ಅಂಡರ್‌-19 ವಿಶ್ವಕಪ್‌: ಇಂದು ಭಾರತ vs ಆಸ್ಟ್ರೇಲಿಯಾ ಫೈನಲ್‌ ಫೈಟ್‌

By Naveen KodaseFirst Published Feb 11, 2024, 10:12 AM IST
Highlights

ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಅಜೇಯವಾಗಿ ಫೈನಲ್‌ಗೇರಿರುವ ಭಾರತವೇ ಈ ಪಂದ್ಯದಲ್ಲೂ ಗೆಲ್ಲುವ ಫೇವರಿಟ್‌ ಎನಿಸಿದೆ. ನಾಕೌಟ್‌ ಹಂತದ ಪಂದ್ಯಗಳಲ್ಲಿ ಭಾರತ ಕಠಿಣ ಪರಿಸ್ಥಿತಿಗಳಿಂದ ಪುಟಿದೆದ್ದು ಗೆಲುವಿನ ದಡ ಸೇರಿತ್ತು. ತಂಡ ಕೇವಲ ಒಂದಿಬ್ಬರು ಆಟಗಾರರ ಮೇಲೆ ಅವಲಂಬಿತಗೊಳ್ಳದೆ, ಸಾಂಘಿಕ ಪ್ರದರ್ಶನ ತೋರುತ್ತಿದ್ದು ಇದೇ ತಂಡದ ಯಶಸ್ಸಿನ ಹಿಂದಿರುವ ಗುಟ್ಟು.

ಬೆನೋನಿ (ಫೆ.11): ದಾಖಲೆಯ 5 ಬಾರಿ ಚಾಂಪಿಯನ್‌ ಭಾರತ ಭಾನುವಾರ ನಡೆಯಲಿರುವ ಅಂಡರ್‌-19 ಏಕದಿನ ಕ್ರಿಕೆಟ್‌ ವಿಶ್ವಕಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಸವಾಲನ್ನು ಎದುರಿಸಲಿದ್ದು, 6ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಕಳೆದ ವರ್ಷ ನ.19ರಂದು ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ, ರೋಹಿತ್‌ ಶರ್ಮಾ ಪಡೆ ಕಣ್ಣೀರಿಡುವಂತೆ ಮಾಡಿತ್ತು. ಇದೀಗ ಮತ್ತೊಂದು ವಿಶ್ವಕಪ್‌ ಫೈನಲ್‌ನಲ್ಲಿ ಭಾರತ-ಆಸೀಸ್‌ ಕಾದಾಡಲಿದ್ದು, ಉದಯ್‌ ಸಹರನ್‌ ಪಡೆ ಸೇಡಿಗೆ ಕಾಯುತ್ತಿದೆ.

ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಅಜೇಯವಾಗಿ ಫೈನಲ್‌ಗೇರಿರುವ ಭಾರತವೇ ಈ ಪಂದ್ಯದಲ್ಲೂ ಗೆಲ್ಲುವ ಫೇವರಿಟ್‌ ಎನಿಸಿದೆ. ನಾಕೌಟ್‌ ಹಂತದ ಪಂದ್ಯಗಳಲ್ಲಿ ಭಾರತ ಕಠಿಣ ಪರಿಸ್ಥಿತಿಗಳಿಂದ ಪುಟಿದೆದ್ದು ಗೆಲುವಿನ ದಡ ಸೇರಿತ್ತು. ತಂಡ ಕೇವಲ ಒಂದಿಬ್ಬರು ಆಟಗಾರರ ಮೇಲೆ ಅವಲಂಬಿತಗೊಳ್ಳದೆ, ಸಾಂಘಿಕ ಪ್ರದರ್ಶನ ತೋರುತ್ತಿದ್ದು ಇದೇ ತಂಡದ ಯಶಸ್ಸಿನ ಹಿಂದಿರುವ ಗುಟ್ಟು.

ಸಚಿನ್‌ ಧಾಸ್‌, ಉದಯ್‌ ಸಹರನ್‌, ಮುಷೀರ್ ಖಾನ್‌, ಸೌಮಿಕುಮಾರ್‌ ಪಾಂಡೆ, ನಮನ್‌ ತಿವಾರಿ, ಲಾಜ್‌ ಲಿಂಬಾನಿ ಹೀಗೆ ಹಲವು ಹೀರೋಗಳು ಉದಯಿಸಿದ್ದು, ಫೈನಲ್‌ನಲ್ಲೂ ಅಬ್ಬರಿಸಲು ಕಾಯುತ್ತಿದ್ದಾರೆ.

