
ಮುಂಬೈ: ವಯಸ್ಸು ಕೇವಲ 15 ಆದರೂ, ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಇಡೀ ಕ್ರಿಕೆಟ್ ಜಗತ್ತೇ ತನ್ನತ್ತ ತಿರುಗಿ ನೋಡುವಂತಹ ಮಾತೊಂದನ್ನು ಹೇಳಿದ್ದಾರೆ. ಅರ್ಧಶತಕ, ಶತಕಗಳಿಗೆಲ್ಲಾ ಈ ಹುಡುಗ ತೃಪ್ತಿಪಡುವುದಿಲ್ಲ. ಬದಲಾಗಿ, ಟಿ20 ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆಯನ್ನು ಮಾಡುವ ಗುರಿ ಇಟ್ಟುಕೊಂಡಿದ್ದಾರೆ. ಅದೇನಪ್ಪಾ ಅಂದ್ರೆ, ಟಿ20 ಪಂದ್ಯವೊಂದರಲ್ಲಿ 200 ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಆಗುವುದು!
ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ ವೈಭವ್ ತಮ್ಮ ಈ ದೊಡ್ಡ ಗುರಿಯನ್ನು ಬಹಿರಂಗಪಡಿಸಿದ್ದಾರೆ. 'ಅರ್ಧಶತಕ ಗಳಿಸಿದಾಗ ಸಂಭ್ರಮಿಸಲು ಇಷ್ಟಪಡುತ್ತೀಯಾ?' ಎಂದು ಪೀಟರ್ಸನ್ ಕೇಳಿದ ಪ್ರಶ್ನೆಗೆ, 'ಇಲ್ಲ, ಅಷ್ಟಕ್ಕೇನೂ ಇಲ್ಲ' ಎಂದು ವೈಭವ್ ಸರಳವಾಗಿ ಉತ್ತರಿಸಿದರು. ನಂತರ ತಮ್ಮ ಗುರಿಗಳ ಬಗ್ಗೆ ಮಾತನಾಡುತ್ತಾ, ‘ನನಗೆ ಟಿ20ಯಲ್ಲಿ 200 ರನ್ ಗಳಿಸಬೇಕು. ಅವರ (ಗೇಲ್) ದಾಖಲೆಯನ್ನು ಮುರಿದು 200 ರನ್ ಪೂರೈಸಲು ನಾನು ಬಯಸುತ್ತೇನೆ. ಯಾವುದೇ ಪಂದ್ಯದಲ್ಲಿ ನನಗೆ ಪೂರ್ತಿಯಾಗಿ 20 ಓವರ್ ಬ್ಯಾಟ್ ಮಾಡಲು ಅವಕಾಶ ಸಿಕ್ಕರೆ, ಆ 175 ರನ್‌ಗಳ ದಾಖಲೆಯನ್ನು ನಾನು ಮುರಿಯಬಲ್ಲೆ’ ಎಂದು ವೈಭವ್ ಆತ್ಮವಿಶ್ವಾಸದಿಂದ ಹೇಳಿದರು.
2013ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಕ್ರಿಸ್ ಗೇಲ್, ಪುಣೆ ವಾರಿಯರ್ಸ್ ವಿರುದ್ಧ ಅಜೇಯ 175 ರನ್ ಗಳಿಸಿದ್ದರು. ಇದುವೇ ಸದ್ಯ ಟಿ20 ಕ್ರಿಕೆಟ್‌ನಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ. ಒಂದು ದಶಕ ಕಳೆದರೂ ಈ ದಾಖಲೆಯನ್ನು ಮುರಿಯಲು ಯಾರಿಗೂ ಸಾಧ್ಯವಾಗಿಲ್ಲ. '90ರ ಗಡಿ ತಲುಪಿದಾಗ ಒತ್ತಡ ಅನುಭವಿಸುತ್ತೀರಾ?' ಎಂಬ ಪ್ರಶ್ನೆಗೆ, ತಾನು ಯಾವಾಗಲೂ ತನ್ನ ಸಹಜ ಆಟವನ್ನೇ ಆಡುತ್ತೇನೆ ಮತ್ತು ಒತ್ತಡಕ್ಕೆ ಒಳಗಾಗುವುದಿಲ್ಲ ಎಂದು ವೈಭವ್ ತಿಳಿಸಿದರು.
ತಮ್ಮ ವೃತ್ತಿಜೀವನದ ಅತಿ ಸುದೀರ್ಘ ಇನಿಂಗ್ಸ್ ಬಗ್ಗೆ ಪೀಟರ್ಸನ್ ಕೇಳಿದಾಗ, ಅಧಿಕೃತ ದಾಖಲೆಗಳಲ್ಲಿ ಇಲ್ಲದ ಒಂದು ಅದ್ಭುತ ಇನಿಂಗ್ಸ್ ಬಗ್ಗೆ ವೈಭವ್ ಮಾಹಿತಿ ನೀಡಿದರು. ರಾಜ್ಯ ತಂಡದ ಪರ ದೇಶೀಯ ಪಂದ್ಯವೊಂದರಲ್ಲಿ, ಪೂರ್ತಿ 50 ಓವರ್ ಬ್ಯಾಟಿಂಗ್ ಮಾಡಿ ಅಜೇಯ 335 ರನ್ ಗಳಿಸಿದ್ದಾಗಿ ವೈಭವ್ ಸ್ಪಷ್ಟಪಡಿಸಿದರು. ಇದು ದೀರ್ಘ ಇನಿಂಗ್ಸ್‌ಗಳನ್ನು ಆಡಲು ಬೇಕಾದ ಅವರ ದೈಹಿಕ ಸಾಮರ್ಥ್ಯ ಮತ್ತು ರನ್‌ಗಳ ಮೇಲಿನ ಹಸಿವನ್ನು ತೋರಿಸುತ್ತದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.