
ಮ್ಯಾಂಚೆಸ್ಟರ್ (ಜು.04) ಟೀಂ ಇಂಡಿಯಾ ಟಿ20 ಸೋಲಿನ ಸರಣಿ ಮುಂದುವರಿದಿದೆ. ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ ಎಂದೇ ಹೇಳಲಾಗಿತ್ತು. ಜೊತೆಗೆ ವೈಭವ್ ಸೂರ್ಯವಂಶಿ ವಿಶ್ವದಾಖಲೆಯ ಪಾದಾರ್ಪಣೆ ಭಾರತ ತಂಡಕ್ಕೆ ಮತ್ತಷ್ಟು ಶಕ್ತಿ ತುಂಬಿತ್ತು. ಆದರೆ ಫಲಿತಾಂಶ ಬದಲಾಗಲಿಲ್ಲ. ಇಂಗ್ಲೆಂಡ್ ವಿರುದ್ದದ 2ನೇ ಟಿ20 ಪಂದ್ಯದಲ್ಲಿ ಭಾರತ ಮುಗ್ಗರಿಸಿದೆ. ಜೇಕಬ್ ಬೆತಲ್ ಅಬ್ಬರಕ್ಕೆ ಭಾರತ ಸೋಲಿಗೆ ಶರಣಾಗಿದೆ. ಐರ್ಲೆಂಡ್ ವಿರುದ್ದ ಸರಣಿ ಸೋತ ಭಾರತ ಇದೀಗ ಇಂಗ್ಲೆಂಡ್ ವಿರುದ್ದ 2ನೇ ಟಿ20 ಪಂದ್ಯದಲ್ಲಿ ಸೋಲು ಕಂಡಿದೆ.
ಭಾರತ ನೀಡಿದ 191 ರನ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಇಂಗ್ಲೆಂಡ್ ತಂಡಕ್ಕೆ ಆರಂಭದಲ್ಲೇ ಅರ್ಶದೀಪ್ ಸಿಂಗ್ ಶಾಕ್ ನೀಡಿದ್ದರು. ಮೊದಲ ಎಸೆತದಲ್ಲಿ ವಿಕೆಟ್ ಕಬಳಿಸಿ ಇಂಗ್ಲೆಂಡ್ ಆತ್ಮವಿಶ್ವಾಸವನ್ನೇ ಕುಗ್ಗಿಸಿದ್ದರು. ಇಬ್ಬರು ಆರಂಭಿಕರನ್ನು ಅರ್ಶದೀಪ್ ಔಟ್ ಮಾಡಿದರು. ಫಿಲ್ ಸಾಲ್ಟ್ ಹಾಗೂ ಜೋಸ್ ಬಟ್ಲರ್ ಇಬ್ಬರೂ ಶೂನ್ಯ ಸುತ್ತಿದರು.
ನಾಯಕ ಹ್ಯಾರಿ ಬ್ರೂಕ್ ಹಾಗೂ ಜೇಕಬ್ ಬೆತೆಲ್ ಹೋರಾಟದಿಂದ ಇಂಗ್ಲೆಂಡ್ ಚೇತರಿಸಿಕೊಂಡಿತು. ಈ ಜೊತೆಯಾಟ ಇಂಗ್ಲೆಂಡ್ ತಂಡ ಪಂದ್ಯದಲ್ಲಿ ಮತ್ತೆ ಹಿಡಿತ ಸಾಧಿಸುವ ಸೂಚನೆ ನೀಡಿತು. ಆದರೆ ಇವರ ಜೊತೆಯಾಕ್ಕೆ ಅಕ್ಸರ್ ಪಟೇಲ್ ಬ್ರೇಕ್ ಹಾಕಿದರು. ಹ್ಯಾರಿ ಬ್ರೂಕ್ 39 ರನ್ ಸಿಡಿಸಿ ಔಟಾದರು. ಆದರೆ ಬೆತೆಲ್ ಹೋರಾಟ ಮುಂದುವರಿಸಿದರು. ಟಾಮ್ ಬ್ಯಾಂಟನ್ ಹಾಗೂ ಬೆತೆಲ್ ಹೋರಾಟ ಇಂಗ್ಲೆಂಡ್ ಆತ್ಮವಿಶ್ವಾಸ ಹೆಚ್ಚಿಸಿತು. ಈ ಜೊತೆಯಾಟ ಭಾರತಕ್ಕೆ ಅಪಾಯಕಾರಿಯಾಗಿ ಪರಿಣಮಿಸಿತ್ತು. ಮತ್ತೆ ದಾಳಿ ಸಂಘಟಿಸಿದ ಅರ್ಶದೀಪ್ ಬ್ಯಾಂಟನ್ ವಿಕೆಟ್ ಕಬಳಿಸಿದರು. ಬ್ಯಾಂಟನ್ 39 ರನ್ ಸಿಡಿಸಿದರು.
