
ಲೀಡ್ಸ್: 2025-27ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಟ್ರೋಫಿ ಗೆಲ್ಲುವ ಗುರಿ ಇಟ್ಟುಕೊಂಡಿರುವ ಭಾರತ ತಂಡ ಶುಕ್ರವಾರದಿಂದ ತನ್ನ ಅಭಿಯಾನ ಆರಂಭಿಸಲಿದೆ. ತಂಡ ಇಂಗ್ಲೆಂಡ್ ವಿರುದ್ಧ5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲು ಸಜ್ಜಾಗುತ್ತಿದೆ. ಆದರೆ ಇಬ್ಬರು ದಿಗ್ಗಜ ಕ್ರಿಕೆಟಿಗರ ಅನುಪಸ್ಥಿತಿಯಲ್ಲಿ ಭಾರತಕ್ಕೆ ಆಯ್ಕೆ ಗೊಂದಲ ಎದುರಾಗುವ ಸಾಧ್ಯತೆ ಹೆಚ್ಚು.
ಪ್ರಮುಖ ಆಟಗಾರರಾಗಿದ್ದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇತ್ತೀಚಿಗೆ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಹಲವು ಬದಲಾವಣೆ ಸಹಜ. ಕೆ.ಎಲ್. ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಆಡಬಹುದು. ಆದರೆ ತಂಡದ 3ನೇ ಕ್ರಮಾಂಕಕ್ಕೆ ಗೊಂದಲ ಸಹಜ. ಈ ಸ್ಥಾನಕ್ಕೆ ಸಾಯಿ ಸುದರ್ಶನ್ ಹಾಗೂ ಅಭಿಮನ್ಯು ಈಶ್ವರನ್ ನಡುವೆ ಪೈಪೋಟಿಯಿದೆ. ಸುದರ್ಶನ್ ಐಪಿಎಲ್‌ನಲ್ಲಿ ತಮ್ಮ ಸಾಮರ್ಥ ಸಾಬೀತುಪಡಿಸಿದ್ದು, ಇಂಗ್ಲೆಂಡ್ ಕೌಂಟಿಯಲ್ಲೂ ಆಡಿದ ಅನುಭವವಿದೆ. ಹೀಗಾಗಿ ಅಭಿಮನ್ಯುರನ್ನು ಹಿಂದಿಕ್ಕಿ ಸುದರ್ಶನ್ ಸ್ಥಾನ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಿದೆ.
4, 5ನೇ ಕ್ರಮಾಂಕ ಫಿಕ್ಸ್: 4 ಮತ್ತು 5ನೇ ಕ್ರಮಾಂಕದ ಬಗ್ಗೆ ಉಪನಾಯಕ ರಿಷಭ್ ಪಂತ್ ಸ್ಪಷ್ಟನೆ ನೀಡಿದ್ದಾರೆ. ನಾಯಕ ಶುಭಮನ್ ಗಿಲ್ 4ನೇ ಕ್ರಮಾಂಕದಲ್ಲಿ ಆಡಲಿದ್ದು, ತಾವು 5ನೇ ಕ್ರಮಾಂಕದಲ್ಲೇ ಮುಂದುವರಿಯುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಕಳೆದ 33 ವರ್ಷಗಳಿಂದಲೂ ಭಾರತ ತಂಡದ 4ನೇ ಕ್ರಮಾಂಕ ಸಚಿನ್ ತೆಂಡುಲ್ಕರ್ ಹಾಗೂ ವಿರಾಟ್ ಕೊಹ್ಲಿ ಈ ಇಬ್ಬರು ಪ್ರಮುಖ ಬ್ಯಾಟರ್‌ಗಳ ಹಿಡಿತದಲ್ಲಿತ್ತು. ಸಚಿನ್ ತೆಂಡುಲ್ಕರ್ ಹಾಗೂ ಅವರ ನಿವೃತ್ತಿ ಬಳಿಕ ವಿರಾಟ್ ಕೊಹ್ಲಿ 4ನೇ ಕ್ರಮಾಂಕದಲ್ಲಿ ಪ್ರಾಬಲ್ಯ ಸಾಧಿಸಿದ್ದರು. ಸದ್ಯ ಕೊಹ್ಲಿ ನಿವೃತ್ತಿಯಾಗಿದ್ದಾರೆ. ಹೀಗಾಗಿ ಗಿಲ್ ಮೇಲೆ ಹೆಚ್ಚಿನ ಹೊಣೆಗಾರಿಕೆಯಿದೆ.
