ಗುವಾಹಟಿ ಟೆಸ್ಟ್: ಮತ್ತೊಂದು ವೈಟ್‌ವಾಷ್‌ನತ್ತ ಮುಖ ಮಾಡಿದ ಟೀಂ ಇಂಡಿಯಾ! ಗಂಭೀರ್ ತಲೆದಂಡವಾಗುತ್ತಾ?

Published : Nov 25, 2025, 04:20 PM IST
India vs South Africa Day 3 Guwahati Test

ಸಾರಾಂಶ

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಭಾರತ ತಂಡವು 549 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ್ದು, ನಾಲ್ಕನೇ ದಿನದಾಟದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಕೊನೆಯ ದಿನ ಗೆಲುವಿಗೆ 522 ರನ್‌ಗಳ ಅಗತ್ಯವಿದೆ.

ಗುವಾಹಟಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ, ಮತ್ತೊಮ್ಮೆ ಸೋಲಿನತ್ತ ಮುಖ ಮಾಡಿದೆ. ಗೆಲ್ಲಲು ಬರೋಬ್ಬರಿ 549 ರನ್‌ಗಳ ಕಠಿಣ ಗುರಿ ಬೆನ್ನತ್ತಿರುವ ಟೀಂ ಇಂಡಿಯಾ, ನಾಲ್ಕನೇ ದಿನದಾಟದಂತ್ಯದ ವೇಳೆಗೆ ಎರಡು ವಿಕೆಟ್ ಕಳೆದುಕೊಂಡು 27 ರನ್ ಗಳಿಸಿದೆ. ಇನ್ನು ಕೊನೆಯ ದಿನ ಭಾರತಕ್ಕೆ ಗೆಲ್ಲಲು ಬರೋಬ್ಬರಿ 522 ರನ್‌ಗಳು ಬೇಕಿದ್ದರೇ, ಹರಿಣಗಳ ಪಡೆ ಟೆಸ್ಟ್ ಸರಣಿ ವೈಟ್‌ವಾಷ್ ಮಾಡಲು ಕೇವಲ 8 ವಿಕೆಟ್ ಬೇಕಾಗಿವೆ.

ಭಾರತ ಎದುರು ಮೊದಲ ಇನ್ನಿಂಗ್ಸ್‌ನಲ್ಲಿ 288 ರನ್‌ಗಳ ಬೃಹತ್ ಮುನ್ನಡೆ ಗಳಿಸಿದ ಹೊರತಾಗಿಯೂ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಫಾಲೋ ಆನ್ ಹೇರಲಿಲ್ಲ. ಇದಾದ ಬಳಿಕ ದಕ್ಷಿಣ ಆಫ್ರಿಕಾ ತಂಡವು ಮೂರನೇ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 26 ರನ್ ಕಲೆಹಾಕಿತು. ಇದಾದ ಬಳಿಕ ನಾಲ್ಕನೇ ದಿನದಲ್ಲಿ ದಕ್ಷಿಣ ಆಫ್ರಿಕಾ ತಂಡವು ಎಚ್ಚರಿಕೆಯ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ ರಿಕಲ್ಟನ್-ಏಯ್ಡನ್ ಮಾರ್ಕ್‌ರಮ್ ಜೋಡಿ 59 ರನ್‌ಗಳ ಜತೆಯಾಟವಾಡಿತು. ರಿಕಲ್ಟನ್ 35 ಹಾಗೂ ಮಾರ್ಕ್‌ರಮ್ 29 ರನ್ ಗಳಿಸಿ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ತೆಂಬಾ ಬವುಮಾ ಅವರನ್ನು ಕೇವಲ 3 ರನ್‌ಗಳಿಗೆ ವಾಷಿಂಗ್ಟನ್ ಪೆವಿಲಿಯನ್ ಹಾದಿ ತೋರಿಸಿದರು.

