Harbhajan Singh : ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಸ್ಟಾರ್ ಸ್ಪಿನ್ನರ್..!

Suvarna News   | Asianet News
Published : Dec 24, 2021, 03:31 PM ISTUpdated : Dec 24, 2021, 03:54 PM IST
Harbhajan Singh : ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಸ್ಟಾರ್ ಸ್ಪಿನ್ನರ್..!

ಸಾರಾಂಶ

* ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ ಹರ್ಭಜನ್ ಸಿಂಗ್ * ಭಾರತ ಕ್ರಿಕೆಟ್ ಕಂಡ ದಿಗ್ಗಜ ಸ್ಪಿನ್ನರ್‌ಗಳಲ್ಲಿ ಹರ್ಭಜನ್ ಸಿಂಗ್ ಕೂಡಾ ಒಬ್ಬರು * ಸಾಮಾಜಿಕ ಜಾಲತಾಣದ ಮೂಲಕ ನಿವೃತ್ತಿ ಘೋಷಣೆ ಮಾಡಿದ ಆಫ್‌ ಸ್ಪಿನ್ನರ್

ನವದೆಹಲಿ(ಡಿ.24): ಭಾರತ ಕ್ರಿಕೆಟ್ ತಂಡದ (Indian Cricket Team) ಅನುಭವಿ ಸ್ಪಿನ್ನರ್‌ ಹರ್ಭಜನ್ ಸಿಂಗ್‌ (Harbhajan Singh) ಶುಕ್ರವಾರವಾದ ಇಂದು(ಡಿ.24) ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ (Retirement) ಘೋಷಿಸಿದ್ದಾರೆ. ಆಫ್‌ ಸ್ಪಿನ್ನರ್ ಹರ್ಭಜನ್ ಸಿಂಗ್ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇನ್ನು ತಾವು ಈಗ ನಿವೃತ್ತಿ ಪಡೆಯಲು ನಿರ್ಧರಿಸಿದ್ದೇಕೆ ಎನ್ನುವುದನ್ನು ವಿಡಿಯೋ ಮೂಲಕ ವಿವರಣೆ ನೀಡಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಹಾಗೂ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಭಜ್ಜಿ ವರ್ಣರಂಜಿತ ಕ್ರಿಕೆಟ್ ಬದುಕು ಅಂತ್ಯವಾಗಿದೆ.

ವಿವಿಧ ರೀತಿಯಲ್ಲಿ ನಾನೀಗಾಗಲೇ ಕ್ರಿಕೆಟ್‌ನಿಂದ ನಿವೃತ್ತನಾಗಿದ್ದೇನೆ. ಆದರೆ ಐಪಿಎಲ್ ತಂಡವಾದ ಕೋಲ್ಕತ ನೈಟ್‌ ರೈಡರ್ಸ್(Kolkata Knight Riders) ಜತೆ ಒಪ್ಪಂದ ಮಾಡಿಕೊಂಡಿದ್ದರಿಂದ ನನ್ನ ನಿವೃತ್ತಿ ಘೋಷಣೆಯನ್ನು ತಡವಾಗಿ ಮಾಡಬೇಕಾಗಿ ಬಂತು ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ. ಜೀವನದ ಒಂದು ಘಟ್ಟದಲ್ಲಿ ನಾವು ಕೆಲವೊಂದು ಕಠಿಣ ತೀರ್ಮಾನವನ್ನು ತೆಗೆದುಕೊಳ್ಳಬೇಕಾಗುತ್ತದೆ. ನಾನು ಈ ಹಿಂದೆಯೇ ನಿವೃತ್ತಿಯನ್ನು ಘೋಷಿಸಬೇಕು ಎಂದುಕೊಂಡಿದ್ದೆ. ಆದರೆ ಸರಿಯಾದ ಸಮಯಕ್ಕಾಗಿ ಕಾಯುತ್ತಿದೆ. ನಾನಿಂದು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದೇನೆ. ಕ್ರಿಕೆಟಿಗನಾಗಿ ನಾನು ಈಗಾಗಲೇ ಒಂದು ರೀತಿ ನಿವೃತ್ತಿಯಾಗಿದ್ದೆ, ಆದರೆ ಅಧಿಕೃತ ಘೋಷಣೆ ಮಾಡಿರಲಿಲ್ಲ ಎಂದಿದ್ದಾರೆ.

