ಮ್ಯಾಚ್ ಫಿಕ್ಸಿಂಗ್ ಆರೋಪ ಎದುರಿಸಿದ ಟಾಪ್ 6 ಫೇಮಸ್ ಕ್ರಿಕೆಟಿಗರಿವರು..! ಈ ಲಿಸ್ಟ್‌ನಲ್ಲಿದ್ದಾರೆ ಜಗತ್ತಿನ ಶ್ರೀಮಂತ ಕ್ರಿಕೆಟಿಗ

Published : Oct 22, 2026, 12:52 PM IST
Match Fixing

ಸಾರಾಂಶ

ಕ್ರಿಕೆಟ್ ಜಗತ್ತಿನಲ್ಲಿ ಅಪಾರ ಖ್ಯಾತಿ ಗಳಿಸಿದರೂ ಮ್ಯಾಚ್ ಫಿಕ್ಸಿಂಗ್ ವಿವಾದದಲ್ಲಿ ಸಿಲುಕಿ ಗೌರವ ಕಳೆದುಕೊಂಡ ಟಾಪ್ 6 ಆಟಗಾರರ ಬಗ್ಗೆ ಈ ಲೇಖನ ವಿವರಿಸುತ್ತದೆ. ಅಜರುದ್ದೀನ್, ಹ್ಯಾನ್ಸಿ ಕ್ರೋನಿ, ಶ್ರೀಶಾಂತ್ ಸೇರಿದಂತೆ ಹಲವು ದಿಗ್ಗಜರು ಎದುರಿಸಿದ ನಿಷೇಧ ಮತ್ತು ಕಾನೂನು ಹೋರಾಟಗಳ ಮಾಹಿತಿ ಇಲ್ಲಿದೆ.

ಬೆಂಗಳೂರು: ಕ್ರಿಕೆಟ್ ಜಗತ್ತಿನಲ್ಲಿ ಅವಿರತ ಸಮರ್ಪಣಾಭಾವದಿಂದ ಆಡುವ ಮೂಲಕ ಖ್ಯಾತಿಯನ್ನು ಗಳಿಸಿರುತ್ತಾರೆ. ಆದರೆ ಜಗತ್ತಿನ ಫೇಮಸ್ ಆಟಗಾರರಾಗಿ ಬೆಳೆದ ಬಳಿಕ ಕೆಲವು ಆಟಗಾರರು ಮ್ಯಾಚ್‌ ಫಿಕ್ಸಿಂಗ್‌ನಂತಹ ವಿವಾದಗಳಲ್ಲಿ ಸಿಲುಕಿಕೊಂಡು, ವರ್ಷಗಳಿಂದ ಗಳಿಸಿದ ಗೌರವವನ್ನು ಮಣ್ಣುಪಾಲು ಮಾಡಿಕೊಂಡು ಬಿಡುತ್ತಾರೆ. ಕ್ರಿಕೆಟ್‌ ಜಗತ್ತಿನಲ್ಲಿ ಅಂತಹ ಹತ್ತು ಹಲವು ಘಟನೆಗಳು ನಮ್ಮ ಕಣ್ಣ ಮುಂದೆಯೇ ಇದೆ. ಜಂಟಲ್‌ಮನ್ ಗೇಮ್ ಎಂದೇ ಕರೆಸಿಕೊಳ್ಳುವ ಕ್ರಿಕೆಟ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಗುರಿಯಾದ ಟಾಪ್ 6 ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ.

1. ಮೊಹಮ್ಮದ್ ಅಜರುದ್ದೀನ್:

ಟೀಂ ಇಂಡಿಯಾದ ನಾಯಕರಾಗಿದ್ದ ಅಜರುದ್ದೀನ್ 2000ನೇ ಇಸವಿಯಲ್ಲಿ ಮ್ಯಾಚ್ ಫಿಕ್ಸಿಂಗ್ ವಿವಾದದಲ್ಲಿ ಸಿಲುಕಿಕೊಂಡರು. ಇದಾದ ಬಳಿಕ ಈ ಕುರಿತಂತೆ ತನಿಖೆ ನಡೆಸಿದ ಬಿಸಿಸಿಐ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಜರುದ್ದೀನ್ ಅವರ ಮೇಲೆ ಅಜೀವ ನಿಷೇಧ ಹೇರಿತ್ತು. ಆದರೆ ಇದರ ವಿರುದ್ದ ಹೋರಾಟ ನಡೆಸಿದ ಅಜರುದ್ದೀನ್, ಹನ್ನೊಂದು ವರ್ಷಗಳ ಬಳಿಕ ಆಂಧ್ರಪ್ರದೇಶ ಹೈಕೋರ್ಟ್, ಅಜರುದ್ದೀನ್ ಅವರ ಮೇಲೆ ಹೇರಿದ್ದ ಬ್ಯಾನ್ ಅನ್ನು ರದ್ದುಪಡಿಸಿತು.

