
ಬೆಂಗಳೂರು: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಕೊನೆಗೂ ಎರಡು ವರ್ಷಗಳ ಬಳಿಕ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಗುಡ್ ಬೈ ಹೇಳಿದ್ದಾರೆ. ಇದೀಗ ಐಪಿಎಲ್ ಟ್ರೇಡ್ ಮೂಲಕ ರಿಷಭ್ ಪಂತ್, ಡೆಲ್ಲಿ ಕ್ಯಾಪಿಟಲ್ಸ್ ತೆಕ್ಕೆಗೆ ಜಾರಿದ್ದಾರೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಕುಲ್ದೀಪ್ ಯಾದವ್ ಅವರನ್ನು ಲಖನೌ ಸೂಪರ್ ಜೈಂಟ್ಸ್‌ಗೆ ನೀಡಿ, ಲಖನೌ ತಂಡದ ನಾಯಕರಾಗಿದ್ದ ರಿಷಭ್ ಪಂತ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
2025ರ ಐಪಿಎಲ್ ಹರಾಜಿನಲ್ಲಿ ಸಂಜೀವ್ ಗೋಯೆಂಕಾ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಬರೋಬ್ಬರಿ 27 ಕೋಟಿ ರುಪಾಯಿ ನೀಡಿ ರಿಷಭ್ ಪಂತ್ ಅವರನ್ನು ಖರೀದಿಸಿತ್ತು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ಮೊತ್ತಕ್ಕೆ ಹರಾಜಾದ ಭಾರತೀಯ ಬ್ಯಾಟರ್ ಎನ್ನುವ ಹಿರಿಮೆಗೆ ರಿಷಭ್ ಪಂತ್ ಪಾತ್ರರಾಗಿದ್ದರು.
ಭಾರೀ ನಿರೀಕ್ಷೆಯೊಂದಿಗೆ ಲಖನೌ ಸೂಪರ್ ಜೈಂಟ್ಸ್ ತಂಡ ಕೂಡಿಕೊಂಡಿದ್ದ ರಿಷಭ್ ಪಂತ್ ಅವರಿಗೆ ನಾಯಕ ಪಟ್ಟ ಕಟ್ಟಲಾಯಿತು. ಆದರೆ ರಿಷಭ್ ಪಂತ್ ಓರ್ವ ಬ್ಯಾಟರ್ ಆಗಿ ಹಾಗೂ ನಾಯಕನಾಗಿ ನಿರೀಕ್ಷೆ ಉಳಿಸಿಕೊಳ್ಳಲು ವಿಫಲವಾದರು. 2026ರ ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವು 14 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳನ್ನು ಗೆದ್ದು 10 ಪಂದ್ಯಗಳನ್ನು ಸೋಲುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದರ ಬೆನ್ನಲ್ಲೇ ಟೂರ್ನಿ ಮುಗಿಯುತ್ತಿದ್ದಂತೆಯೇ ಪಂತ್, ಲಖನೌ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ಇದೀಗ ಐಪಿಎಲ್ ಟ್ರೇಡ್ ವೇಳೆ 27 ಕೋಟಿಯ ಬೆಲೆಯನ್ನು 15 ಕೋಟಿಗೆ ಇಳಿಸಿಕೊಂಡು ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ. ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು 13.5 ಕೋಟಿ ರುಪಾಯಿಗೆ ಕುಲ್ದೀಪ್ ಯಾದವ್ ಅವರನ್ನು ಲಖನೌ ಸೂಪರ್ ಜೈಂಟ್ಸ್‌ಗೆ ಮಾರಾಟ ಮಾಡಿದೆ.
'Thank You Team' ಇದು ಲಖನೌ ತೊರೆದು ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ರಿಷಭ್ ಪಂತ್ ಅವರ ಭಾವನಾತ್ಮಕ ಪೋಸ್ಟ್. ರಿಷಭ್ ಪಂತ್ 2016ರಿಂದ 2024ರವರೆಗೆ 111 ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. ಈ ಮೂಲಕ ಡೆಲ್ಲಿ ಪರ ಅತಿಹೆಚ್ಚು ಪಂದ್ಯಗಳನ್ನಾಡಿದ ಆಟಗಾರ ಎನಿಸಿಕೊಂಡಿದ್ದರು. ಇನ್ನು ಇದಷ್ಟೇ ಅಲ್ಲದೇ 2021ರಿಂದ 2024ರವರೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 43 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಇದೀಗ ಮತ್ತೆ ಪಂತ್ ತಮ್ಮ ನೆಚ್ಚಿನ ತಂಡಕ್ಕೆ ವಾಪಾಸ್ಸಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.