ವಿಜಯ್‌ ಹಜಾರೆ ಟ್ರೋಫಿ; ಕೇರಳ ಬಗ್ಗುಬಡಿದು ಸೆಮೀಸ್‌ಗೇರಿದ ಕರ್ನಾಟಕ

Suvarna News   | Asianet News
Published : Mar 08, 2021, 06:28 PM IST
ವಿಜಯ್‌ ಹಜಾರೆ ಟ್ರೋಫಿ; ಕೇರಳ ಬಗ್ಗುಬಡಿದು ಸೆಮೀಸ್‌ಗೇರಿದ ಕರ್ನಾಟಕ

ಸಾರಾಂಶ

ವಿಜಯ್ ಹಜಾರೆ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಕರ್ನಾಟಕ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕೇರಳವನ್ನು ಮಣಿಸಿ ಸೆಮಿಫೈನಲ್‌ಗೇರಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಡೆಲ್ಲಿ(ಮಾ.08): ರವಿಕುಮಾರ್ ಸಮರ್ಥ್, ದೇವದತ್ ಪಡಿಕ್ಕಲ್‌ ಆಕರ್ಷಕ ಶತಕ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ವಿಜಯ್ ಹಜಾರೆ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ 80 ರನ್‌ಗಳಿಂದ ಕೇರಳವನ್ನು ಮಣಿಸಿ ಸೆಮಿಫೈನಲ್‌ಗೇರಿದೆ.
  
ಕರ್ನಾಟಕ ನೀಡಿದ್ದ 339 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಕೇರಳ ತಂಡ 258 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಟೂರ್ನಿಯಲ್ಲಿ ತಮ್ಮ ಹೋರಾಟ ಅಂತ್ಯಗೊಳಿಸಿಕೊಂಡಿತು. ರಾಬಿನ್ ಉತ್ತಪ್ಪ(2), ರೋಹನ್‌ ಕುನ್ನಮಲ್‌(0) ರೋನಿತ್ ಮೋರೆ ದಾಳಿಗೆ ಬಹುಬೇಗನೇ ವಿಕೆಟ್‌ ಒಪ್ಪಿಸಿ ಪೆವಿಲಿಯನ್ ಸೇರಿದರು. ಮಧ್ಯಮ ಕ್ರಮಾಂಕದಲ್ಲಿ ವತ್ಸಲ್‌ ಗೋವಿಂದ(92), ಮೊಹಮ್ಮದ್ ಅಜರುದ್ದೀನ್‌(52) ಕೇರಳ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದರಾದರೂ ಈ ಜೋಡಿ ಬೇರ್ಪಡುತ್ತಿದ್ದಂತೆಯೇ ಕೇರಳ ಸೋಲಿನತ್ತ ಮುಖ ಮಾಡಿತು. 

ವೇಗಿ ರೋನಿತ್ ಮೋರೆ ಕೇವಲ 36 ರನ್‌ ನೀಡಿ 5 ವಿಕೆಟ್ ಕಬಳಿಸಿದರೆ, ಶ್ರೇಯಸ್ ಅಯ್ಯರ್, ಕೃಷ್ಣಪ್ಪ ಗೌತಮ್‌ ತಲಾ 2 ವಿಕೆಟ್‌ ಪಡೆದರೆ, ಪ್ರಸಿದ್ಧ್ ಕೃಷ್ಣ ಒಂದು ವಿಕೆಟ್ ಕಬಳಿಸುವ ಮೂಲಕ ಕೇರಳ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು.

ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಕರ್ನಾಟಕ ತಂಡಕ್ಕೆ ಆರಂಭಿಕರಾದ ದೇವದತ್ ಪಡಿಕ್ಕಲ್‌ ಹಾಗೂ ನಾಯಕ ರವಿಕುಮಾರ್ ಸಮರ್ಥ್ ಜೋಡಿ 249 ರನ್‌ಗಳ ಜತೆಯಾಟವಾಡಿದರು. ಪಡಿಕ್ಕಲ್‌ 119 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ 101 ರನ್‌ ಬಾರಿಸಿದರು. ಅಂದಹಾಗೆ ಇದು ಪ್ರಸಕ್ತ ಆವೃತ್ತಿಯ ವಿಜಯ್‌ ಹಜಾರೆ ಟೂರ್ನಿಯಲ್ಲಿ ಪಡಿಕ್ಕಲ್‌ ಬಾರಿಸಿದ ಸತತ 4ನೇ ಶತಕವಾಗಿದೆ. ಇದರೊಂದಿಗೆ ಲಿಸ್ಟ್  ಎ ಕ್ರಿಕೆಟ್‌ನಲ್ಲಿ ಸತತ 4 ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್‌ ಎನ್ನುವ ಗೌರವಕ್ಕೆ ಭಾಜನರಾದರು.

ಸತತ 4 ಶತಕ, ಪಡಿಕ್ಕಲ್‌ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಕೊಡಿ: ನೆಟ್ಟಿಗರ ಆಗ್ರಹ

ಇನ್ನು ಮತ್ತೊಂದು ತುದಿಯಲ್ಲಿ ಮಿಂಚಿನ ಬ್ಯಾಟಿಂಗ್‌ ನಡೆಸಿದ ನಾಯಕ ರವಿಕುಮಾರ್ ಸಮರ್ಥ್‌ 158 ಎಸೆತಗಳಲ್ಲಿ 22 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 192 ರನ್‌ ಬಾರಿಸಿ ಕೇವಲ 8 ರನ್‌ ಅಂತರದಲ್ಲಿ ದ್ವಿಶತಕ ವಂಚಿತರಾದರು. ಇನ್ನು ಮನೀಶ್‌ ಪಾಂಡೆ ಅಜೇಯ 34 ರನ್‌ ಬಾರಿಸುವ ತಂಡದ ಮೊತ್ತವನ್ನು ಮುನ್ನೂರರ ಗಡಿ ದಾಟಿಸುವಲ್ಲಿ ನೆರವಾದರು.

ಸಂಕ್ಷಿಪ್ತ ಸ್ಕೋರ್

ಕರ್ನಾಟಕ: 338/3
ರವಿಕುಮಾರ್ ಸಮರ್ಥ್‌: 192
ಬಾಸಿಲ್‌: 57/3

ಕೇರಳ: 258/10
ವತ್ಸಲ್‌ ಗೋವಿಂದ್‌: 92
ರೋನಿತ್ ಮೋರೆ: 36/5
(* ಕರ್ನಾಟಕ ತಂಡಕ್ಕೆ 80 ರನ್‌ಗಳ ಜಯ, ಸೆಮೀಸ್‌ಗೆ ಲಗ್ಗೆ)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?