2. ಹ್ಯಾನ್ಸಿ ಕ್ರೋನಿ:

ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹ್ಯಾನಿ ಕ್ರೋನಿ ಕೂಡಾ 2000ನೇ ಇಸವಿಯಲ್ಲಿ ಇದೇ ಮ್ಯಾಚ್ ಫಿಕ್ಸಿಂಗ್ ವಿವಾದದ ಸುಳಿಯಲ್ಲಿ ಸಿಲುಕಿದರು. ಹ್ಯಾನ್ಸಿ ಕ್ರೋನಿ ತಾವು ಬುಕಿಗಳಿಂದ ಮ್ಯಾಚ್‌ ಫಿಕ್ಸಿಂಗ್‌ಗೆ ಹಣ ಪಡೆದುಕೊಂಡಿದ್ದನ್ನು ಒಪ್ಪಿಕೊಂಡಿದ್ದರು. ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ಕ್ರೋನಿ ಮೇಲೆ ಅಜೀವ ನಿಷೇಧ ಹೇರಿತು. ಇದಾಗಿ ಎರಡು ವರ್ಷಗಳಲ್ಲೇ 32 ವರ್ಷದ ಕ್ರೋನಿ 2002ರ ವಿಮಾನ ದುರಂತದಲ್ಲಿ ಕೊನೆಯುಸಿರೆಳೆದರು.

3. ಎಸ್ ಶ್ರೀಶಾಂತ್:

2007ರ ಟಿ20 ವಿಶ್ವಕಪ್ ಹಾಗೂ 2011 ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯ, ಟೀಂ ಇಂಡಿಯಾ ವೇಗಿ ಎಸ್ ಶ್ರೀಶಾಂತ್ ಕೂಡಾ 2013ರ ಐಪಿಎಲ್ ವೇಳೆ ಸ್ಪಾಟ್‌ ಫಿಕ್ಸಿಂಗ್ ಆರೋಪಕ್ಕೆ ಗುರಿಯಾಗಿದ್ದರು. ಆರಂಭದಲ್ಲಿ ಬಿಸಿಸಿಐ ಶ್ರೀಶಾಂತ್ ಮೇಲೆ ಜೀವಾವಧಿ ಬ್ಯಾನ್ ವಿಧಿಸಿತ್ತು. ಇನ್ನು ಇದಾದ ಬಳಿಕ ಕಾನೂನು ಹೋರಾಟ ನಡೆಸಿದ ಶ್ರೀಶಾಂತ್‌ಗೆ 2019ರಲ್ಲಿ ಸುಪ್ರೀಂ ಕೋರ್ಟ್ ರಿಲ್ಯಾಕ್ಸ್ ನೀಡಿತ್ತು. ಸರ್ವೋಚ್ಚ ನ್ಯಾಯಾಲಯ ಅಜೀವ ಶಿಕ್ಷೆ ತೆರವು ಮಾಡಿ, ಶಿಕ್ಷೆಯ ಪ್ರಮಾಣ ಕಡಿಮೆ ಮಾಡಲು ಸೂಚಿಸಿತ್ತು. ಬಳಿಕ ಬಿಸಿಸಿಐ ಎಸ್ ಶ್ರೀಶಾಂತ್‌ಗೆ ಏಳು ವರ್ಷಗಳ ಕಾಲ ನಿಷೇಧ ಹೇರಿತ್ತು.

4. ಸಲ್ಮಾನ್ ಭಟ್:

ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಭಟ್, 2010ರ ಕುಖ್ಯಾತ ಲಾರ್ಡ್ಸ್ ಟೆಸ್ಟ್ ಮ್ಯಾಚ್‌ ಫಿಕ್ಸಿಂಗ್‌ನ ಮಾಸ್ಟರ್ ಮೈಂಡ್. ಇಂಗ್ಲೆಂಡ್ ಎದುರಿನ ಲಾರ್ಡ್ಸ್‌ ಟೆಸ್ಟ್‌ನಲ್ಲಿ ಉದ್ದೇಶಪೂರ್ವಕವಾಗಿ ನೋ ಬಾಲ್ ಹಾಕುವಂತೆ ಪಾಕ್ ಬೌಲರ್‌ಗೆ ಒತ್ತಡ ಹೇರಿದ್ದರು. ಇದರ ಪರಿಣಾಮವಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಸಲ್ಮಾನ್ ಭಟ್ ಮೇಲೆ ಐದು ವರ್ಷಗಳ ನಿಷೇಧವನ್ನು ವಿಧಿಸಿತು ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಜೈಲು ಶಿಕ್ಷೆಯೂ ವಿಧಿಸಲಾಯಿತು.

