
ಸಿಡ್ನಿ(ಡಿ.08): ಆಸ್ಪ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು ಈಗಾಗಲೇ ತನ್ನ ತೆಕ್ಕೆಗೆ ಹಾಕಿಕೊಂಡಿರುವ ಭಾರತ, ಮಂಗಳವಾರ ಇಲ್ಲಿ ನಡೆಯಲಿರುವ 3ನೇ ಪಂದ್ಯವನ್ನು ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡುವ ಉತ್ಸಾಹದಲ್ಲಿದೆ. ಏಕದಿನ ಸರಣಿ ಸೋಲಿನ ಬಳಿಕ ಟಿ20 ಸರಣಿ ಗೆದ್ದಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದ್ದು, ಟೆಸ್ಟ್ ಸರಣಿಗೂ ಮುನ್ನ ಮತ್ತೊಂದು ಗೆಲುವು ದಾಖಲಿಸುವ ಗುರಿ ವಿರಾಟ್ ಕೊಹ್ಲಿ ಪಡೆಯದ್ದಾಗಿದೆ.
2016ರ ಪ್ರವಾಸದಲ್ಲಿ ಟಿ20 ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದ ಭಾರತ, ಮತ್ತೊಂದು ಕ್ಲೀನ್ ಸ್ವೀಪ್‌ನೊಂದಿಗೆ ಆಸ್ಪ್ರೇಲಿಯಾ ನೆಲದಲ್ಲಿ 2 ಬಾರಿ ಈ ಸಾಧನೆ ಮಾಡಿದ ಮೊದಲ ತಂಡ ಎನ್ನುವ ಹಿರಿಮೆ ಗಳಿಸಲು ಎದುರು ನೋಡುತ್ತಿದೆ.
ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಜಸ್‌ಪ್ರೀತ್ ಬುಮ್ರಾ ಇಲ್ಲದೆಯೂ ಸರಣಿ ಗೆದ್ದಿರುವುದು ಖುಷಿ ನೀಡಿದೆ ಎಂದಿರುವ ನಾಯಕ ವಿರಾಟ್, ಹಾರ್ದಿಕ್ ಪಾಂಡ್ಯ ಭವಿಷ್ಯದಲ್ಲಿ ತಂಡದ ಆಧಾರಸ್ತಂಭವಾಗಲಿದ್ದಾರೆ ಎಂದಿದ್ದಾರೆ. 2021ರ ಟಿ20 ವಿಶ್ವಕಪ್ ದೃಷ್ಟಿಯಿಂದ ಈ ಸರಣಿ ಮಹತ್ವ ಪಡೆದುಕೊಂಡಿದ್ದು, ಭಾರತ ತನ್ನ ಮುಂದಿರುವ ಎಲ್ಲ ಆಯ್ಕೆಗಳನ್ನು ಪರೀಕ್ಷಿಸುತ್ತಿದೆ.
ಕೆ.ಎಲ್.ರಾಹುಲ್ ಹಾಗೂ ಶಿಖರ್ ಧವನ್ ಆರಂಭಿಕರಾಗಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದು, ಕೊಹ್ಲಿ, ಸ್ಯಾಮ್ಸನ್, ಹಾರ್ದಿಕ್, ಶ್ರೇಯಸ್ ಮಧ್ಯಮ ಕ್ರಮಾಂಕದ ಬಲ ಹೆಚ್ಚಿಸಿದ್ದಾರೆ. ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್ ಬೌಲಿಂಗ್ ಜೊತೆ ಬ್ಯಾಟಿಂಗ್‌ನಲ್ಲೂ ಕೊಡುಗೆ ನೀಡಬಲ್ಲರು. ಟಿ.ನಟರಾಜನ್ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರುತ್ತಿದ್ದು, ವಿಶ್ವಕಪ್‌ಗೆ ಬಲಿಷ್ಠ ಅಸ್ತ್ರವಾಗಿ ರೂಪುಗೊಳ್ಳುವ ವಿಶ್ವಾಸ ತಂಡಕ್ಕಿದೆ. ದೀಪಕ್ ಚಹರ್, ಯಜುವೇಂದ್ರ ಚಹಲ್ ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದರು. ಇವರಿಬ್ಬರ ಮೇಲೆ ಒತ್ತಡವಿದೆ. ಭಾರತ ಕಳೆದ ಪಂದ್ಯದಲ್ಲಿ ಆಡಿದ ತಂಡದೊಂದಿಗೇ ಕಣಕ್ಕಿಳಿಯುವುದು ಬಹುತೇಕ ಖಚಿತ.
