ಒಬ್ಬ ಆಟಗಾರನಿಂದ ಪಂದ್ಯವಿಲ್ಲ ಗೆಲ್ಲಿಸಲು ಸಾಧ್ಯವಿಲ್ಲ, ಎಲ್ಲಾ ಆಟಗಾರರು ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದರೆ ಟೀಂ ಇಂಡಿಯಾದಿಂದ ಉತ್ತಮ ಪ್ರದರ್ಶನ ಹೊರಹೊಮ್ಮಲು ಸಾಧ್ಯ ಎಂದು ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಸಿಡ್ನಿ(ನ.30): ಆಸ್ಟ್ರೇಲಿಯಾ ವಿರುದ್ದದ ಮೊದಲೆರಡು ಪಂದ್ಯಗಳನ್ನು ಸೋಲುವ ಮೂಲಕ ಏಕದಿನ ಸರಣಿ ಕೈಚೆಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ನಾಯಕತ್ವದ ಬಗ್ಗೆ ಟೀಕೆಗಳು ಶುರುವಾಗಿದ್ದು, ಅನುಭವಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಭಾರತ ತಂಡದ ನಾಯಕನನ್ನು ಸಮರ್ಥಿಸಿಕೊಂಡಿದ್ದಾರೆ.
13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲೂ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲಲು ವಿಫಲವಾಗಿತ್ತು. ಇನ್ನು ಆಸೀಸ್ ವಿರುದ್ಧದ ಸತತ 2 ಸೋಲುಗಳು ಕೊಹ್ಲಿ ನಾಯಕತ್ವದ ಮೇಲೆ ಪ್ರಶ್ನೆಗಳೇಳುವಂತೆ ಮಾಡಿದೆ. ಹೀಗಿರುವಾಗಲೇ ಟೀಂ ಇಂಡಿಯಾ ಅನುಭವಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್, ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನು ಸಮರ್ಥಿಸಿಕೊಂಡಿದ್ದಾರೆ.
ನಾಯಕತ್ವ ನಿಭಾಯಿಸುವ ವಿಚಾರದಲ್ಲಿ ವಿರಾಟ್ ಕೊಹ್ಲಿ ಒತ್ತಡದಲ್ಲಿದ್ದಾರೆ ಎಂದು ನನಗನಿಸುವುದಿಲ್ಲ. ಸಹಜವಾಗಿಯೇ ಒಬ್ಬ ಆಟಗಾರನಿಂದ ಪಂದ್ಯವನ್ನು ಗೆಲ್ಲಿಸಲು ಸಾಧ್ಯವಿಲ್ಲ. ನಿಮಗೆ ಗೊತ್ತಾ ವಿಶ್ವಕಪ್ ಮುಕ್ತಾಯದ ಬಳಿಕ ಕೂಡಾ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸುವುದರ ಜತೆಗೆ ತಂಡದ ಪರ ಗರಿಷ್ಠ ರನ್ ಬಾರಿಸಿದ್ದಾರೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ ಕಿಂಗ್ ಕೊಹ್ಲಿ..!
ಕೆ.ಎಲ್ ರಾಹುಲ್ ಉತ್ತಮವಾಗಿ ಆಡುತ್ತಿರುವುದನ್ನು ನೋಡುವುದಕ್ಕೆ ಖುಷಿ ಎನಿಸುತ್ತದೆ. ಅದೇ ರೀತಿ ಇನ್ನು ಕೆಲವು ಆಟಗಾರರು ಸ್ಥಿರ ಪ್ರದರ್ಶನ ತೋರಿದರೆ ಮಾತ್ರ ಟೀಂ ಇಂಡಿಯಾದಿಂದ ಉತ್ತಮ ಪ್ರದರ್ಶನ ಹೊರಹೊಮ್ಮಲು ಸಾಧ್ಧ್ಯ. ಆಗ ವಿರಾಟ್ ಕೊಹ್ಲಿ ಮೇಲಿನ ಭಾರ ಕೂಡಾ ಕೊಂಚ ಕಡಿಮೆಯಾಗಿ, ತಮ್ಮಿಷ್ಟದಂತೆ ಕ್ರಿಕೆಟ್ ಆಡಲು ಸಾಧ್ಯವಾಗುತ್ತದೆ ಎಂದು ಭಜ್ಜಿ ಅಭಿಪ್ರಾಯಪಟ್ಟಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸಿಡ್ನಿಯಲ್ಲಿ ನಡೆದ ಮೊದಲೆರಡು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಮೊದಲ ಪಂದ್ಯವನ್ನು 66 ರನ್‌ಗಳಿಂದ ಸೋತಿದ್ದ ವಿರಾಟ್ ಪಡೆ, ಎರಡನೇ ಪಂದ್ಯದಲ್ಲೂ 51 ರನ್‌ಗಳಿಂದ ಮುಗ್ಗರಿಸಿ ಏಕದಿನ ಸರಣಿಯನ್ನು ಕೈಚೆಲ್ಲಿದೆ.