Vijay Hazare Trophy ರಾಜಸ್ಥಾನ ಬಗ್ಗುಬಡಿದು ಪ್ರೀ ಕ್ವಾರ್ಟರ್‌ ಫೈನಲ್‌ಗೇರಿದ ಕರ್ನಾಟಕ..!

By Naveen KodaseFirst Published Nov 23, 2022, 5:21 PM IST
Highlights

ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ಭರ್ಜರಿ ಪ್ರದರ್ಶನ
ಗ್ರೂಪ್ 'ಬಿ'ನಲ್ಲಿ ಅಗ್ರಸ್ಥಾನಿಯಾಗಿ ಕ್ವಾರ್ಟರ್‌ ಫೈನಲ್ ಪ್ರವೇಶ
ರಾಜಸ್ಥಾನ ಎದುರು 60 ರನ್‌ಗಳ ಜಯ ಸಾಧಿಸಿದ ಕರ್ನಾಟಕ

ಕೋಲ್ಕತಾ(ನ.23): ಯುವ ಬ್ಯಾಟರ್ ನಿಕಿನ್ ಜೋಸ್ ಹಾಗೂ ಆಲ್ರೌಂಡರ್ ಶ್ರೇಯಸ್ ಗೋಪಾಲ್ ಬಾರಿಸಿದ ಆಕರ್ಷಕ ಅರ್ಧಶತಕ ಮತ್ತು ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ರಾಜಸ್ಥಾನ ವಿರುದ್ದ 60 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಎಲೈಟ್ ಗ್ರೂಪ್ 'ಬಿ'ನಲ್ಲಿ ಅಗ್ರಸ್ಥಾನ ಪಡೆಯಿತಾದರೂ, ಗ್ರೂಪ್ ಹಂತದಲ್ಲಿ ಅಸ್ಸಾಂ ಎದುರು ಕರ್ನಾಟಕ ಸೋತಿದ್ದರಿಂದ ರಾಜ್ಯ ತಂಡವು ಪ್ರೀ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟರೆ, ಅಸ್ಸಾಂ ನೇರವಾಗಿ ಕ್ವಾರ್ಟರ್ ಫೈನಲ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.

ಕರ್ನಾಟಕ ನೀಡಿದ್ದ 209 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ರಾಜಸ್ಥಾನ ತಂಡವು ಆರಂಭದಿಂದಲೇ ರಾಜ್ಯದ ವೇಗಿಗಳ ದಾಳಿಗೆ ತತ್ತರಿಸಿ ಹೋಯಿತು. ಅಭಿಜಿತ್ ತೋಮರ್ ಕೇವಲ 10 ರನ್ ಬಾರಿಸಿ ವಿದ್ವತ್ ಕಾವೇರಪ್ಪಗೆ ವಿಕೆಟ್ ಒಪ್ಪಿಸಿದರೆ, ಮಹಿಪಾಲ್ ಲೋಮ್ರರ್ ಬ್ಯಾಟಿಂಗ್ 5 ರನ್‌ಗಳಿಗೆ ಸೀಮಿತವಾಯಿತು. ಇನ್ನು ನಾಯಕ ಅಶೋಕ್ ಮೆನಾರಿಯ(15) ಹಾಗೂ ಆದಿತ್ಯ ಗರ್ವಾಲ್(3) ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ರೋನಿತ್ ಮೋರೆ ಯಶಸ್ವಿಯಾದರು. ಒಂದು ಹಂತದಲ್ಲಿ ರಾಜಸ್ಥಾನ ತಂಡವು 66 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ 4 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಆಲೌಟ್ ಆಗುವ ಭೀತಿಗೆ ಸಿಲುಕಿತ್ತು. 

ಇನ್ನು ರಾಜಸ್ತಾನ ಪರ ಆರಂಭಿಕ ಬ್ಯಾಟರ್ ಯಶ್ ಕೊಠಾರಿ 49 ರನ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಕುನಾಲ್ ಸಿಂಗ್ ಠಾಥೋಡ್(35) ಕೆಲಕಾಲ ಕರ್ನಾಟಕ ಬೌಲರ್‌ಗಳ ಎದುರು ಪ್ರತಿರೋಧ ತೋರಿದರಾದರೂ, ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಇನ್ನು ಕೊನೆಯಲ್ಲಿ ಕಮಲೇಶ್ ನಾಗರಕೋಟಿ, ಶುಭಂ ಶರ್ಮಾ, ರವಿ ಬಿಷ್ಣೋಯಿ ಹಾಗೂ ಅಂಕಿತ್ ಚೌಧರಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ಅಂತಿಮವಾಗಿ ರಾಜಸ್ಥಾನ ತಂಡವು 41.1 ಓವರ್‌ಗಳಲ್ಲಿ ಕೇವಲ 148 ರನ್‌ಗಳಿಗೆ ಸರ್ವಪತನ ಕಂಡಿತು.

ಕರ್ನಾಟಕ ತಂಡದ ಪರ ರೋನಿತ್ ಮೋರೆ ಹಾಗೂ ಕೃಷ್ಣಪ್ಪ ಗೌತಮ್ ತಲಾ 3 ವಿಕೆಟ್ ಪಡೆದರೆ, ವಿದ್ವತ್ ಕಾವೇರಪ್ಪ ಹಾಗೂ ವಾಸುಕಿ ಕೌಶಿಕ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಕರ್ನಾಟಕ ಕ್ರಿಕೆಟ್ ತಂಡದ ಆರಂಭ ಕೂಡಾ ಅಷ್ಟೇನೂ ಉತ್ತಮವಾಗಿರಲಿಲ್ಲ. ಆರಂಭಿಕ ಬ್ಯಾಟರ್‌ಗಳಾದ ನಾಯಕ ಮಯಾಂಕ್ ಅಗರ್‌ವಾಲ್(2) ಹಾಗೂ ರವಿಕುಮಾರ್ ಸಮರ್ಥ್(6) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಯುವ ಬ್ಯಾಟರ್ ನಿಕಿನ್ ಜೋಸ್(67), ಮನೀಶ್ ಪಾಂಡೆ(21), ಶ್ರೇಯಸ್ ಗೋಪಾಲ್(57) ಹಾಗೂ ಶರತ್ ಬಿಆರ್(24) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 48.4 ಓವರ್‌ಗಳಲ್ಲಿ 10 ವಿಕೆಟ್ ಕಳೆದುಕೊಂಡು 208 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತ್ತು.

click me!