟಕ ಅರ್ಧಶತಕ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ವಿಜಯ್ ಹಜಾರೆ ಟೂರ್ನಿಯ (Vijay Hazare Trophy) ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಕರ್ನಾಟಕ (Karnataka Cricket Team) ವಿರುದ್ದ ತಮಿಳುನಾಡು ತಂಡವು (Tamil Nadu Cricket) 151 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಇದರೊಂದಿಗೆ ಮನೀಶ್ ಪಾಂಡೆ (Manish Pandey) ನೇತೃತ್ವದ ಕರ್ನಾಟಕ ಕ್ರಿಕೆಟ್ ತಂಡದ ಸೆಮೀಸ್‌ ಕನಸು ಭಗ್ನವಾಗಿದೆ.

ಇಲ್ಲಿನ ಕೆ.ಎಲ್‌. ಸೈನಿ ಮೈದಾನದಲ್ಲಿ ತಮಿಳುನಾಡು ತಂಡವು ಮೊದಲು ಬ್ಯಾಟ್ ಮಾಡಿ ಬರೋಬ್ಬರಿ 354 ರನ್‌ಗಳ ಕಠಿಣ ಗುರಿ ನೀಡಿತು. ಈ ಗುರಿ ಬೆನ್ನತ್ತಿದ ಕರ್ನಾಟಕ ತಂಡವು ಖಾತೆ ತೆರೆಯುವ ಮುನ್ನವೇ ದೇವದತ್ ಪಡಿಕ್ಕಲ್ ವಿಕೆಟ್ ಕಳೆದುಕೊಂಡುಕೊಂಡಿತು. ಇದಾದ ಬಳಿಕ ಎರಡನೇ ವಿಕೆಟ್‌ಗೆ ರೋಹನ್ ಕದಂ ಹಾಗೂ ಕೃಷ್ಣಮೂರ್ತಿ ಸಿದ್ದಾರ್ಥ್ (Krishnamurthy Siddharth) 59 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಸಿಲಂಬರಸನ್‌ ಯಶಸ್ವಿಯಾದರು. ರೋಹನ್ ಕದಂ (Rohan Kadam) 24 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಸಿದ್ದಾರ್ಥ್ ಕೂಡಾ 29 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ಮನೀಶ್ ಪಾಂಡೆ ಕೇವಲ 9 ರನ್‌ ಬಾರಿಸಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಹಾರ್ಡ್‌ ಹಿಟ್ಟರ್ ಅಭಿನವ್ ಮನೋಹರ್ (Abhinav Manohar) ಹಾಗೂ ಶ್ರೀನಿವಾಸ್ ಸಮರ್ಥ್‌ ಕೊಂಚ ಪ್ರತಿರೋಧ ತೋರಿದರು. ಸ್ಪೋಟಕ ಬ್ಯಾಟಿಂಗ್ ಆಡುವ ಮುನ್ಸೂಚನೆ ನೀಡಿದ ಅಭಿನವ್ ಮನೋಹರ್ 32 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 34 ರನ್‌ ಬಾರಿಸಿ ಸಿಲಂಬರಸನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್‌ ಶ್ರೀನಿವಾಸ್ ಶರತ್ 43 ರನ್‌ ಬಾರಿಸಿ ಸಿಲಂಬರಸನ್‌ಗೆ ಮೂರನೇ ಬಲಿಯಾದರು. ಇನ್ನು ಪ್ರವೀಣ್ ದುಬೆ 26 ರನ್‌ ಬಾರಿಸಿ ವಾಷಿಂಗ್ಟನ್ ಸುಂದರ್‌ಗೆ (Washington Sundar) ವಿಕೆಟ್‌ ಒಪ್ಪಿಸಿದರು. ಇನ್ನು ಬಾಲಂಗೋಚಿಗಳು ಹೆಚ್ಚು ಪ್ರತಿರೋಧ ತೋರಲಿಲ್ಲ. ಪರಿಣಾಮ ಕರ್ನಾಟಕ ತಂಡವು 39 ಓವರ್‌ಗಳಲ್ಲಿ 203 ರನ್‌ ಬಾರಿಸಿ ಸರ್ವಪತನ ಕಂಡಿತು.

