Ind vs SL: ಲಂಕಾ ಎದುರಿನ ಟಿ20 ಸರಣಿಯಿಂದ ಟೀಂ ಇಂಡಿಯಾ ಸ್ಟಾರ್ ವೇಗಿ ಔಟ್..?

By Suvarna NewsFirst Published Feb 21, 2022, 7:10 PM IST
Highlights

* ವಿಂಡೀಸ್ ಎದುರು ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ

* ಲಂಕಾ ಎದುರಿನ ಸರಣಿಗೆ ಸಜ್ಜಾದ ಭಾರತ ತಂಡಕ್ಕೆ ಶಾಕ್

* ಟೀಂ ಇಂಡಿಯಾ ವೇಗಿ ದೀಪಕ್‌ ಚಹರ್ ಲಂಕಾ ಎದುರಿನ ಟಿ20 ಸರಣಿಯಿಂದ ಔಟ್..?

ಬೆಂಗಳೂರು(ಫೆ.21): ವೆಸ್ಟ್ ಇಂಡೀಸ್ ವಿರುದ್ದದ ಮೂರು ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಟೀಂ ಇಂಡಿಯಾ(Team India), ಇದೀಗ ಶ್ರೀಲಂಕಾ ಸವಾಲಿಗೆ ಸಜ್ಜಾಗಿದೆ. ಲಂಕಾ ವಿರುದ್ದದ ಮೂರು ಪಂದ್ಯಗಳ ಟಿ20 ಸರಣಿಯು ಫೆಬ್ರವರಿ 24ರಿಂದ ಆರಂಭವಾಗಲಿದೆ. ಲಂಕಾ ಎದುರಿನ ಸರಣಿಗೂ ಮುನ್ನ ಟೀಂ ಇಂಡಿಯಾ ಪಾಲಿಗೆ ಕೊಂಚ ಹಿನ್ನೆಡೆಯಾಗುವ ಸಾಧ್ಯತೆಯಿದೆ.

ಹೌದು, ಟೀಂ ಇಂಡಿಯಾ ಅನುಭವಿ ವೇಗಿ ದೀಪಕ್ ಚಹರ್ (Deepak Chahar) ಸ್ನಾಯು ಸೆಳೆತಕ್ಕೆ ಒಳಗಾಗಿದ್ದು, ಲಂಕಾ ಎದುರಿನ ಸರಣಿಯಲ್ಲಿ ತಂಡದಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ. ವೆಸ್ಟ್ ಇಂಡೀಸ್ ವಿರುದ್ದದ ಮೂರನೇ ಹಾಗೂ ಕೊನೆಯ ಪಂದ್ಯದ ವೇಳೆ ದೀಪಕ್ ಚಹರ್‌ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಆದರೆ ಇದುವರೆಗೂ ದೀಪಕ್ ಚಹರ್ ಗಾಯದ ಸಮಸ್ಯೆ ಕುರಿತಂತೆ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ. ದೀಪಕ್ ಚಹರ್ ಕೊನೆಯ ಟಿ20 ಪಂದ್ಯದಲ್ಲಿ ಕೇವಲ 1.5 ಓವರ್‌ಗಳನ್ನಷ್ಟೇ ಬೌಲಿಂಗ್ ಮಾಡಲು ಯಶಸ್ವಿಯಾದರು. ಇದಾದ ಬಳಿಕ ಬೌಲಿಂಗ್ ಮಾಡಲು ದೀಪಕ್ ಚಹರ್ ಕಣಕ್ಕಿಳಿಯಲಿಲ್ಲ. ಇದರ ಹೊರತಾಗಿಯೂ ದೀಪಕ್ ಚಹರ್, ಅನುಪಸ್ಥಿತಿ ತಂಡವನ್ನು ಕಾಡಲಿಲ್ಲ. ವಿಂಡೀಸ್ ಎದುರಿನ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ 17 ರನ್‌ಗಳ ಅಂತರದ ಜಯ ಸಾಧಿಸುವ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್‌ ಮಾಡಿತ್ತು.

