ಧವನ್, ಕೃನಾಲ್‌, ರಾಹುಲ್ ಅಬ್ಬರ; ಇಂಗ್ಲೆಂಡ್‌ಗೆ ಕಠಿಣ ಗುರಿ

Suvarna News   | Asianet News
Published : Mar 23, 2021, 05:50 PM IST
ಧವನ್, ಕೃನಾಲ್‌, ರಾಹುಲ್ ಅಬ್ಬರ; ಇಂಗ್ಲೆಂಡ್‌ಗೆ ಕಠಿಣ ಗುರಿ

ಸಾರಾಂಶ

ಶಿಖರ್ ಧವನ್ ಶತಕ ವಂಚಿತ ಬ್ಯಾಟಿಂಗ್ ಹಾಗೂ ಕೊನೆಯಲ್ಲಿ ಕೃನಾಲ್ ಪಾಂಡ್ಯ ಹಾಗೂ ಕೆ,ಎಲ್. ರಾಹುಲ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಮೊದಲ ಏಕದಿನ ಪಂದ್ಯದಲ್ಲಿ 317 ರನ್‌ ಬಾರಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಪುಣೆ(ಮಾ.23): ಶಿಖರ್ ಧವನ್ ಶತಕವಂಚಿತ(98) ಬ್ಯಾಟಿಂಗ್‌ ಹಾಗೂ ನಾಯಕ ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್‌ ಹಾಗೂ ಕೃನಾಲ್‌ ಪಾಂಡ್ಯ ಸ್ಪೋಟಕ ಅರ್ಧಶತಕಗಳ ನೆರವಿನಿಂದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್‌ ಕಳೆದುಕೊಂಡು 317 ರನ್‌ ಬಾರಿಸಿದ್ದು, ಪ್ರವಾಸಿ ಇಂಗ್ಲೆಂಡ್‌ಗೆ ಕಠಿಣ ಗುರಿ ನೀಡಿದೆ.

ಹೌದು, ಇಲ್ಲಿನ ಎಂಸಿಎ ಕ್ರಿಕೆಟ್‌ ಮೈದಾನದಲ್ಲಿ ಟಾಸ್ ಸೋತರೂ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಭಾರತ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಶಿಖರ್ ಧವನ್‌ ಹಾಗೂ ರೋಹಿತ್ ಶರ್ಮಾ ಜೋಡಿ 15.1  ಓವರ್‌ಗಳಲ್ಲಿ 64 ರನ್‌ಗಳ ಜತೆಯಾಟವಾಡಿತು. ರೋಹಿತ್ ಶರ್ಮಾ 42 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ ಕೇವಲ 28 ರನ್‌ ಬಾರಿಸಿ ಬೆನ್‌ ಸ್ಟೋಕ್ಸ್‌ ಬೌಲಿಂಗ್‌ನಲ್ಲಿ ಬಟ್ಲರ್‌ಗೆ ಕ್ಯಾಚಿತ್ತು ಪೆವಿಲಿಯನ್‌ ಸೇರಿದರು.

ಡೆಲ್ಲಿ ಬ್ಯಾಟ್ಸ್‌ಮನ್‌ಗಳ ಜುಗಲ್ಬಂದಿ: ರೋಹಿತ್ ವಿಕೆಟ್‌ ಪತನದ ಬಳಿಕ ಕ್ರೀಸ್‌ಗಿಳಿದ ವಿರಾಟ್‌ ಕೊಹ್ಲಿ ಗಬ್ಬರ್‌ ಸಿಂಗ್ ಖ್ಯಾತಿಯ ಧವನ್‌ ಜತೆಗೂಡಿ ಎರಡನೇ ವಿಕೆಟ್‌ಗೆ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. 2ನೇ ವಿಕೆಟ್‌ಗೆ ಈ ಜೋಡಿ ಕೇವಲ 102 ಎಸೆತಗಳನ್ನು ಎದುರಿಸಿ 105 ರನ್‌ ಕಲೆಹಾಕಿತು. ಡೆಲ್ಲಿ ಮೂಲದ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಇಂಗ್ಲೆಂಡ್‌ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 60 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 56 ರನ್‌ ಬಾರಿಸಿ ಮಾರ್ಕ್‌ ವುಡ್‌ಗೆ ವಿಕೆಟ್‌ ಒಪ್ಪಿಸಿದರು. ಅಂದಹಾಗೆ ಇದು ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಬಾರಿಸಿದ 61ನೇ ಏಕದಿನ ಅರ್ಧಶತಕ ಎನಿಸಿತು.

2 ರನ್‌ ಅಂತರದಲ್ಲಿ ಶತಕ ವಂಚಿತರಾದ ಧವನ್‌: ಇಂಗ್ಲೆಂಡ್ ವಿರುದ್ದ ಟಿ20 ಸರಣಿಯಲ್ಲಿ ಕೇವಲ ಒಂದು ಪಂದ್ಯವನ್ನಾಡಿ ಬೆಂಚ್‌ ಕಾಯಿಸಿದ್ದ ಶಿಖರ್ ಧವನ್, ಮೊದಲ ಏಕದಿನ ಪಂದ್ಯದಲ್ಲೇ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ಫಾರ್ಮ್‌ಗೆ ಮರಳಿದ್ದಾರೆ. ಒಟ್ಟು 106 ಎಸೆತಗಳನ್ನು ಎದುರಿಸಿದ ಧವನ್‌ 11 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 98 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಶಿಖರ್ ಧವನ್ ಕೇವಲ 2 ರನ್‌ ಅಂತರದಲ್ಲಿ 18ನೇ ಏಕದಿನ ಶತಕ ವಂಚಿತರಾದರು.