ವೇಗದ ಬೌಲರ್ ಸಿಲಂಬರಸನ್‌ 36 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ವಾಷಿಂಗ್ಟನ್ ಸುಂದರ್ 3 ವಿಕೆಟ್ ಪಡೆದರು. ಇನ್ನು ಸಂದೀಪ್ ವಾರಿಯರ್, ಸಾಯಿ ಕಿಶೋರ್ ಹಾಗೂ ಮಣಿಮಾರನ್ ಸಿದ್ದಾರ್ಥ್ ತಲಾ ಒಂದೊಂದು ವಿಕೆಟ್ ಪಡೆದರು.

Tamil Nadu Won by 151 Run(s) (Qualified) Scorecard:https://t.co/8hXIxhRhgI

— BCCI Domestic (@BCCIdomestic)

Vijay Hazare Trophy: ತಮಿಳುನಾಡು ವಿರುದ್ದ ಸೇಡಿಗೆ ಸಜ್ಜಾದ ಕರ್ನಾಟಕ

ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ತಮಿಳುನಾಡು ತಂಡವು ಆರಂಭದಲ್ಲೇ ಬಾಬಾ ಅಪರಾಜಿತ್ ವಿಕೆಟ್ ಕಳೆದುಕೊಂಡಿತು. ಆದರೆ ಇದಾದ ಬಳಿಕ ಎರಡನೇ ವಿಕೆಟ್‌ಗೆ ಜಗದೀಶನ್ ಹಾಗೂ ಸಾಯಿ ಕಿಶೋರ್ ಬರೋಬ್ಬರಿ 205 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಸಾಯಿ ಕಿಶೋರ್ 61 ರನ್‌ ಬಾರಿಸಿ ಕೆ.ಸಿ. ಕರಿಯಪ್ಪಗೆ ವಿಕೆಟ್ ಒಪ್ಪಿಸಿದರು. ಮತ್ತೋರ್ವ ಆರಂಭಿಕ ಬ್ಯಾಟರ್ ಜಗದೀಶನ್ 101 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 102 ರನ್ ಬಾರಿಸಿ ಪ್ರವೀಣ್ ದುಬೆಗೆ ವಿಕೆಟ್‌ ಒಪ್ಪಿಸಿದರು. 

ಇನ್ನು ಮಧ್ಯಮ ಕ್ರಮಾಂಕದಲ್ಲಿ ಅನುಭವಿ ವಿಕೆಟ್ ಕೀಪರ್ ಬ್ಯಾಟರ್‌ ದಿನೇಶ್ ಕಾರ್ತಿಕ್ (Dinesh Karthik) ಕೇವಲ 37 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 44 ರನ್ ಬಾರಿಸಿ ವಿಕೆಟ್‌ ಒಪ್ಪಿಸಿದರು. ಇಂದ್ರಜಿತ್ 31 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ವಿಜಯ್ ಶಂಕರ್ (Vijay Shankar) ಕೇವಲ 3 ರನ್ ಬಾರಿಸಿ ಪ್ರವೀಣ್ ದುಬೆಗೆ ಮೂರನೇ ಬಲಿಯಾದರು.

ಅಬ್ಬರಿಸಿದ ಶಾರುಕ್ ಖಾನ್‌: ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಫೈನಲ್ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಕರ್ನಾಟಕ ವಿರುದ್ದವೇ ಸಿಕ್ಸರ್ ಸಿಡಿಸಿ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದ ಶಾರುಕ್ ಖಾನ್ ಮತ್ತೊಮ್ಮೆ ಮನೀಶ್ ಪಾಂಡೆ ಪಡೆಗೆ ವಿಲನ್ ಎನಿಸಿಕೊಂಡರು. ಒಂದು ಹಂತದಲ್ಲಿ 40.1 ಓವರ್‌ನಲ್ಲಿ 252 ರನ್ ಬಾರಿಸಿದ್ದ ತಮಿಳುನಾಡು ತಂಡಕ್ಕೆ ಕೊನೆಯ 10 ಓವರ್‌ನಲ್ಲಿ 103 ರನ್ ಕಲೆಹಾಕುವಲ್ಲಿ ಶಾರುಕ್ ಮಹತ್ವದ ಪಾತ್ರ ವಹಿಸಿದರು. ಕೇವಲ 39 ಎಸೆತಗಳನ್ನು ಎದುರಿಸಿದ ಶಾರುಕ್ 7 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 79 ರನ್ ಸಿಡಿಸಿ ಮಿಂಚಿದರು.

click me!