ಜೇಕಬ್ ಬೆತಲ್ ಹೋರಾಟ ಇಂಗ್ಲೆಂಡ್ ತಂಡಕ್ಕೆ ಆಸರೆಯಾಯಿತು. ಬೆತೆಲ್‌ಗೆ ಸ್ಯಾಮ್ ಕುರನ್ ಸಾಥ್ ನೀಡಿದರು. ಅಂತಿಮ ಹಂತದಲ್ಲಿ ಪಂದ್ಯ ರೋಚಕ ಘಟ್ಟ ತಲುಪಿತ್ತು.17ನೇ ಓವರ್‌ನಲ್ಲಿ ಬೌಂಡರಿ ಹಾಗೂ ಸಿಕ್ಸರ್ ಪಂದ್ಯದ ಗತಿ ಬದಲಿಸಿತು.
ರವಿ ಬಿಶ್ನೋಯ್ ಒಂದೇ ಓವರ್‌ನಲ್ಲಿ 29 ರನ್ ಸಿಡಿಸಿದರು. ಇದು ಭಾರತಕ್ಕೆ ಬಲು ದುಬಾರಿಯಾಯಿತು. ಪಂದ್ಯ ಸಂಪೂರ್ಣ ಇಂಗ್ಲೆಂಡ್ ಪರ ವಾಲಿತ್ತು. ಇದರ ನಡುವೆ ಸ್ಯಾಮ್ ಕುರನ್ ವಿಕೆಟ್ ಪತನಗೊಂಡರೂ ಇಂಗ್ಲೆಂಡ್ ಆತಂಕಕ್ಕೆ ಒಳಗಾಗಲಿಲ್ಲ. ಇನ್ನೂ ಒಂದು ಓವರ್ ಬಾಕಿ ಇರುವಂತೆ ಇಂಗ್ಲೆಂಡ್ 4 ವಿಕೆಟ್ ಗೆಲುವು ದಾಖಲಿಸಿತು. ಬೆತೆಲ್ ಅಜೇಯ 76 ರನ್ ಸಿಡಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯ 7 ವಿಕೆಟ್ ನಷ್ಟಕ್ಕೆ 190 ರನ್ ಸಿಡಿಸಿತು. ವೈಭವ್ ಸೂರ್ಯವಂಶಿ ಪಾದಾರ್ಪಣೆ ಮಾಡುವ ಮೂಲಕ ಭಾರತದ ಪರ ಅಂತಾರಾಷ್ಟ್ರೀಯ ಪಂದ್ಯ ಆಡಿದ ಅತ್ಯಂತ ಕಿರಿಯ ಆಟಗಾರ ಅನ್ನೋ ದಾಖಲೆ ಬರೆದರು. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ 16ನೇ ವಯಸ್ಸಿಗೆ ಡೆಬ್ಯೂ ಮಾಡಿ ದಾಖಲೆ ಬರೆದಿದ್ದರು. ಇದೀಗ ವೈಭವ್ ಸೂರ್ಯವಂಶಿ 15ನೇ ವಯಸ್ಸಿಗೆ ಪಾದಾರ್ಪಣೆ ದಾಖಲೆ ಬರೆದರು. ಬ್ಯಾಟಿಂಗ್‌ನಲ್ಲಿ ಆತ್ಮವಿಶ್ವಾಸದಿಂದ ಬಾಲ್ ಎದುರಿಸಿದ ವೈಭವ್ 2 ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ಆದರೆ 14 ರನ್ ಸಿಡಿಸಿ ಔಟಾದರು.
ಅಭಿಷೇಕ್ ಶರ್ಮಾ 43, ಇಶಾನ್ ಕಿಶನ್ 49, ನಾಯಕ ಶ್ರೇಯಸ್ ಅಯ್ಯರ್ 37, ತಿಲಕ್ ವರ್ಮಾ 37 ರನ್ ಸಿಡಿಸಿದರು. ಇದರೊಂದಿಗೆ ಭಾರತ 191 ರನ್ ಟಾರ್ಗೆಟ್ ನೀಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.