5. ಮೊಹಮ್ಮದ್ ಆಮೀರ್:

2010ರ ಲಾರ್ಡ್ಸ್ ಟೆಸ್ಟ್ ವೇಳೆಯಲ್ಲಿಯೇ ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಸಿಕ್ಕಿಬಿದ್ದ ಮತ್ತೋರ್ವ ಪಾಕ್ ವೇಗಿ ಮೊಹಮ್ಮದ್ ಆಮೀರ್. ಸಲ್ಮಾನ್ ಭಟ್ ಸೂಚನೆ ಮೇರೆಗೆ ಆಮೀರ್ ಉದ್ದೇಶಪೂರ್ವಕವಾಗಿ ನೋ ಬಾಲ್ ಎಸೆದಿರುವುದು ಬೆಳಕಿಗೆ ಬಂದಿತ್ತು. ತನ್ನ ಎಳೆಯ ವಯಸ್ಸಿನ ಕಾರಣದಿಂದಾಗಿ, ಅಮೀರ್ ಐಸಿಸಿಯಿಂದ ಐದು ವರ್ಷಗಳ ನಿಷೇಧಕ್ಕೆ ಒಳಗಾದರು ಮತ್ತು ಅಪರಾಧಿ ಬಾಲಾಪರಾಧಿಗಳ ಸುಧಾರಣಾ ಕೇಂದ್ರದಲ್ಲಿ ಕಾಲ ಕಳೆದರು. ಇತರ ಅನೇಕರಿಗಿಂತ ಭಿನ್ನವಾಗಿ, ತಮ್ಮ ಮೇಲಿದ್ದ ನಿಷೇಧ ಮುಗಿದ ನಂತರ, 2016ರಲ್ಲಿ ಅಮೀರ್ ಯಶಸ್ವಿಯಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದರು.

6. ಅಜಯ್ ಜಡೇಜಾ:

ಜಗತ್ತಿನ ಶ್ರೀಮಂತ ಕ್ರಿಕೆಟಿಗ, ಟೀಂ ಇಂಡಿಯಾ ಮಾಜಿ ಆಟಗಾರ ಅಜಯ್ ಜಡೇಜಾ ಕೂಡಾ ಮ್ಯಾಚ್ ಫಿಕ್ಸಿಂಗ್‌ಗೆ ಒಳಗಾಗಿದ್ದರು. 2000ನೇ ಇಸವಿಯ ಮ್ಯಾಚ್‌ ಫಿಕ್ಸಿಂಗ್‌ನಲ್ಲಿಯೇ ಅಜಯ್ ಜಡೇಜಾ ಹೆಸರು ಕೂಡಾ ಥಳುಕು ಹಾಕಿಕೊಂಡಿತ್ತು. ತನಿಖೆ ಬಳಿಕ ಜಡೇಜಾ ಮೇಲೆ ಬಿಸಿಸಿಐ ಐದು ವರ್ಷ ನಿಷೇಧ ಹೇರಿತ್ತು. ಇದಾದ ಬಳಿಕ ಕಾನೂನು ಹೋರಾಟ ನಡೆಸಿದ ಜಡೇಜಾಗೆ 2003ರಲ್ಲಿ ಡೆಲ್ಲಿ ಹೈಕೋರ್ಟ್ ರಿಲೀಫ್ ನೀಡಿತ್ತು. ಜಡೇಜಾ ಮೇಲಿದ್ದ ಬ್ಯಾನ್ ತೆರವು ಮಾಡಿ, ದೇಶಿ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿತ್ತು. ಅಂದಹಾಗೆ ಅಜಯ್ ಜಡೇಜಾ ಗುಜರಾತ್‌ನ ಜಾಮ್‌ನಗರ ರಾಜಮನೆತನದವರಾಗಿದ್ದು, 2024ರಲ್ಲಿ ಅವರನ್ನು ಈ ರಾಜಮನೆತನದ ಉತ್ತರಾಧಿಕಾರಿ ಎಂದು ಘೋಷಿಸಲಾಯಿತು. ಹೀಗಾಗಿ ಅವರಿಗೆ ವಂಶಪಾರಂಪರ್ಯವಾಗಿ ಬಂದ ಸಂಪತ್ತು ಸೇರಿ 1450 ಕೋಟಿ ರುಪಾಯಿ ಒಡೆಯರಾಗಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Virender Sehwag: ₹7,000 ಪೆಟ್ರೋಲ್‌ ಬಿಲ್‌ ಮಗನ ಕಣ್ಣು ತೆರೆಸಿತೇ? ಸೆಹ್ವಾಗ್‌ ಹಂಚಿಕೊಂಡ ಅಪರೂಪದ ವಿಡಿಯೋ
IND vs NZ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದಾಗುತ್ತಾ? ಕ್ರೈಸ್ಟ್‌ಚರ್ಚ್‌ ಹವಾಮಾನ ವರದಿ ಏನು?