T20 World Cup: ಜಸ್ಪ್ರೀತ್ ಬುಮ್ರಾ ಬದಲಿಗೆ ಟೀಂ ಇಂಡಿಯಾ ಕೂಡಿಕೊಂಡ ಮಾರಕ ವೇಗಿ ಮೊಹಮ್ಮದ್ ಶಮಿ..!

By Naveen KodaseFirst Published Oct 14, 2022, 5:07 PM IST
Highlights

ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಅನುಭವಿ ವೇಗಿ ಮೊಹಮ್ಮದ್ ಶಮಿಗೆ ಸ್ಥಾನ
ಜಸ್ಪ್ರೀತ್ ಬುಮ್ರಾ ಬದಲಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ಬಂಗಾಳದ ವೇಗಿ

ಮೆಲ್ಬೊರ್ನ್‌(ಅ.14): ಕಳೆದ ಕೆಲ ದಿನಗಳಿಂದ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಜಸ್ಪ್ರೀತ್ ಬುಮ್ರಾ ಬದಲಿಗೆ ಅನುಭವಿ ವೇಗಿ ಮೊಹಮ್ಮದ್ ಶಮಿ ಟೀಂ ಇಂಡಿಯಾ ಕೂಡಿಕೊಂಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶಮಿ, ಭಾರತ 15 ಆಟಗಾರರನ್ನೊಳಗೊಂಡ ತಂಡದಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬಿಸಿಸಿಐ ಈ ವಿಚಾರವನ್ನು ಖಚಿತಪಡಿಸಿದ್ದು, ವೇಗಿ ಶಮಿ, ಬ್ರಿಸ್ಬೇನ್‌ನಲ್ಲಿ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ.

ಅಖಿಲ ಭಾರತ ಸೀನಿಯರ್ ಆಯ್ಕೆ ಸಮಿತಿಯು ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಜಸ್ಪ್ರೀತ್ ಬುಮ್ರಾ ಬದಲಿ ಆಟಗಾರನ ರೂಪದಲ್ಲಿ ಮೊಹಮ್ಮದ್ ಶಮಿಯನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿದೆ. ಮೊಹಮ್ಮದ್ ಶಮಿ ಈಗಾಗಲೇ ಆಸ್ಟ್ರೇಲಿಯಾ ತಲುಪಿದ್ದು, ಅಭ್ಯಾಸ ಪಂದ್ಯಕ್ಕೂ ಮುನ್ನ ಬ್ರಿಸ್ಬೇನ್‌ನಲ್ಲಿ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

🚨 NEWS 🚨: Shami replaces Bumrah In India’s ICC Men’s T20 World Cup Squad. |

Details 🔽https://t.co/nVovMwmWpI

— BCCI (@BCCI)

ಇನ್ನು ಟೀಂ ಇಂಡಿಯಾ ಮೀಸಲು ಆಟಗಾರರಾಗಿ ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಜ್ ಹಾಗೂ ಬೌಲಿಂಗ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಕೂಡಾ ಸ್ಥಾನ ಪಡೆದಿದ್ದಾರೆ. 

ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ಬೆನ್ನು ನೋವಿನ ಸಮಸ್ಯೆಯಿಂದಾಗಿ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಭಾರತ ತಂಡದಿಂದ ಹೊರಬಿದ್ದಿದ್ದು, ರೋಹಿತ್ ಶರ್ಮಾ ಪಡೆಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತ್ತು. ಸಾಕಷ್ಟು ಬಿಡುವಿನ ಬಳಿಕ ಆಸ್ಟ್ರೇಲಿಯಾ ವಿರುದ್ದದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಕೂಡಿಕೊಂಡಿದ್ದ ಬುಮ್ರಾ, ಕೇವಲ ಎರಡು ಪಂದ್ಯಗಳನ್ನಷ್ಟೇ ಆಡಿದ್ದರು. ಆದರೆ ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಗೂ ಮುನ್ನ ಮತ್ತೆ ಫಿಟ್ನೆಸ್ ಸಮಸ್ಯೆ ಎದುರಿಸಿದ ಬುಮ್ರಾ, ಟಿ20 ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದರು.