3ನೇ ಕ್ರಮಾಂಕದ ಬಗ್ಗೆ ಚರ್ಚೆಯಾಗ್ತಿದೆ: ಪಂತ್
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪನಾಯಕ ರಿಷಭ್ ಪಂತ್, '3ನೇ ಕ್ರಮಾಂಕದಲ್ಲಿ ಯಾರು ಆಡಲಿದ್ದಾರೆ ಎಂಬುದರ ಕುರಿತು ಇನ್ನೂ ಚರ್ಚೆ ನಡೆಯುತ್ತಿದೆ. ಗಿಲ್ 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆ. ನಾನು 5ನೇ ಕ್ರಮಾಂಕದಲ್ಲೇ ಇರುತ್ತೇನೆ. ಇತರ ಸ್ಥಾನಗಳ ಬಗ್ಗೆ ಚರ್ಚೆ ನಡೆಯುತ್ತಿದೆ' ಎಂದಿದ್ದಾರೆ.
ಕರುಣ್‌ಗೆ ಅವಕಾಶ ನಿರೀಕ್ಷೆ: 2017ರಲ್ಲಿ ಭಾರತ ಪರ ಕೊನೆ ಬಾರಿ ಆಡಿದ್ದ ಕರುಣ್ ನಾಯರ್ 8 ವರ್ಷ ಬಳಿಕ ಮತ್ತೆ ತಂಡಕ್ಕೆ ಆಯ್ಕೆಯಾಗಿದ್ದಾರೆ. ಭಾರತ ಪರ ಟೆಸ್ಟ್ ನಲ್ಲಿ ತ್ರಿಶತಕ ಸಿಡಿಸಿದ ಇಬ್ಬರು ಆಟಗಾರರಲ್ಲಿ ಒಬ್ಬರಾಗಿರುವ ಕರುಣ್ (ಮತ್ತೊಬ್ಬರು ವೀರೇಂದ್ರ ಸೆಹ್ವಾಗ್) ಇತ್ತೀಚೆಗೆ ಇಂಗ್ಲೆಂಡ್ ಲಯನ್ಸ್ ವಿರುದ್ಧ ದ್ವಿಶತಕ ಗಳಿಸಿದ್ದರು. ಅವರು ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದ್ದು, 6ನೇ ಕ್ರಮಾಂಕದಲ್ಲಿ ಆಡಬಹುದು. ಕರುಣ್‌ರನ್ನು 3ನೇ ಕ್ರಮಾಂಕದಲ್ಲಿ ಆಡಿಸುವ ಬಗ್ಗೆಯೂ ಚರ್ಚೆಯಾಗುತ್ತಿದೆ ಎಂದು ವರದಿಯಾಗಿದೆ.
ಇನ್ನು, ಸ್ಪಿನ್ ಆಲ್ರೌಂಡರ್ ಆಗಿ ರವೀಂದ್ರ ಜಡೇಜಾ ಆಡಿದರೆ, ವೇಗದ ಬೌಲಿಂಗ್ ಆಲ್ರೌಂಡರ್ ಸ್ಥಾನಕ್ಕೆ ಶಾರ್ದೂಲ್ ಠಾಕೂರ್ ಅಥವಾ ನಿತೀಶ್ ಕುಮಾರ್ ರೆಡ್ಡಿ ಆಯ್ಕೆಯಾಗಬಹುದು. ಅಥವಾ ಇವರಿಬ್ಬರ ಬದಲು ಸ್ಪಿನ್ನರ್ ಕುಲೀಪ್ ಯಾದವ್‌ರನ್ನು ಆಡಿಸಿದರೂ ಅಚ್ಚರಿಯಿಲ್ಲ. ವೇಗಿಗಳಾದ ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಜೊತೆ 3ನೇ ವೇಗಿ ಸ್ಥಾನಕ್ಕೆ ಪ್ರಸಿದ್ಧ ಕೃಷ್ಣ ಮುಂಚೂಣಿಯಲ್ಲಿದ್ದಾರೆ.
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ
ಜೂನ್ 20-24; ಹೆಡಿಂಗ್ಲೆ ಟೆಸ್ಟ್
ಜುಲೈ 2-6; ಎಡ್ಜ್‌ಬಾಸ್ಟನ್ ಟೆಸ್ಟ್
ಜುಲೈ 10-14; ಲಾರ್ಡ್ಸ್ ಟೆಸ್ಟ್
ಜುಲೈ 23-27; ಓಲ್ಡ್ ಟ್ರಾಫರ್ಡ್ ಟೆಸ್ಟ್
ಜುಲೈ 31ರಿಂದ ಆಗಸ್ಟ್ 04; ದಿ ಓವಲ್
ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡ ಹೀಗಿದೆ:
ಶುಭ್‌ಮನ್ ಗಿಲ್(ನಾಯಕ), ರಿಷಭ್ ಪಂತ್(ಉಪನಾಯಕ& ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಕೆ ಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೇಲ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್‌ದೀಪ್ ಸಿಂಗ್, ಅರ್ಶದೀಪ್ ಸಿಂಗ್, ಕುಲ್ದೀಪ್ ಯಾದವ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.