Shikhar Dhawan: ವಿಂಡೀಸ್ ಎದುರಿನ ಸರಣಿಗೆ ಭಾರತ ತಂಡ ಪ್ರಕಟ, ಧವನ್‌ಗೆ ನಾಯಕ ಪಟ್ಟ..!

Published : Jul 06, 2022, 04:27 PM ISTUpdated : Jul 06, 2022, 04:59 PM IST
Shikhar Dhawan: ವಿಂಡೀಸ್ ಎದುರಿನ ಸರಣಿಗೆ ಭಾರತ ತಂಡ ಪ್ರಕಟ, ಧವನ್‌ಗೆ ನಾಯಕ ಪಟ್ಟ..!

ಸಾರಾಂಶ

* ವೆಸ್ಟ್ ಇಂಡೀಸ್ ಎದುರಿನ ಏಕದಿನ ಸರಣಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ * 16 ಆಟಗಾರರನ್ನೊಳಗೊಂಡ ಭಾರತ ಕ್ರಿಕೆಟ್ ತಂಡಕ್ಕೆ ಶಿಖರ್ ಧವನ್ ನಾಯಕ * ಜುಲೈ 22ರಿಂದ ಆರಂಭವಾಗಲಿದೆ ಭಾರತ-ವೆಸ್ಟ್ ಇಂಡೀಸ್ ಏಕದಿನ ಸರಣಿ

ಮುಂಬೈ(ಜು.06): ಭಾರತ ಕ್ರಿಕೆಟ್ ತಂಡವು ಜುಲೈ ತಿಂಗಳಾಂತ್ಯದಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು, ಜುಲೈ 22ರಿಂದ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಈ ಸರಣಿಗೆ ಭಾರತ ಕ್ರಿಕೆಟ್ ತಂಡ ಪ್ರಕಟಿಸಲಾಗಿದ್ದು, ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್‌ಗೆ ನಾಯಕ ಪಟ್ಟ ಕಟ್ಟಲಾಗಿದೆ. ಟ್ರಿನಿಡ್ಯಾಡ್‌ನ ಪೋರ್ಟ್‌ ಆಫ್‌ ಸ್ಪೇನ್‌ನಲ್ಲಿ ಮೊದಲ ಏಕದಿನ ಪಂದ್ಯ ಜರುಗಲಿದೆ. ಜುಲೈ 22ರಿಂದ ಜುಲೈ 27ರವರೆಗೆ ಮೂರು ಪಂದ್ಯಗಳ ಏಕದಿನ ಸರಣಿಯು ಜರುಗಲಿದೆ.

ವೆಸ್ಟ್ ಇಂಡೀಸ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡದ ಕಾಯಂ ನಾಯಕ ರೋಹಿತ್ ಶರ್ಮಾ (Rohit Sharma), ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ (Virat Kohli), ಜಸ್ಪ್ರೀತ್ ಬುಮ್ರಾ (Jasprit Bumrah), ಹಾರ್ದಿಕ್ ಪಾಂಡ್ಯ ಹಾಗೂ ರಿಷಭ್ ಪಂತ್‌ಗೆ (Rishabh Pant) ವಿಶ್ರಾಂತಿ ನೀಡಲಾಗಿದೆ. ಬಿಸಿಸಿಐ (BCCI) ಆಯ್ಕೆ ಸಮಿತಿಯು 16 ಆಟಗಾರರನ್ನೊಳಗೊಂಡ ಭಾರತ ಕ್ರಿಕೆಟ್ ತಂಡವನ್ನು ಈ ಸರಣಿಗೆ ಆಯ್ಕೆ ಮಾಡಿದೆ. ವೆಸ್ಟ್ ಇಂಡೀಸ್ ಎದುರಿನ ಏಕದಿನ ಸರಣಿಗೆ ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್ ಹಾಗೂ ಶುಭ್‌ಮನ್‌ ಗಿಲ್‌ಗೆ ಮಣೆ ಹಾಕಲಾಗಿದೆ. ಆದರೆ ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುತ್ತಾ ಬಂದಿರುವ ಮುಂಬೈ ಮೂಲದ ಪೃಥ್ವಿ ಶಾ ಅವರನ್ನು ಮತ್ತೊಮ್ಮೆ ಕಡೆಗಣಿಸಲಾಗಿದೆ. ಇನ್ನುಳಿದಂತೆ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್ ರೂಪದಲ್ಲಿ ಸಂಜು ಸ್ಯಾಮ್ಸನ್ ಹಾಗೂ ಇಶಾನ್‌ ಕಿಶನ್‌ಗೆ ಭಾರತ ತಂಡದಲ್ಲಿ ಸ್ಥಾನ ನೀಡಲಾಗಿದೆ.