ಸೆಮೀಸ್‌ನಲ್ಲಿ ದ.ಆಫ್ರಿಕಾ ವಿರುದ್ಧ 246 ರನ್‌ ಗುರಿ ಬೆನ್ನತ್ತಿದ್ದ ಭಾರತ, 32ಕ್ಕೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿ ತ್ತು ಆದರೆ, ಸಚಿನ್‌ ಧಾಸ್‌ ಹಾಗೂ ಉದಯ್‌ ಸಹರನ್‌, ಅಂಡರ್‌-19 ವಿಶ್ವಕಪ್‌ನ ಇತಿಹಾಸದಲ್ಲೇ 5ನೇ ವಿಕೆಟ್‌ಗೆ ದಾಖಲೆ ಜೊತೆಯಾಟವಾಡಿ ತಂಡವನ್ನು ಗೆಲ್ಲಿಸಿದರು. ಇದರಿಂದ ಎರಡು ವಿಷಯಗಳು ತಿಳಿದವು. ಮೊದಲನೇಯದ್ದು ಭಾರತದ ಯುವ ಆಟಗಾರರು ಮಾನಸಿಕವಾಗಿ ಎಷ್ಟು ಸದೃಢರಾಗಿದ್ದಾರೆ, ಎಷ್ಟು ಸಮರ್ಥವಾಗಿ ಒತ್ತಡ ನಿಭಾಯಿಸುತ್ತಾರೆ ಎನ್ನುವುದು. ಎರಡನೇಯದ್ದು ಟೂರ್ನಿಗೂ ಮುನ್ನ ನಡೆದ ಅಭ್ಯಾಸ ಶಿಬಿರ, ಅಭ್ಯಾಸ ಪಂದ್ಯಗಳು ಆಟಗಾರರು ಒಬ್ಬರನ್ನೊಬ್ಬರು ಅರಿತುಕೊಳ್ಳಲು ಎಷ್ಟು ಸಹಕಾರಿಯಾದವು ಎನ್ನುವುದು.

ಭಾರತ ಟೂರ್ನಿಯುದ್ದಕ್ಕೂ ತೋರಿರುವ ಪ್ರದರ್ಶನವನ್ನು ಗಮನಿಸಿದಾಗ, ಫೈನಲ್‌ನ ಒತ್ತಡ ನಿಭಾಯಿಸುವುದು ಅಷ್ಟಾಗಿ ಕಷ್ಟವೇನಲ್ಲ ಎನಿಸುತ್ತಿದೆ. ಆದರೂ, ಯಾವುದೇ ಹಂತದ ಕ್ರಿಕೆಟ್‌ನಲ್ಲಾದರೂ ಆಸ್ಟ್ರೇಲಿಯಾವನ್ನು ಲಘುವಾಗಿ ಪರಿಗಣಿಸಲು ಸಾಧ್ಯವೇ ಇಲ್ಲ.

ಇನ್ನು, ಆಸ್ಟ್ರೇಲಿಯಾ ಕೂಡ ತನಗೆ ಎದುರಾದ ಎಲ್ಲಾ ಸವಾಲುಗಳನ್ನು ಮೀರಿ ಫೈನಲ್‌ಗೇರಿದೆ. ಅದರಲ್ಲೂ ಸೆಮೀಸ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಸೀಸ್‌ ತೋರಿದ ಗಟ್ಟಿತನ, ಆತ್ಮವಿಶ್ವಾಸ ಎಲ್ಲಾ ತಂಡಗಳಿಗೆ ಮಾದರಿಯಾಗುವಂತದ್ದು. ಹೀಗಾಗಿ, ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಪ್ರಶಸ್ತಿಗಾಗಿ ಭರ್ಜರಿ ಪೈಪೋಟಿ ಏರ್ಪಡಲಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಭಾರತ-ಆಸ್ಟ್ರೇಲಿಯಾ ನಡುವೆ 3ನೇ ಫೈನಲ್‌ 

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಅಂಡರ್‌-19 ವಿಶ್ವಕಪ್‌ನಲ್ಲಿ 3ನೇ ಬಾರಿಗೆ ಫೈನಲ್‌ನಲ್ಲಿ ಎದುರಾಗಲಿವೆ. 2012, 2018ರಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಭಾರತ ಚಾಂಪಿಯನ್‌ ಆಗಿತ್ತು.

ಸತತ 5ನೇ ಫೈನಲ್‌ ಆಡಲಿರುವ ಭಾರತ 

2016ರಿಂದ ಭಾರತ ಸತತ 5 ಬಾರಿ ಫೈನಲ್‌ ಪ್ರವೇಶಿಸಿದೆ. 2018, 2022ರಲ್ಲಿ ಭಾರತ ಚಾಂಪಿಯನ್‌ ಆದರೆ, 2016 ಹಾಗೂ 2020ರಲ್ಲಿ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಈ ಬಾರಿ ಮತ್ತೊಮ್ಮೆ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

ಆಸ್ಟ್ರೇಲಿಯಾಗೆ 3ನೇ ಟ್ರೋಫಿ ಗೆಲ್ಲುವ ಗುರಿ 

1988ರ ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್‌ ಆಗಿದ್ದ ಆಸ್ಟ್ರೇಲಿಯಾ ಆ ಬಳಿಕ 2010ರಲ್ಲಿ 2ನೇ ಪ್ರಶಸ್ತಿ ಜಯಿಸಿತ್ತು. ಇದೀಗ 14 ವರ್ಷ ಬಳಿಕ ಮತ್ತೆ ಟ್ರೋಫಿ ಎತ್ತಿಹಿಡಿಯಲು ಕಾತರಿಸುತ್ತಿದೆ. 2012, 2018ರಲ್ಲಿ ಆಸೀಸ್‌ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
 

click me!