ನಿರ್ಣಾಯಕ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಕಣಕ್ಕಿಳಿದಿಲ್ಲವೇಕೆ? ರೋಹಿತ್ ಕೊಟ್ರು ಬಿಗ್‌ ಅಪ್‌ಡೇಟ್..!

Published : Jul 17, 2022, 05:41 PM ISTUpdated : Jul 18, 2022, 09:25 AM IST
ನಿರ್ಣಾಯಕ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಕಣಕ್ಕಿಳಿದಿಲ್ಲವೇಕೆ? ರೋಹಿತ್ ಕೊಟ್ರು ಬಿಗ್‌ ಅಪ್‌ಡೇಟ್..!

ಸಾರಾಂಶ

* ಇಂಗ್ಲೆಂಡ್ ಎದುರಿನ ನಿರ್ಣಾಯಕ ಪಂದ್ಯದಿಂದ ಹೊರಗುಳಿದ ಜಸ್ಪ್ರೀತ್ ಬುಮ್ರಾ * ಮೊದಲೆರಡು ಪಂದ್ಯಗಳಲ್ಲಿ ಒಟ್ಟು 8 ವಿಕೆಟ್ ಕಬಳಿಸಿದ್ದ ಬುಮ್ರಾ * ಬುಮ್ರಾ ಹೊರಗುಳಿಯಲು ಕಾರಣ ತಿಳಿಸಿದ ನಾಯಕ ರೋಹಿತ್ ಶರ್ಮಾ

ಮ್ಯಾಂಚೆಸ್ಟರ್‌(ಜು.17): ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮೂರನೇ ಹಾಗೂ ನಿರ್ಣಾಯಕ ಪಂದ್ಯವು ಈಗಾಗಲೇ ಆರಂಭವಾಗಿದ್ದು, ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿರುವ ಟೀಂ ಇಂಡಿಯಾ ಭರ್ಜರಿ ಆರಂಭವನ್ನೇ ಪಡೆದಿದೆ. ಆದರೆ ಇಂಗ್ಲೆಂಡ್ ಎದುರಿನ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಕಣಕ್ಕಿಳಿಯದೇ ಇರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ವೇಗಿ ಬುಮ್ರಾ ಏಕೆ ಮೂರನೇ ಏಕದಿನ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿಲ್ಲ ಎನ್ನುವ ಕುತೂಹಲಕ್ಕೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತೆರೆ ಎಳೆದಿದ್ದಾರೆ.

ಟೀಂ ಇಂಡಿಯಾ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ, ಇಂಗ್ಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಕೇವಲ 19 ರನ್‌ ನೀಡಿ 6 ವಿಕೆಟ್ ಕಬಳಿಸುವ ಮೂಲಕ ಭಾರತ ತಂಡವು ಏಕದಿನ ಸರಣಿಯಲ್ಲಿ ಶುಭಾರಂಭ ಮಾಡುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಇನ್ನು ಇಂಗ್ಲೆಂಡ್ ಎದುರಿನ ಎರಡನೇ ಏಕದಿನ ಪಂದ್ಯದಲ್ಲೂ ಬುಮ್ರಾ 2 ವಿಕೆಟ್ ಕಬಳಿಸಿ ಮಿಂಚಿದ್ದರು. ಇದೆಲ್ಲದರ ಹೊರತಾಗಿಯೂ ಇಂಗ್ಲೆಂಡ್ ಎದುರಿನ ನಿರ್ಣಾಯಕ ಪಂದ್ಯದಲ್ಲಿ ಬುಮ್ರಾ ಆಡುವ ಹನ್ನೊಂದರ ಬಳಗದಿಂದ ಹೊರಬಿದ್ದಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿತ್ತು. ಇಂಗ್ಲೆಂಡ್ ಎದುರಿನ ಮೂರನೇ ಏಕದಿನ ಪಂದ್ಯದ ಟಾಸ್ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಬುಮ್ರಾ ಕಣಕ್ಕಿಳಿಯುತ್ತಿಲ್ಲ ಎಂದು ತಿಳಿಸಿದ್ದಾರೆ.

