
ನ್ಯೂ ಚಂಡೀಗಢ: ಐಪಿಎಲ್ 2026ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ 15 ವರ್ಷದ ಓಪನರ್ ವೈಭವ್ ಸೂರ್ಯವಂಶಿ ಆಟ ಕೇವಲ ಒಂದು ಅಚ್ಚರಿಯಲ್ಲ, ಬದಲಿಗೆ ಪಂದ್ಯದ ದಿಕ್ಕನ್ನೇ ಬದಲಿಸೋ ಶಕ್ತಿಯಾಗಿ ಮಾರ್ಪಟ್ಟಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಮ್ಯಾಚ್‌ನಲ್ಲಿ ಕೇವಲ 16 ಬಾಲ್‌ನಲ್ಲಿ 43 ರನ್ ಚಚ್ಚಿದ ಸೂರ್ಯವಂಶಿ ಆಟ 'ಸಿನಿಮಾ ನೋಡಿದ ಹಾಗೆ ಇತ್ತು' ಅಂತ ಮಾಜಿ ಆಟಗಾರ ಚೇತೇಶ್ವರ್ ಪೂಜಾರ ಹೊಗಳಿದ್ದಾರೆ. ಪಂಜಾಬ್ ನೀಡಿದ್ದ 223 ರನ್‌ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್‌ಗೆ, ಪವರ್‌ಪ್ಲೇನಲ್ಲಿ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ ದೊಡ್ಡ ಕಾನ್ಫಿಡೆನ್ಸ್ ಕೊಟ್ಟಿತ್ತು.
ಐದು ಸಿಕ್ಸರ್‌ಗಳನ್ನು ಒಳಗೊಂಡಿದ್ದ ಈ ಇನ್ನಿಂಗ್ಸ್‌ನಲ್ಲಿ ಅವರ ಸ್ಟ್ರೈಕ್ ರೇಟ್ 268.75 ಆಗಿತ್ತು. ಇದಾದ ಬೆನ್ನಲ್ಲೇ ಪೂಜಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಮಾಡೋದನ್ನು ನೋಡೋದು ಒಂದು ರೀತಿ ಒಂದು ಸಿನಿಮಾ ನೋಡಿದ ಹಾಗೆ. ಯಾವುದೇ ಭಯವಿಲ್ಲದೆ ಬೌಲರ್‌ಗಳನ್ನು ಎದುರಿಸುವ ರೀತಿ ಅದ್ಭುತ. ಬಾಲ್ ನೋಡ್ತಾನೆ, ಹೊಡೀತಾನೆ. ಎದುರಾಳಿಗಳಿಗೆ ಇವನು ಅಟ್ಯಾಕ್ ಮಾಡ್ತಾನೆ ಅಂತಾ ಗೊತ್ತಿದ್ದರೂ, ಅದನ್ನು ತಡೆಯೋಕೆ ಅವರಿಂದ ಆಗ್ತಿಲ್ಲ ಅನ್ನೋದೇ ವಿಶೇಷ' ಎಂದು ಪೂಜಾರ ಹೇಳಿದ್ದಾರೆ.
ಪಂಜಾಬ್ ಕಿಂಗ್ಸ್ ದೊಡ್ಡ ಸ್ಕೋರ್ ಮಾಡಿ ಸುಲಭವಾಗಿ ಗೆಲ್ಲುತ್ತೆ ಅಂದುಕೊಂಡಿದ್ದ ಜಾಗದಲ್ಲಿ, ಸೂರ್ಯವಂಶಿ ಆಟದ ಗತಿಯನ್ನೇ ಬದಲಿಸಿದರು. ಪವರ್‌ಪ್ಲೇನಲ್ಲೇ ಪಂಜಾಬ್ ಬೌಲಿಂಗ್ ಪ್ಲಾನ್‌ಗಳನ್ನು ಅವರು ಬುಡಮೇಲು ಮಾಡಿದರು. ಇದು ನಂತರ ಬಂದ ಬ್ಯಾಟ್ಸ್‌ಮನ್‌ಗಳಿಗೆ ಕೆಲಸವನ್ನು ಸುಲಭ ಮಾಡಿತು. ವೈಭವ್ ಜೊತೆಗೆ ಓಪನಿಂಗ್‌ನಲ್ಲಿ ಯಶಸ್ವಿ ಜೈಸ್ವಾಲ್ (ಈ ಸೀಸನ್‌ನಲ್ಲಿ 306 ರನ್) ಕೂಡಾ ಉತ್ತಮ ಫಾರ್ಮ್‌ನಲ್ಲಿರುವುದು ರಾಜಸ್ಥಾನ ತಂಡಕ್ಕೆ ದೊಡ್ಡ ಬಲ ನೀಡಿದೆ.
19ನೇ ಸೀಸನ್ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಲಯದಲ್ಲಿರುವ 15 ವರ್ಷದ ವೈಭವ್ ಸೂರ್ಯವಂಶಿ ಈಗಾಗಲೇ ನಾನೂರ ರನ್ ಕಲೆಹಾಕುವ ಮೂಲಕ ಆರೆಂಜ್ ಕ್ಯಾಪ್ ಗೆಲ್ಲುವ ನೆಚ್ಚಿನ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ರಾಜಸ್ಥಾನ ರಾಯಲ್ಸ್ ಪರ ಇದುವರೆಗೂ 9 ಪಂದ್ಯಗಳನ್ನಾಡಿರುವ ವೈಭವ್ ಸೂರ್ಯವಂಶಿ 44.44ರ ಬ್ಯಾಟಿಂಗ್ ಸರಾಸರಿಯಲ್ಲಿ 238.10 ಸ್ಟ್ರೈಕ್‌ರೇಟ್‌ನಲ್ಲಿ 400 ರನ್ ಸಿಡಿಸಿದ್ದಾರೆ. ಈ ಮೂಲಕ ಈ ಸೀಸನ್ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಅಭಿಷೇಕ್ ಶರ್ಮಾ 425 ರನ್ ಹಾಗೂ ಹೆನ್ರಿಚ್ ಕ್ಲಾಸೆನ್ 414 ರನ್ ಮಾತ್ರ ವೈಭವ್‌ಗಿಂತ ಮುಂದಿದ್ದಾರೆ.
ಇನ್ನೊಂದೆಡೆ, ಪಂಜಾಬ್ ಪರ ಯಜುವೇಂದ್ರ ಚಹಲ್ ಉತ್ತಮ ಪ್ರದರ್ಶನ ನೀಡಿದರು. ಮೂರು ವಿಕೆಟ್ ಪಡೆದು ಪಂಜಾಬ್ ತಂಡವನ್ನು ಮ್ಯಾಚ್‌ಗೆ ವಾಪಸ್ ತರಲು ಚಹಲ್ ಪ್ರಯತ್ನಿಸಿದರೂ ಹೀಗಿದ್ದೂ ರಾಜಸ್ಥಾನ ಗೆಲುವು ಸಾಧಿಸಿತು. ಚೆಂಡಿನ ವೇಗದಲ್ಲಿ ಬದಲಾವಣೆ ಮಾಡಿ, ಧೈರ್ಯದಿಂದ ಬಾಲ್ ಫ್ಲೈಟ್ ಮಾಡಿದ ಚಹಲ್ ಬೌಲಿಂಗ್ ಬಗ್ಗೆಯೂ ಪೂಜಾರ ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.