ಸಾಕಷ್ಟು ಸಮಯದಿಂದ ನಾನು ಕ್ರಿಕೆಟ್‌ನಲ್ಲಿ ಸಕ್ರಿಯವಾಗಿಲ್ಲ. ನಾನು ಕೋಲ್ಕತ ನೈಟ್‌ ರೈಡರ್ಸ್ ಜತೆ ಒಪ್ಪಂದ ಮಾಡಿಕೊಂಡಿದ್ದರಿಂದ 2021ರ ಐಪಿಎಲ್‌ನಲ್ಲಿ ಕೆಕೆಆರ್ ಜತೆ ಕಳೆಯಬೇಕಾಯಿತು. ಐಪಿಎಲ್ ವೇಳೆಯಲ್ಲಿಯೇ ನಾನು ನಿವೃತ್ತಿ ಪಡೆಯಬೇಕು ಎಂದು ಮನಸ್ಸಿನಲ್ಲಿ ಬಂದಿತ್ತು ಎಂದು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಪರ ಹ್ಯಾಟ್ರಿಕ್‌ ವಿಕೆಟ್‌ ಕಬಳಿಸಿದ ಮೊದಲ ಬೌಲರ್ ಎನ್ನುವ ಕೀರ್ತಿಗೆ ಭಾಜನರಾಗಿರು ಭಜ್ಜಿ ಹೇಳಿದ್ದಾರೆ.

ಸತತ ಗೆಲುವಿನ ಮೂಲಕ ಬೀಗುತ್ತಿದ್ದ ಸ್ಟೀವ್ ವಾ ನೇತೃತ್ವದ ಆಸ್ಟ್ರೇಲಿಯಾ ತಂಡ (Australian Cricket Team) ಭಾರತ ಪ್ರವಾಸ ಕೈಗೊಂಡಿದ್ದಾಗ, ಕಾಂಗರೂಗಳ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌ ಹಾಕುವಲ್ಲಿ ಹರ್ಭಜನ್ ಸಿಂಗ್ ಮಹತ್ವದ ಪಾತ್ರ ನಿಭಾಯಿಸಿದ್ದರು. 2001ರ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ದ ಹರ್ಭಜನ್ ಸಿಂಗ್ ಹ್ಯಾಟ್ರಿಕ್ ವಿಕೆಟ್ ಸಹಿತ 32 ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಕೋಲ್ಕತದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಹರ್ಭಜನ್ ಸಿಂಗ್ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದರು.

Ind vs SA: ಧೋನಿ ಹೆಸರಿನಲ್ಲಿರುವ ಅಪರೂಪದ ದಾಖಲೆ ಮುರಿಯಲು ಸಜ್ಜಾದ ರಿಷಭ್ ಪಂತ್..!

ಹರ್ಭಜನ್ ಸಿಂಗ್ ತಾವು 17 ವರ್ಷದವರಾಗಿದ್ದಾಗ 1998ರಲ್ಲಿ ಆಸ್ಟ್ರೇಲಿಯಾ ವಿರುದ್ದ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ ಭಾರತ 103 ಟೆಸ್ಟ್ ಪಂದ್ಯಗಳನ್ನಾಡಿ 417 ವಿಕೆಟ್ ಕಬಳಿಸುವ ಮೂಲಕ, ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಇನ್ನು ಹರ್ಭಜನ್ ಸಿಂಗ್ ಭಾರತ ಪರ 236 ಏಕದಿನ ಪಂದ್ಯಗಳಿಂದ 269 ವಿಕೆಟ್ ಹಾಗೂ 28 ಟಿ20 ಪಂದ್ಯಗಳಿಂದ 25 ವಿಕೆಟ್ ಕಬಳಿಸಿದ್ದಾರೆ.

ಸೌರವ್ ಗಂಗೂಲಿ (Sourav Ganguly) ನಾಯಕರಾಗಿದ್ದಾಗ, ಹರ್ಭಜನ್ ಸಿಂಗ್ ತವರಿನಲ್ಲಿ ಹಾಗೂ ತವರಿನಾಚೆ ಟೀಂ ಇಂಡಿಯಾದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. ಎರಡು ಬಾರಿ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯವನ್ನಾಡಿದ ಕೆಲವೇ ಕೆಲವು ಭಾರತೀಯ ಆಟಗಾರರಲ್ಲಿ ಹರ್ಭಜನ್ ಸಿಂಗ್ (Anil Kumble) ಕೂಡಾ ಒಬ್ಬರಾಗಿದ್ದಾರೆ. ಹರ್ಭಜನ್ ಸಿಂಗ್ ತವರಿನಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ನಂ.1 ಸ್ಥಾನಕ್ಕೇರಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಹರ್ಭಜನ್ ಸಿಂಗ್ ಹಾಗೂ ಅನಿಲ್ ಕುಂಬ್ಳೆ ಜೋಡಿ ಭಾರತಕ್ಕೆ ಹಲವಾರು ಸ್ಮರಣೀಯ ಟೆಸ್ಟ್‌ ಗೆಲುವುಗಳನ್ನು ತಂದುಕೊಟ್ಟಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್