ಟಾಸ್ ನಡೆಸಿಕೊಟ್ಟ ರವಿಶಾಸ್ತ್ರಿ, ತಂಡದಲ್ಲಿ ಏನಾದರೂ ಬದಲಾವಣೆಗಳಿದೆಯೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ನಮ್ಮ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಜಸ್ಪ್ರೀತ್ ಬುಮ್ರಾ ಅವರು ಬೆನ್ನು ನೋವಿನ ಸೆಳೆತದಿಂದ ಬಳಲುತ್ತಿದ್ದು, ನಾವು ಯಾವುದೇ ಕಾರಣಕ್ಕೂ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಬಯಸುವುದಿಲ್ಲ. ಹೀಗಾಗಿ ಜಸ್ಪ್ರೀತ್‌ ಬುಮ್ರಾಗೆ ವಿಶ್ರಾಂತಿ ನೀಡಲಾಗಿದ್ದು, ಮೊಹಮ್ಮದ್ ಸಿರಾಜ್ ಇಂದು ಕಣಕ್ಕಿಳಿದಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಇನ್ನು ಇದಾದ ಬಳಿಕ ಅಧಿಕೃತ ಪ್ರಕಟಣೆ ಹೊರಡಿಸಿರುವ ಬಿಸಿಸಿಐ, ಬೆನ್ನು ನೋವಿನ ಸೆಳೆತದಿಂದ ಬಳಲುತ್ತಿರುವ ಜಸ್ಪ್ರೀತ್ ಬುಮ್ರಾ ಈ ಪಂದ್ಯದಿಂದ ಹೊರಬಿದ್ದಿದ್ದಾರೆ. ಇನ್ನು ಆರ್ಶದೀಪ್ ಸಿಂಗ್ ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಿದ್ದು, ಸಂಪೂರ್ಣವಾಗಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Ind vs Eng ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ, ಒಂದು ಮಹತ್ವದ ಬದಲಾವಣೆ..!

ಟೀಂ ಇಂಡಿಯಾ ಭರ್ಜರಿ ಆರಂಭ: ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ನಾಯಕ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡುವಲ್ಲಿ ಟೀಂ ಇಂಡಿಯಾ ಬೌಲರ್‌ಗಳು ಯಶಸ್ವಿಯಾಗಿದ್ದಾರೆ. ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಮೊಹಮ್ಮದ್ ಸಿರಾಜ್ ತಾವೆಸೆದ ಮೊದಲ ಓವರ್‌ನಲ್ಲೇ ಜಾನಿ ಬೇರ್‌ಸ್ಟೋವ್ ಹಾಗೂ ಜೋ ರೂಟ್ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದ ಬೆನ್ ಸ್ಟೋಕ್ಸ್ ಹಾಗೂ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಅರ್ಧಶತಕದ ಜತೆಯಾಟವಾಡುವ ಮೂಲಕ ಟೀಂ ಇಂಡಿಯಾವನ್ನು ಕಾಡುವ ಮುನ್ಸೂಚನೆ ನೀಡಿತಾದರೂ ಹಾರ್ದಿಕ್‌ ಪಾಂಡ್ಯ ಈ ಇಬ್ಬರು ಬ್ಯಾಟರ್‌ಗಳನ್ನು ಪೆವಿಲಿಯನ್ನಿಗಟ್ಟುವಲ್ಲಿ ಹಾರ್ದಿಕ್ ಪಾಂಡ್ಯ ಯಶಸ್ವಿಯಾಗಿದ್ದಾರೆ. ಸದ್ಯ ಇಂಗ್ಲೆಂಡ್ ತಂಡವು 24 ಓವರ್ ಅಂತ್ಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 128 ರನ್ ಬಾರಿಸಿದ್ದು, ನಾಯಕ ಜೋಸ್ ಬಟ್ಲರ್(31) ಹಾಗೂ ಮೋಯಿನ್ ಅಲಿ(23) ಕ್ರೀಸ್‌ನಲ್ಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