India Tour of South Africa: ಹರಿಣಗಳ ನಾಡಲ್ಲಿ ಟೆಸ್ಟ್ ಸರಣಿ ಗೆಲ್ಲಲು ಸುವರ್ಣಾವಕಾಶವೆಂದ ಭಜ್ಜಿ

By Suvarna NewsFirst Published Dec 9, 2021, 5:32 PM IST
Highlights

* ಡಿಸೆಂಬರ್ 26ರಿಂದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ಆರಂಭ

* ಇದುವರೆಗೂ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ ಟೀಂ ಇಂಡಿಯಾ

* ಈ ಬಾರಿ ಟೆಸ್ಟ್ ಸರಣಿ ಗೆಲ್ಲಲು ಸುವರ್ಣಾವಕಾಶವಿದೆ ಎಂದ ಹರ್ಭಜನ್ ಸಿಂಗ್

ನವದೆಹಲಿ(ಡಿ.09): ಕೋವಿಡ್ ಭೀತಿಯ (Coronavirus) ನಡುವೆಯೇ ಭಾರತ ಕ್ರಿಕೆಟ್ ತಂಡವು ಡಿಸೆಂಬರ್‌ ಅಂತರದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ (India Tour of South Africa) ಕೈಗೊಳ್ಳಲಿದ್ದು, ಮೂರು ಪಂದ್ಯಗಳ ಟೆಸ್ಟ್ ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಇದುವರೆಗೂ ಹರಿಣಗಳ ನಾಡಿನಲ್ಲಿ ಟೀಂ ಇಂಡಿಯಾ (Team India) ಟೆಸ್ಟ್ ಸರಣಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ ವಿರಾಟ್ ಕೊಹ್ಲಿ (Virat Kohli) ನೇತೃತ್ವದ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್‌ ಸರಣಿ ಗೆಲ್ಲಲು ಸುವರ್ಣಾವಕಾಶವಿದೆ ಎಂದು ಭಾರತ ಕ್ರಿಕೆಟ್ ತಂಡದ ಅನುಭವಿ ಸ್ಪಿನ್ನರ್‌ ಹರ್ಭಜನ್ ಸಿಂಗ್ (Harbhajan Singh) ಅಭಿಪ್ರಾಯಪಟ್ಟಿದ್ದಾರೆ. 

ಇತ್ತೀಚಿಗಿನ ವರ್ಷಗಳಲ್ಲಿ ಟೀಂ ಇಂಡಿಯಾ ಟೆಸ್ಟ್‌ ಕ್ರಿಕೆಟ್‌ನಲ್ಲಿ (Test Cricket) ಅಮೋಘ ಪ್ರದರ್ಶನ ತೋರುವ ಮೂಲಕ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ಇದಷ್ಟೇ ಅಲ್ಲದೇ ಆಸ್ಟ್ರೇಲಿಯಾ ತಂಡದ (Australia Cricket Team) ವಿರುದ್ದ ಕಾಂಗರೂ ನೆಲದಲ್ಲಿ ಎರಡು ಬಾರಿ ಟೆಸ್ಟ್‌ ಸರಣಿಯಲ್ಲಿ ಭಾರತ ಗೆದ್ದು ಬೀಗಿದೆ. ಇನ್ನು ಇಂಗ್ಲೆಂಡ್ ಪ್ರವಾಸದಲ್ಲೂ ಟೀಂ ಇಂಡಿಯಾ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಮುನ್ನಡೆ ಕಾಯ್ದುಕೊಂಡಿದೆ. ಕೊನೆಯ ಟೆಸ್ಟ್ ಪಂದ್ಯವು ಕೋವಿಡ್ ಭೀತಿಯಿಂದಾಗಿ 2022ರಕ್ಕೆ ಮುಂದೂಡಲ್ಪಟ್ಟಿದೆ. ಇದಾದ ಬಳಿಕ ತವರಿನಲ್ಲಿ ಹಾಲಿ ಟೆಸ್ಟ್ ವಿಶ್ವಚಾಂಪಿಯನ್‌ (ICC World Test Championship) ನ್ಯೂಜಿಲೆಂಡ್ ವಿರುದ್ದ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಟೀಂ ಇಂಡಿಯಾ 1-0 ಅಂತರದಲ್ಲಿ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ರೆಡ್ ಬಾಲ್‌ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನದ ಮೂಲಕ ಆತ್ಮವಿಶ್ವಾಸದಿಂದ ಬೀಗುತ್ತಿರುವ ಟೀಂ ಇಂಡಿಯಾ, ಇದೀಗ ಹರಿಣಗಳ ನಾಡಿನಲ್ಲಿ ಟೆಸ್ಟ್ ಸರಣಿ ಗೆಲ್ಲುವ ಕನಸು ಕಾಣುತ್ತಿದೆ. ಭಾರತ ತಂಡವು ದಕ್ಷಿಣ ಆಫ್ರಿಕಾ ನೆಲದಲ್ಲಿ ಇದುವರೆಗೂ 20 ಟೆಸ್ಟ್ ಪಂದ್ಯಗಳನ್ನಾಡಿದ್ದು, ಕೇವಲ ಮೂರು ಟೆಸ್ಟ್‌ ಪಂದ್ಯಗಳಲ್ಲಿ ಮಾತ್ರ ಗೆಲುವಿನ ನಗೆ ಬೀರಿದೆ. ಆದರೆ ಟೆಸ್ಟ್ ಸರಣಿ ಗೆಲ್ಲಲು ಭಾರತಕ್ಕೆ ಇದುವರೆಗೂ ಸಾಧ್ಯವಾಗಿಲ್ಲ.

