
ಸೇಂಟ್ ಕಿಟ್ಸ್: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು ಗೆದ್ದ ನಂತರ, ಆಸ್ಟ್ರೇಲಿಯಾ ಟಿ20 ಸರಣಿಯನ್ನೂ ಗೆದ್ದುಕೊಂಡಿದೆ. ಐದು ಪಂದ್ಯಗಳ ಸರಣಿಯ ಮೂರನೇ ಪಂದ್ಯದಲ್ಲಿ ವಿಂಡೀಸ್ ಅನ್ನು ಆರು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಆಸೀಸ್ 3-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಆರ್‌ಸಿಬಿ ತಂಡದ ಸ್ಪೋಟಕ ಬ್ಯಾಟರ್ ಟಿಮ್ ಡೇವಿಡ್, ವಿಂಡೀಸ್ ಬೌಲರ್‌ಗಳನ್ನು ಚೆಂಡಾಡುವ ಮೂಲಕ ಆಸೀಸ್‌ಗೆ ಭರ್ಜರಿ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಮೊದಲು ಬ್ಯಾಟ್ ಮಾಡಿದ ವಿಂಡೀಸ್ ನಾಯಕ ಶಾಯ್ ಹೋಪ್ ಅವರ ಶತಕದ ನೆರವಿನಿಂದ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿದರು. ಆದರೆ ಟಿಮ್ ಡೇವಿಡ್ ಅವರ ಸ್ಫೋಟಕ ಶತಕದ ನೆರವಿನಿಂದ ಆಸ್ಟ್ರೇಲಿಯಾ 16.1 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತು.
ಮೊದಲು ಬ್ಯಾಟ್ ಮಾಡಿದ ವಿಂಡೀಸ್ ಪರ ನಾಯಕ ಶಾಯ್ ಹೋಪ್ 57 ಎಸೆತಗಳಲ್ಲಿ 102 ರನ್ ಗಳಿಸಿ ಅಜೇಯರಾಗಿ ಉಳಿದರು. ಆರಂಭಿಕ ಬ್ರಾಂಡನ್ ಕಿಂಗ್ 36 ಎಸೆತಗಳಲ್ಲಿ 62 ರನ್ ಗಳಿಸಿದರು. ಆರಂಭಿಕ ಜೊತೆಯಾಟದಲ್ಲಿ ಇಬ್ಬರೂ 11.4 ಓವರ್‌ಗಳಲ್ಲಿ 125 ರನ್ ಗಳಿಸಿದರು. ಆದರೆ ವಿಂಡೀಸ್ ತಂಡದ ಇತರ ಆಟಗಾರರಿಗೆ ಹೆಚ್ಚಿನ ರನ್ ಗಳಿಸಲು ಸಾಧ್ಯವಾಗಲಿಲ್ಲ. ಶಿಮ್ರಾನ್ ಹೆಟ್ಮೆಯರ್ (9), ಶೆರ್ಫೇನ್ ರುದರ್‌ಫೋರ್ಡ್ (12), ರೋವ್ಮನ್ ಪೊವೆಲ್ (9), ರೊಮಾರಿಯೊ ಶೆಫರ್ಡ್ (9*) ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ನೇಥನ್ ಎಲ್ಲಿಸ್, ಆಡಂ ಜಂಪಾ ಹಾಗೂ ಮಿಚೆಲ್ ಓವನ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಗೆಲುವಿನ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಪರ ನಾಯಕ ಮಿಚೆಲ್ ಮಾರ್ಷ್ (19 ಎಸೆತಗಳಲ್ಲಿ 22) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (7 ಎಸೆತಗಳಲ್ಲಿ 20) 2.2 ಓವರ್‌ಗಳಲ್ಲಿ 30 ರನ್ ಗಳಿಸಿ ಸ್ಫೋಟಕ ಆರಂಭ ಒದಗಿಸಿದರು. ಆದರೆ ಪವರ್‌ಪ್ಲೇ ಮುಗಿಯುವ ಹೊತ್ತಿಗೆ ಜೋಶ್ ಇಂಗ್ಲಿಸ್ (6 ಎಸೆತಗಳಲ್ಲಿ 15) ವಿಕೆಟ್ ಕಳೆದುಕೊಂಡು ಆಸೀಸ್ 61-3ಕ್ಕೆ ಕುಸಿಯಿತು. ಕ್ಯಾಮರೂನ್ ಗ್ರೀನ್ (14 ಎಸೆತಗಳಲ್ಲಿ 11) ಔಟಾದಾಗ ಆಸೀಸ್ ಸ್ಕೋರ್ 8.5 ಓವರ್‌ಗಳಲ್ಲಿ 87 ರನ್ ಆಗಿತ್ತು. ಆದರೆ ನಂತರ ಕ್ರೀಸ್‌ಗೆ ಬಂದ ಮಿಚೆಲ್ ಓವನ್ (16 ಎಸೆತಗಳಲ್ಲಿ 36*) ಮತ್ತು ಟಿಮ್ ಡೇವಿಡ್ ಅಬ್ಬರಿಸಿ ಬ್ಯಾಟ್ ಮಾಡಿ ಆಸೀಸ್‌ಗೆ 16 ಓವರ್‌ಗಳಲ್ಲಿ ಗೆಲುವು ತಂದುಕೊಟ್ಟರು.
ಆಸೀಸ್ ಪರ ಅತಿವೇಗದ ಟಿ20 ಶತಕ ಸಿಡಿಸಿದ ಟಿಮ್ ಡೇವಿಡ್: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ಪರವಾಗಿ ಅಚ್ಚುಕಟ್ಟಾಗಿ ಮ್ಯಾಚ್ ಫಿನಿಶರ್ ಪಾತ್ರವನ್ನು ನಿಭಾಯಿಸಿದ್ದ ಟಿಮ್ ಡೇವಿಡ್, ಇದೀಗ ವಿಂಡೀಸ್ ಎದುರಿನ ಪಂದ್ಯದಲ್ಲೂ ತಮ್ಮ ತೋಳ್ಬಲದ ಸಾಮರ್ಥ್ಯವನ್ನು ಅನಾವರಣ ಮಾಡಿದ್ದಾರೆ. ಆರಂಭದಿಂದಲೇ ವಿಂಡೀಸ್ ಬೌಲರ್‌ಗಳನ್ನು ಚೆಂಡಾಡಿದ ಟಿಮ್ ಡೇವಿಡ್ ಕೇವಲ 16 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದರು. ಇದು ಆಸೀಸ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲಾದ ಅತಿವೇಗದ ಅರ್ಧಶತಕ ಎನಿಸಿಕೊಂಡಿತು. ಇದಾದ ಬಳಿಕವೂ ಸುಮ್ಮನಾಗದ ಟಿಮ್ ಡೇವಿಡ್ ಕೇವಲ 37 ಎಸೆತಗಳಲ್ಲಿ ತಮ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮೊದಲ ಶತಕ ಸಿಡಿಸಿ ಸಂಭ್ರಮಿಸಿದರು. ಟಿಮ್ ಡೇವಿಡ್ ಅವರ ಸೊಗಸಾದ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 11 ಮುಗಿಲೆತ್ತರದ ಸಿಕ್ಸರ್‌ಗಳು ಸೇರಿದ್ದವು.
ಸ್ಕೋರ್: ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 214-4, ಆಸ್ಟ್ರೇಲಿಯಾ 16.1 ಓವರ್‌ಗಳಲ್ಲಿ 215-4.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.