ಕೊನೆಯಲ್ಲಿ ಅಬ್ಬರಿಸಿದ ಕೃನಾಲ್‌-ರಾಹುಲ್‌: ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್‌ ಅಯ್ಯರ್(6) ಹಾಗೂ ಹಾರ್ದಿಕ್‌ ಪಾಂಡ್ಯ(1) ಒಂದಂಕಿ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿದಾಗ ಟೀಂ ಇಂಡಿಯಾ ಪಾಳಯ ಕೊಂಚ ಆತಂಕಕ್ಕೆ ಒಳಗಾಗಿತ್ತು. ಹಾರ್ದಿಕ್‌ ಪಾಂಡ್ಯ ವಿಕೆಟ್‌ ಒಪ್ಪಿಸಿದಾಗ ಭಾರತ 40.3 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 205 ರನ್‌ ಗಳಿಸಿತ್ತು. ಆ ಬಳಿಕ ಜತೆಯಾದ ಕೆ.ಎಲ್‌ ರಾಹುಲ್‌ ಹಾಗೂ ಚೊಚ್ಚಲ ಏಕದಿನ ಪಂದ್ಯವನ್ನಾಡುತ್ತಿರುವ ಕೃನಾಲ್‌ ಪಾಂಡ್ಯ ಸ್ಪೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾದರು. ಕೃನಾಲ್ ಪಾಂಡ್ಯ ಕೇವಲ 26 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಸ್ಪೋಟಕ ಅರ್ಧಶತಕ ಬಾರಿಸಿದರು. ಇದರೊಂದಿಗೆ ಪಾದಾರ್ಪಣೆ ಪಂದ್ಯದಲ್ಲೇ ಅತಿವೇಗದ ಅರ್ಧಶತಕ ಬಾರಿಸಿದ ಬ್ಯಾಟ್ಸ್‌ಮನ್‌ ಎನ್ನುವ ವಿಶ್ವದಾಖಲೆ ನಿರ್ಮಿಸಿದರು.

ಇನ್ನು ಟಿ20 ಸರಣಿಯಲ್ಲಿ ರನ್‌ ಬರ ಅನುಭವಿಸಿದ್ದ ಕೆ.ಎಲ್‌. ರಾಹುಲ್‌ ಕೂಡಾ ಚುರುಕಿನ ಅರ್ಧಶತಕ ಬಾರಿಸಿ ಗಮನ ಸೆಳೆದರು. ಕೇವಲ 39 ಎಸೆತಗಳಲ್ಲಿ ರಾಹುಲ್‌ ತಲಾ 3 ಬೌಂಡರಿ ಹಾಗೂ ಸಿಕ್ಸರ್‌ ನೆರವಿನಿಂದ 9ನೇ ಅರ್ಧಶತಕ ಬಾರಿಸಿದರು. 6ನೇ ವಿಕೆಟ್‌ಗೆ ಈ ಜೋಡಿ 57 ಎಸೆತಗಳನ್ನು ಎದುರಿಸಿ ಈ ಜೋಡಿ ಮುರಿಯದ 112 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ರಾಹುಲ್‌ 62 ಹಾಗೂ ಕೃನಾಲ್‌ 58 ರನ್‌ ಬಾರಿಸಿ ಅಜೇಯರಾಗುಳಿದರು.

ಇಂಗ್ಲೆಂಡ್‌ ಪರ ಬೆನ್‌ ಸ್ಟೋಕ್ಸ್‌ 34 ರನ್‌ ನೀಡಿ 3 ವಿಕೆಟ್‌ ಪಡೆದರೆ, ಮಾರ್ಕ್‌ ವುಡ್ 72 ರನ್‌ ನೀಡಿ 2 ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್

ಭಾರತ: 
ಶಿಖರ್ ಧವನ್‌: 98
ಬೆನ್ ಸ್ಟೋಕ್ಸ್‌: 34/3
(* ಟೀಂ ಇಂಡಿಯಾ ಬ್ಯಾಟಿಂಗ್‌ ಮುಕ್ತಾಯದ ವೇಳೆಗೆ)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Ind vs SA: ಶುಭ್‌ಮನ್ ಗಿಲ್ ಫುಲ್ ಫಿಟ್; ಈ ಡೇಟ್‌ಗೆ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡೋದು ಫಿಕ್ಸ್!
ಕ್ರೈಸ್ಟ್‌ಚರ್ಚ್ ಪವಾಡ: ಕಿವೀಸ್ ಎದುರು ಐತಿಹಾಸಿಕ ಡ್ರಾ ಸಾಧಿಸಿದ ವೆಸ್ಟ್ ಇಂಡೀಸ್!