ವಿಜಯ್ ಹಜಾರೆ ಟೂರ್ನಿ: ಹ್ಯಾಟ್ರಿಕ್ ಸೆಮೀಸ್‌ ಮೇಲೆ ಕಣ್ಣಿಟ್ಟ ಕರ್ನಾಟಕ, ರಾಜ್ಯಕ್ಕೆ ಮಯಾಂಕ್, ದೇವದತ್ ಬಲ

By Naveen Kodase  |  First Published Jan 11, 2025, 8:42 AM IST

ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್‌ಫೈನಲ್‌ನಲ್ಲಿ ಕರ್ನಾಟಕ ಮತ್ತು ಬರೋಡಾ ತಂಡಗಳು ಶನಿವಾರ ಮುಖಾಮುಖಿಯಾಗಲಿವೆ. ಮಯಾಂಕ್ ಅಗರ್‌ವಾಲ್ ನೇತೃತ್ವದ ಕರ್ನಾಟಕ ತಂಡ ಸತತ 3ನೇ ಬಾರಿ ಸೆಮಿಫೈನಲ್ ಪ್ರವೇಶಿಸುವ ಗುರಿ ಹೊಂದಿದೆ.


ವಡೋದರಾ: ಈ ಬಾರಿ ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ ಕ್ವಾರ್ಟರ್ ಫೈನಲ್ ಶನಿವಾರ ಆರಂಭಗೊಳ್ಳಲಿವೆ. 4 ಬಾರಿ ಚಾಂಪಿಯನ್ ಕರ್ನಾಟಕಕ್ಕೆ ಬರೋಡಾ ಸವಾಲು ಎದುರಾಗಲಿದ್ದು, ಸತತ 3ನೇ ಬಾರಿ ಸೆಮಿಫೈನಲ್‌ ಪ್ರವೇಶಿಸುವ ಕಾತರದಲ್ಲಿದೆ. ಪಂದ್ಯಕ್ಕೆ ಇಲ್ಲಿನ ಮೋತಿಬಾಗ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಮಯಾಂಕ್‌ ಅಗರ್‌ವಾಲ್ ನಾಯಕತ್ವದ ರಾಜ್ಯ ತಂಡ ಈ ಬಾರಿ ಅಭೂತಪೂರ್ವ ಪ್ರದರ್ಶನ ತೋರಿದ್ದು, ಗುಂಪು ಹಂತದಲ್ಲಿ ಆಡಿರುವ 7 ಪಂದ್ಯ ಪೈಕಿ 6ರಲ್ಲಿ ಗೆಲುವು ಸಾಧಿಸಿ ನೇರವಾಗಿ ಕ್ವಾರ್ಟರ್ ಪ್ರವೇಶಿಸಿದೆ. ಮಯಾಂಕ್‌ ಮುಂಚೂಣಿಯಲ್ಲಿ ನಿಂತು ತಂಡವನ್ನು ನಾಕೌಟ್ ತಲುಪಿಸಿದ್ದಾರೆ. ಅವರು 7 ಪಂದ್ಯಗಳಲ್ಲಿ 4 ಶತಕ, 1 ಅರ್ಧಶತಕ ಒಳಗೊಂಡ 613 ರನ್ ಕಲೆಹಾಕಿ, ಟೂರ್ನಿಯ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ. ಸಮರ್ಥ್ ಆರ್., ಅನೀಶ್ ಕೆ.ವಿ. ಕೂಡಾ ಮಿಂಚುತ್ತಿದ್ದು, ನಿರ್ಣಾಯಕ ಪಂದ್ಯದಲ್ಲಿ ಅಬ್ಬರಿಸಬೇಕಿದೆ. ದೇವದತ್ ಪಡಿಕ್ಕಲ್ ತಂಡಕ್ಕೆ ಮರಳಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ.

Tap to resize

Latest Videos

ಏಕದಿನ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ಸ್ಮೃತಿ ಮಂಧನಾ; ಮಿಥಾಲಿ ರಾಜ್ ಅಪರೂಪದ ದಾಖಲೆ ನುಚ್ಚುನೂರು!

ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ಶ್ರೇಯಸ್ ಗೋಪಾಲ್, ವಾಸುಕಿ ಕೌಶಿಕ್ ಮೊನಚು ದಾಳಿ ಸಂಘಟಿಸುತ್ತಿದ್ದರೂ, ಇತರರಿಂದ ಸೂಕ್ತ ಬೆಂಬಲ ಸಿಗಬೇಕಿದೆ. ಪ್ರಸಿದ್ಧ ಕೃಷ್ಣ ಈ ಪಂದ್ಯದಲ್ಲಿ ಆಡಿದರೆ ಬೌಲಿಂಗ್ ಪಡೆ ಮತ್ತಷ್ಟು ಬಲಿಷ್ಠಗೊಳ್ಳಲಿದೆ. ಮತ್ತೊಂದೆಡೆ ಬರೋಡಾ ತಂಡ 'ಇ' ಗುಂಪಿನಲ್ಲಿ ಆಡಿರುವ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿದ್ದು, ನೇರವಾಗಿ ಕ್ವಾರ್ಟರ್ ಪ್ರವೇಶಿಸಿದೆ. 