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾವು, ಜಸ್ಪ್ರೀತ್ ಬುಮ್ರಾ ಬದಲಿ ಆಟಗಾರನನ್ನು ಹೆಸರಿಸದೇ ಆಸ್ಟ್ರೇಲಿಯಾಗೆ ವಿಮಾನವೇರಿತ್ತು. ಜಸ್ಪ್ರೀತ್ ಬುಮ್ರಾ ಬದಲಿಗೆ ದೀಪಕ್ ಚಹರ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಇಲ್ಲವೇ ಶಾರ್ದೂಲ್ ಠಾಕೂರ್ ಭಾರತ ತಂಡದಲ್ಲಿ ಸ್ಥಾನ ಪಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಫಿಟ್ನೆಸ್ ಕಾರಣದಿಂದ ದೀಪಕ್ ಚಹರ್ ಕೂಡಾ ಟೀಂ ಇಂಡಿಯಾದಿಂದ ಹೊರಬಿದ್ದಿದ್ದರು. ಹೀಗಾಗಿ ಸಿರಾಜ್, ಶಮಿ ಹಾಗೂ ಠಾಕೂರ್ ನಡುವೆ ಪೈಪೋಟಿ ಏರ್ಪಟ್ಟಿತ್ತು.

ಈ ಮೊದಲು ಮೊಹಮ್ಮದ್ ಶಮಿ, ಟಿ20 ವಿಶ್ವಕಪ್‌ ಟೂರ್ನಿಗೆ ಭಾರತ ಮೀಸಲು ಆಟಗಾರರಾಗಿ ಸ್ಥಾನ ಪಡೆದಿದ್ದರು. ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಇಂಗ್ಲೆಂಡ್ ಎದುರಿನ ಸರಣಿಗೆ ಮೊಹಮ್ಮದ್ ಶಮಿಗೆ ಭಾರತ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಆದರೆ ಇಂಗ್ಲೆಂಡ್ ಎದುರಿನ ಮೂರು ಪಂದ್ಯಗಳ ಸರಣಿಗೂ ಮುನ್ನ ಮೊಹಮ್ಮದ್ ಶಮಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದರಿಂದ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಎದುರಿನ ಸರಣಿಯಿಂದ ಹೊರಬಿದ್ದಿದ್ದರು.

T20 World Cup ಟೂರ್ನಿಯಿಂದ ದೀಪಕ್ ಚಹರ್ ಔಟ್; ಶಮಿ/ಸಿರಾಜ್/ಶಾರ್ದೂಲ್ ಮೂವರಲ್ಲಿ ಯಾರಿಗೆ ಸಿಗಲಿದೆ ಸ್ಥಾನ?

ತೀರಾ ಅಚ್ಚರಿ ಎನ್ನುವಂತೆ ಅನುಭವಿ ವೇಗಿ ಮೊಹಮ್ಮದ್ ಶಮಿ, ಕಳೆದ ವರ್ಷ ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಕಳೆದೊಂದು ವರ್ಷದಲ್ಲಿ ಭಾರತ ಪರ ಒಂದೇ ಒಂದು ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿರಲಿಲ್ಲ. ಆದರೆ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಮೊಹಮ್ಮದ್ ಶಮಿ ತನ್ನದೇ ಆದ ಪಾತ್ರ ನಿಭಾಯಿಸಿದ್ದರು. 

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ, ಅಕ್ಟೋಬರ್ 23ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಮೆಲ್ಬೊರ್ನ್ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿದೆ. ಭಾರತ ಕ್ರಿಕೆಟ್ ತಂಡವು ಸೂಪರ್ 12 ಹಂತದಲ್ಲಿ ಗ್ರೂಪ್ 2ನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಭಾರತ, ಪಾಕಿಸ್ತಾನ ಮಾತ್ರವಲ್ಲದೇ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಗ್ರೂಪ್ 'ಎ' ರನ್ನರ್ ಅಪ್, ಗ್ರೂಪ್ 'ಬಿ' ವಿನ್ನರ್ ತಂಡಗಳು ಇರಲಿವೆ.

ಟಿ20 ವಿಶ್ವಕಪ್ ವಿಶ್ವಕಪ್‌ ಟೂರ್ನಿಗೆ ಪರಿಷ್ಕೃತ ಭಾರತ ಕ್ರಿಕೆಟ್ ತಂಡ ಹೀಗಿದೆ ನೋಡಿ

ರೋಹಿತ್ ಶರ್ಮಾ(ನಾಯಕ), ಕೆ ಎಲ್ ರಾಹುಲ್(ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್(ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆರ್ಶದೀಪ್ ಸಿಂಗ್, ಮೊಹಮ್ಮದ್ ಶಮಿ.

click me!