ಚೆನ್ನೈ ಸೂಪರ್‌ ಕಿಂಗ್ಸ್‌ ಪಾಳಯದಲ್ಲಿ ಶುರುವಾಯ್ತು ನಡುಕ:

ಕೆಲವು ಮಾಧ್ಯಮಗಳ ವರದಿಯ ಪ್ರಕಾರ ದೀಪಕ್ ಚಹರ್‌ಗೆ ಮೊದಲ ಹಂತದ ಟಿಯರ್ ಆಗಿದೆ ಎನ್ನಲಾಗಿದೆ. ಈ ವಿಚಾರ ಖಚಿತವಾದರೆ, ದೀಪಕ್ ಚಹರ್ ಕನಿಷ್ಠ ಪಕ್ಷ 6 ವಾರಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗಿ ಬರಬಹುದು. ಒಂದು ವೇಳೆ ದೀಪಕ್ ಚಹರ್ ಆರು ವಾರಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿದರೆ, 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ ಆರಂಭಿಕ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯೆತೆ ಹೆಚ್ಚಿದೆ.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಆಟಗಾರರ ಮೆಗಾ ಹರಾಜಿನಲ್ಲಿ (IPL Mega Auction) 29 ವರ್ಷದ ದೀಪಕ್ ಚಹರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ಫ್ರಾಂಚೈಸಿಯು ಬರೋಬ್ಬರಿ 14 ಕೋಟಿ ರುಪಾಯಿ ನೀಡಿ ಖರೀದಿಸಿದೆ. ಇದರೊಂದಿಗೆ ಐಪಿಎಲ್‌ ಹರಾಜಿನ ಇತಿಹಾಸದಲ್ಲಿ ಅತಿಹೆಚ್ಚು ಮೊತ್ತಕ್ಕೆ ಹರಾಜಾದ ಭಾರತೀಯ ಬೌಲರ್ ಎನ್ನುವ ಕೀರ್ತಿಗೆ ದೀಪಕ್ ಚಹರ್ ಪಾತ್ರರಾಗಿದ್ದಾರೆ. ಒಂದು ವೇಳೆ ದೀಪಕ್ ಚಹರ್‌ ಐಪಿಎಲ್‌ ಆರಂಭಿಕ ಪಂದ್ಯಗಳಿಂದ ಹೊರಗುಳಿದರೆ, ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಪಾಲಿಗೆ ದೊಡ್ಡ ಹಿನ್ನೆಡೆಯಾಗಿ ಪರಿಣಮಿಸುವ ಸಾಧ್ಯತೆಯಿದೆ. 

Sri Lanka Squad : ಭಾರತ ಎದುರಿನ ಟಿ20 ಸರಣಿಗೆ ಶ್ರೀಲಂಕಾ ಕ್ರಿಕೆಟ್ ತಂಡ ಪ್ರಕಟ..!

ದೀಪಕ್ ಚಹರ್ ಭಾರತ ರಾಷ್ಟ್ರೀಯ ತಂಡದ ಪರ ಗಮನಾರ್ಹ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾದಲ್ಲಿ ಭದ್ರವಾಗಿ ನೆಲೆಯೂರುವತ್ತ ದಿಟ್ಟ ಹೆಜ್ಜೆಯನ್ನು ಇಡಲಾರಂಭಿಸಿದ್ದಾರೆ. ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಪರಿಣಾಮಕಾರಿ ದಾಳಿ ನಡೆಸುತ್ತಾ ಗಮನ ಸೆಳೆಯುತ್ತಿರುವ ದೀಪಕ್ ಚಹರ್, ಅಗತ್ಯ ಸಂದರ್ಭಗಳಲ್ಲಿ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡುತ್ತಾ ಬಂದಿದ್ದಾರೆ. ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವು ಫೆಬ್ರವರಿ 24ರಂದು ಲಖನೌದಲ್ಲಿ ಆರಂಭವಾಗಲಿದೆ. ಇದಾದ ಬಳಿಕ ಫೆಬ್ರವರಿ 26 ಹಾಗೂ 27ರಂದು ಧರ್ಮಶಾಲಾದಲ್ಲಿ ಉಳಿದೆರಡು ಟಿ20 ಪಂದ್ಯಗಳ ನಡೆಯಲಿದೆ. ಈ ಸರಣಿಯ ಮಟ್ಟಿಗೆ ದೀಪಕ್ ಚಹರ್‌ ತಂಡದಿಂದ ಹೊರಗುಳಿಯುವ ಸಾಧ್ಯತೆಯಿದೆ.
 

click me!