ಪಂದ್ಯ ಆರಂಭ: ಬೆಳಗ್ಗೆ 9 ಗಂಟೆಗೆ

ನೇರ ಪ್ರಸಾರ: ಸ್ಪೋರ್ಟ್ 18, ಜಿಯೋ ಸಿನಿಮಾ

5ನೇ ಬಾರಿ ಮುಖಾಮುಖಿ: ಕರ್ನಾಟಕ ಹಾಗೂ ಬರೋಡಾ ಏಕದಿನ ದಲ್ಲಿ 5ನೇ ಬಾರಿ ಮುಖಾಮುಖಿಯಾಗುತ್ತಿವೆ. ಈ ವರೆಗಿನ 4 ಪಂದ್ಯಗಳಲ್ಲಿ ಇತ್ತಂಡಗಳು 2-2 ಗೆಲುವಿನ ದಾಖಲೆ ಹೊಂದಿವೆ.

ಕಳೆದೆರಡು ಬಾರಿಯೂ ಸೆಮೀಸ್‌ಗೇರಿದ್ದ ರಾಜ್ಯ

ಕರ್ನಾಟಕ ತಂಡ 2019-20ರಲ್ಲಿ ಕೊನೆ ಬಾರಿ ಚಾಂಪಿಯನ್ ಆಗಿತ್ತು. ಆ ಬಳಿಕ 4 ಆವೃತ್ತಿಗಳ ಪೈಕಿ 3ರಲ್ಲಿ ತಂಡ ಸೆಮಿಫೈನಲ್ ಪ್ರವೇಶಿಸಿದೆ. 2020-21ರಲ್ಲಿ ಸೆಮೀಸ್ ತಲುಪಿದ್ದ ತಂಡ 2021-22ರಲ್ಲಿ ಪ್ರಿ ಕ್ವಾರ್ಟರ್‌ನಲ್ಲಿ ಸೋತಿತ್ತು. 2022-23, 2023-24ರಲ್ಲಿ ಸೆಮಿಫೈನಲ್‌ನಲ್ಲೇ ಸೋತು ಹೊರಬಿದ್ದಿದೆ. 5 ವರ್ಷ ಬಳಿಕ ತಂಡ ಮತ್ತೆ ಪ್ರಶಸ್ತಿ ಗೆಲ್ಲುವ ಕಾತರದಲ್ಲಿದೆ.

ಟೀಂ ಇಂಡಿಯಾ ಮಾರಕ ವೇಗಿ ದಿಢೀರ್ ನಿವೃತ್ತಿ ಘೋಷಣೆ! RCB ವೇಗಿಯನ್ನು ಇನ್ನಿಲ್ಲದಂತೆ ಕಾಡಿದ ಗಾಯದ ಸಮಸ್ಯೆ

ಮತ್ತೊಂದು ಕ್ವಾರ್ಟರ್‌ನಲ್ಲಿ ಮಹಾರಾಷ್ಟ್ರ - ಪಂಜಾಬ್

ಶನಿವಾರ ನಡೆಯಲಿರುವ ಮತ್ತೊಂದು ಕ್ವಾರ್ಟರ್ ಫೈನಲ್ ನಲ್ಲಿ ಮಹಾರಾಷ್ಟ್ರ ಹಾಗೂ ಪಂಜಾಬ್ ತಂಡಗಳು ಮುಖಾಮುಖಿಯಾಗಲಿವೆ. ಮಹಾರಾಷ್ಟ್ರ 'ಬಿ' ಗುಂಪಿನ 7 ಪಂದ್ಯಗಳಲ್ಲಿ 6ರಲ್ಲಿ ಜಯಗಳಿಸಿ ಅಗ್ರಸ್ಥಾನ ಪಡೆದಿತ್ತು. ಪಂಜಾಬ್ 'ಸಿ' ಗುಂಪಿನಲ್ಲಿ 7 ಪಂದ್ಯಗಳ ಪೈಕಿ 6ರಲ್ಲಿ ಗೆದ್ದು 2ನೇ ಸ್ಥಾನಿಯಾಗಿದ್ದರೂ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಟೂರ್ನಿಯ ಮತ್ತೆರಡು ಕ್ವಾರ್ಟರ್ ಫೈನಲ್ ಪಂದ್ಯಗಳು ಭಾನುವಾರ ನಿಗದಿಯಾಗಿವೆ.

click me!