ಭಾರತವನ್ನು ಕಾಡಿದ ಸ್ಟಬ್ಸ್-ಟೋನಿ ಜೋಡಿ:

ಒಂದು ಹಂತದಲ್ಲಿ ಕೇವಲ 73 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ನಾಲ್ಕನೇ ವಿಕೆಟ್‌ಗೆ ಟ್ರಿಸ್ಟಿನ್ ಸ್ಟಬ್ಸ್ ಹಾಗೂ ಟೋನಿ ಡಿ ಝೋರ್ಜಿ ಜೋಡಿ ಆಕರ್ಷಕ 101 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಟೋನಿ ಡಿ ಝೋರ್ಜಿ 49 ರನ್ ಗಳಿಸಿ ಜಡೇಜಾ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಇನ್ನು ಸ್ಟಬ್ಸ್ 180 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 94 ರನ್ ಸಿಡಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ವಿಯಾನ್ ಮುಲ್ಡರ್ 35 ರನ್ ಗಳಿಸಿ ಅಜೇಯರಾಗುಳಿದರು. ಸ್ಟಬ್ಸ್ ವಿಕೆಟ್ ಪತನವಾಗುತ್ತಿದ್ದಂತೆಯೇ ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಆಗ ಹರಿಣಗಳ ಪಡೆಯ ಸ್ಕೋರ್ 5 ವಿಕೆಟ್ ನಷ್ಟಕ್ಕೆ 260 ರನ್‌ಗಳಾಗಿದ್ದವು.

ಭಾರತಕ್ಕೆ ಕಠಿಣ ಗುರಿ

ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದ ಭಾರತ ತಂಡಕ್ಕೆ ಇದೀಗ ಗೆಲ್ಲಲು ಬರೋಬ್ಬರಿ 549 ರನ್‌ಗಳ ಕಠಿಣ ಗುರಿ ಸಿಕ್ಕಿದೆ. ನಾಲ್ಕನೇ ದಿನದಾಟದಂತ್ಯಕ್ಕೆ ಭಾರತ 2 ವಿಕೆಟ್ ಕಳೆದುಕೊಂಡು 27 ರನ್ ಗಳಿಸಿದೆ. ಜೈಸ್ವಾಲ್ 13 ರನ್ ಗಳಿಸಿ ಯಾನ್ಸನ್‌ಗೆ ವಿಕೆಟ್ ಒಪ್ಪಿಸಿದರೆ, ಕೆ ಎಲ್ ರಾಹುಲ್ 6 ರನ್ ಗಳಿಸಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ಸದ್ಯ ಸಾಯಿ ಸುದರ್ಶನ್ 2 ಹಾಗೂ ನೈಟ್‌ವಾಚ್‌ಮನ್ ಕುಲ್ದೀಪ್ ಯಾದವ್ 4 ರನ್ ಗಳಿಸಿ ಕೊನೆಯ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಹೆಡ್‌ಕೋಚ್ ಗೌತಮ್ ಗಂಭೀರ್ ತಲೆದಂಡವಾಗುತ್ತಾ?

ಇನ್ನು ಈಗಾಗಲೇ ತವರಿನಲ್ಲಿ ಗಂಭೀರ್ ಮಾರ್ಗದರ್ಶನದಲ್ಲಿ ಮೊದಲ ಸಲ ಭಾರತ ತಂಡವು ನ್ಯೂಜಿಲೆಂಡ್ ಎದುರು 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೈಟ್‌ವಾಷ್ ಮುಖಭಂಗ ಅನುಭವಿಸಿತ್ತು. ಇದೀಗ ಹರಿಣಗಳ ಪಡೆ ಎದುರು ಮೊದಲ ಪಂದ್ಯ ಸೋತಿರುವ ಭಾರತ, ಇದೀಗ ಎರಡನೇ ಪಂದ್ಯದಲ್ಲಿ ಸೋಲಿನ ಭೀತಿಗೆ ಸಿಲುಕಿದೆ. ಹೀಗಾಗಿ ಒಂದು ವೇಳೆ ಎರಡನೇ ಟೆಸ್ಟ್ ಸೋತರೇ ಹೆಡ್‌ಕೋಚ್ ಗೌತಮ್ ಗಂಭೀರ್ ತಲೆದಂಡವಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!