ಈ ಬಾರಿ ಭಾರತ ಟೆಸ್ಟ್ ಸರಣಿ ಗೆಲ್ಲಲು ಸುವರ್ಣಾವಕಾಶವಿದೆ: 

ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಂ ಇಂಡಿಯಾ ಚೊಚ್ಚಲ ಟೆಸ್ಟ್ ಸರಣಿಯನ್ನು ಗೆಲ್ಲಲು ಬಂಗಾರದಂತ ಅವಕಾಶವಿದೆ. ನಾವು ದಕ್ಷಿಣ ಆಫ್ರಿಕಾ ತಂಡವನ್ನು ನೋಡಿದರೆ, ಈ ಹಿಂದೆ ಇದ್ದಷ್ಟು ಬಲಿಷ್ಠವಾಗಿ ಕಂಡು ಬರುತ್ತಿಲ್ಲ. ಕಳೆದ ಬಾರಿ ಭಾರತ ತಂಡವು ಹರಿಣಗಳ ನಾಡಿಗೆ ಪ್ರವಾಸ ಕೈಗೊಂಡಾಗ ದಕ್ಷಿಣ ಆಫ್ರಿಕಾ ತಂಡದಲ್ಲಿ ಎಬಿ ಡಿವಿಲಿಯರ್ಸ್ (AB de Villiers), ಫಾಫ್ ಡು ಪ್ಲೆಸಿಸ್ (Faf du Plessis) ಅವರಂತಹ ವಿಶ್ವಶ್ರೇಷ್ಠ ಆಟಗಾರರಿದ್ದರು. ಹೀಗಾಗಿ ಅವರು ಭಾರತವನ್ನು ಟೆಸ್ಟ್ ಸರಣಿ ಗೆಲ್ಲಲು ಬಿಟ್ಟಿರಲಿಲ್ಲ. ಹೀಗಿದ್ದೂ, ಭಾರತ ತಂಡವು ಅಲ್ಲಿ ಉತ್ತಮ ಪ್ರದರ್ಶನವನ್ನೇ ತೋರಿದೆ. ಇಲ್ಲಿಯವರೆಗೆ ನಮ್ಮವರು ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ, ಆದರೆ ಈ ಬಾರಿ ಭಾರತ ಟೆಸ್ಟ್‌ ಸರಣಿ ಗೆಲ್ಲಲು ಸುವರ್ಣಾವಕಾಶವಿದೆ, ಏಕೆಂದರೆ ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ಅಷ್ಟೊಂದು ಬಲಿಷ್ಠವಾಗಿಲ್ಲ ಎಂದು ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

India Tour of South Africa: ಬಲಿಷ್ಠ ಭಾರತ ತಂಡ ಪ್ರಕಟ, ಏಕದಿನ ತಂಡಕ್ಕೂ ರೋಹಿತ್ ಕ್ಯಾಪ್ಟನ್‌..!

ಭಾರತ ಕ್ರಿಕೆಟ್ ತಂಡವು (Indian Cricket Team) 2006ರಲ್ಲಿ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಪಂದ್ಯವನ್ನು ಜಯಿಸಿತ್ತು. ಡರ್ಬನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ 123 ರನ್‌ಗಳ ಗೆಲುವು ದಾಖಲಿಸಿತ್ತು. ಹೀಗಿದ್ದೂ ಭಾರತ 1-2 ರ ಅಂತರದಲ್ಲಿ ಟೆಸ್ಟ್ ಸರಣಿಯನ್ನು ಕೈಚೆಲ್ಲಿತು. ಇದಾದ ಬಳಿಕ 2010-11ರ ಪ್ರವಾಸದಲ್ಲಿ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕಾ ಜಯಿಸಿದರೆ, ಎರಡನೇ ಪಂದ್ಯವನ್ನು ಭಾರತ 87 ರನ್‌ಗಳಿಂದ ಜಯಿಸಿತು. ಮೂರನೇ ಪಂದ್ಯ ಡ್ರಾ ಆಗಿದ್ದರಿಂದ ಸರಣಿ 1-1ರಲ್ಲಿ ಸಮವಾಗಿತ್ತು. ಇದಾದ ಬಳಿಕ 2013-14ರಲ್ಲಿ ಭಾರತ 0-1ರಲ್ಲಿ ಟೆಸ್ಟ್ ಸರಣಿ ಕೈಚೆಲ್ಲಿತ್ತು. ಇನ್ನು 2018ರ ಪ್ರವಾಸದಲ್ಲಿ ಭಾರತ ತಂಡವು ಕೊನೆಯ ಪಂದ್ಯದಲ್ಲಿ ಅಂದರೆ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ 63 ರನ್‌ಗಳ ಗೆಲುವು ದಾಖಲಿಸಿತ್ತು, ಆದರೆ ಟೆಸ್ಟ್ ಸರಣಿ ಗೆಲ್ಲಲು ಸಾಧ್ಯವಾಗಿರಲಿಲ್ಲ.
 

click me!