ಫಿಂಚ್ ವಾಪಸ್?: ಗಾಯದಿಂದಾಗಿ 2ನೇ ಟಿ20 ಪಂದ್ಯಕ್ಕೆ ಗೈರಾಗಿದ್ದ ಆ್ಯರೋನ್ ಫಿಂಚ್ ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ಫಿಂಚ್ ಮರಳಿದರೆ ಡಾರ್ಚಿ ಶಾರ್ಚ್ ಹೊರಗುಳಿಯಲಿದ್ದಾರೆ. ಆಸೀಸ್ ಬ್ಯಾಟ್ಸ್‌ಮನ್‌ಗಳು ಸ್ಥಿರ ಪ್ರದರ್ಶನದ ಕೊರತೆ ಎದುರಿಸುತ್ತಿದ್ದು, ಬೌಲಿಂಗ್ ವಿಭಾಗವೂ ಹೇಳಿಕೊಳ್ಳುವಷ್ಟು ಬಲಿಷ್ಠವಾಗಿಲ್ಲ. ಸ್ಟಾರ್ಕ್ ಆಯ್ಕೆಗೆ ಲಭ್ಯರಿಲ್ಲ. ಕಮಿನ್ಸ್ ಗಾಯಗೊಂಡು ಹೊರಬಿದ್ದಿದ್ದಾರೆ. ಹೇಜಲ್‌ವುಡ್‌ಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ, ಪ್ರಮುಖ ಬೌಲರ್‌ಗಳಿಲ್ಲದೆ ಈ ಪಂದ್ಯವನ್ನೂ ಆಡಬೇಕಿದೆ.
ಪಿಚ್ ರಿಪೋರ್ಚ್
ಸಿಡ್ನಿ ಪಿಚ್ ಕಳೆದೊಂದು ವಾರದಲ್ಲಿ ರಾಶಿ ರಾಶಿ ರನ್‌ಗೆ ಸಾಕ್ಷಿಯಾಗಿದೆ. ಏಕದಿನ ಸರಣಿ, ಕಳೆದ ಟಿ20 ಪಂದ್ಯದಲ್ಲಿ ದೊಡ್ಡ ಮೊತ್ತಗಳು ದಾಖಲಾಗಿದ್ದವು. ಈ ಪಂದ್ಯದಲ್ಲಿ ಪಿಚ್ ವಿಭಿನ್ನವಾಗಿ ವರ್ತಿಸುವ ನಿರೀಕ್ಷೆ ಏನಿಲ್ಲ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ಶಿಖರ್ ಧವನ್, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಟಿ.ನಟರಾಜನ್, ಯಜುವೇಂದ್ರ ಚಹಲ್.
ಆಸ್ಪ್ರೇಲಿಯಾ: ಆ್ಯರೋನ್ ಫಿಂಚ್/ಡಾರ್ಚಿ ಶಾರ್ಚ್, ಮ್ಯಾಥ್ಯೂ ವೇಡ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋಯ್ನಿಸ್, ಮೋಸೆಸ್ ಹೆನ್ರಿಕ್ಸ್, ಶಾನ್ ಅಬ್ಬೊಟ್, ಡೇನಿಯಲ್ ಸ್ಯಾಮ್ಸ್, ಮಿಚೆಲ್ ಸ್ವೆಪ್ಸನ್, ಆ್ಯಡಂ ಜಂಪಾ, ಆ್ಯಂಡ್ರೂ ಟೈ.
ಸ್ಥಳ: ಸಿಡ್ನಿ
ಪಂದ್ಯ: ಮಧ್ಯಾಹ್ನ 1.40ಕ್ಕೆ
ನೇರ ಪ್ರಸಾರ: ಸೋನಿ ಸಿಕ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.