ಇನ್ನುಳಿದಂತೆ ಐರ್ಲೆಂಡ್ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಸ್ಪೋಟಕ ಶತಕ ಚಚ್ಚಿದ್ದ ದೀಪಕ್ ಹೂಡಾಗೆ ಮತ್ತೆ ಏಕದಿನ ತಂಡಕ್ಕೆ ಬುಲಾವ್ ಬಂದಿದೆ. ಇನ್ನು ಐಪಿಎಲ್ ಬಳಿಕ ಸತತ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವ ರಿಷಭ್ ಪಂತ್‌ಗೆ ವಿಂಡೀಸ್ ಎದುರಿನ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಇನ್ನುಳಿದಂತೆ ಅನುಭವಿ ವೇಗಿಗಳಾದ ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್‌ಗೂ ವಿಶ್ರಾಂತಿ ನೀಡಲಾಗಿದೆ.

Ind vs Eng ಸೀಮಿತ ಓವರ್‌ಗಳ ಸರಣಿ: ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದಿರಲೇಬೇಕಾದ ಸಂಗತಿಗಳಿವು

ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಪೋರ್ಟ್ ಆಫ್‌ ಸ್ಪೇನ್‌ನಲ್ಲಿಯೇ ನಡೆಯಲಿವೆ. ಏಕದಿನ ಸರಣಿ ಮುಕ್ತಾಯದ ಬಳಿಕ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು 5 ಪಂದ್ಯಗಳ ಟಿ20 ಸರಣಿಯನ್ನಾಡಲಿದ್ದು, ಈ ಸರಣಿಯು ಕೆರಿಬಿಯನ್ ಹಾಗೂ ಅಮೆರಿಕದಲ್ಲಿ ನಡೆಯಲಿದ್ದು, ಚುಟುಕು ಕ್ರಿಕೆಟ್ ಸರಣಿಗೆ ಇನ್ನೂ ಭಾರತ ತಂಡವನ್ನು ಪ್ರಕಟಿಸಿಲ್ಲ. ಕಳೆದ ವರ್ಷ ಟೀಂ ಇಂಡಿಯಾ, ಶಿಖರ್ ಧವನ್ ನಾಯಕತ್ವದಲ್ಲಿ ಶ್ರೀಲಂಕ ಪ್ರವಾಸವನ್ನು ಕೈಗೊಂಡಿತ್ತು.

ವೆಸ್ಟ್ ಇಂಡೀಸ್ ಎದುರಿನ ಏಕದಿನ ಸರಣಿಗೆ ಭಾರತ ತಂಡ ಹೀಗಿದೆ ನೋಡಿರ

ಶಿಖರ್ ಧವನ್(ನಾಯಕ), ಋತುರಾಜ್ ಗಾಯಕ್ವಾಡ್, ಶುಭ್‌ಮನ್‌ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್(ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ(ಉಪನಾಯಕ), ಶಾರ್ದೂಲ್ ಠಾಕೂರ್, ಯುಜುವೇಂದ್ರ ಚಹಲ್, ಅಕ್ಷರ್ ಪಟೇಲ್, ಆವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಆರ್ಶದೀಪ್ ಸಿಂಗ್.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!