
ಉಡುಪಿ: ಭಾರತ ಟಿ-20 ಕ್ರಿಕೆಟ್ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಟಗಾರ ಸೂರ್ಯಕುಮಾರ್ ಯಾದವ್ ಮತ್ತು ಪತ್ನಿ ದೇವಿಶಾ ಶೆಟ್ಟಿ ಮಂಗಳವಾರ ಇಲ್ಲಿನ ಮಾರಿಗುಡಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಿಶಾ ಶೆಟ್ಟಿ ಕರಾವಳಿಯವರಾಗಿದ್ದು, ಖಾಸಗಿ ಕಾರ್ಯಕ್ರಮಕ್ಕೆ ಮಂಗಳೂರಿಗೆ ಬಂದಿದ್ದ ಅವರಿಬ್ಬರೂ ಜೀರ್ಣೋದ್ಧಾರಗೊಳ್ಳುತ್ತಿರುವ ಮಾರಿಗುಡಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವಿಶಾ, ಐದು ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದೆ, ಮತ್ತೊಮ್ಮೆ ಕಾಪು ಅಮ್ಮನ ಭೇಟಿ ಮಾಡಬೇಕು ಎಂಬ ಇಚ್ಛೆ ಇತ್ತು. ಇದೀಗ ಪತಿಯೊಂದಿಗೆ ಬಂದಿರುವುದು ತುಂಬಾ ಸಂತೋಷ ನೀಡುತ್ತಿದೆ ಎಂದರು.
ಭಾರತವನ್ನು ಪ್ರತಿನಿಧಿಸಬೇಕು, ವಿಶ್ವಕಪ್ ಗೆಲ್ಲಬೇಕು ಎಂಬುದು ಎಲ್ಲ ಕ್ರಿಕೆಟ್ ಆಟಗಾರರ ಕನಸಾಗಿರುತ್ತದೆ, ಸೂರ್ಯಕುಮಾರ್ ಅವರ ಕನಸು ಸಾಕಾರಗೊಂಡಿದೆ. ಮುಂದೆ ಇನ್ನೂ ಹಲವಾರು ಕನಸುಗಳಿವೆ. ದೇವಿಯಲ್ಲಿ ಏನು ಪ್ರಾರ್ಥನೆ ಮಾಡಿದ್ದೇವೆ, ಏನು ಹರಕೆ ನೀಡಿದ್ದೇವೆ ಅದನ್ನು ಹೇಳುವುದಿಲ್ಲ ಎಂದರು.
ಕನ್ನಡಿಗ, ಆರ್‌ಸಿಬಿ ಮಾಜಿ ಕ್ರಿಕೆಟಿಗನೇ ಬೌಲಿಂಗ್ ಕೋಚ್ ಆಗಬೇಕು: ಪಟ್ಟು ಹಿಡಿದ ಗೌತಮ್ ಗಂಭೀರ್..!
ಸೂರ್ಯ ಕುಮಾರ್ ಯಾದವ್ ಮಾತನಾಡಿ, ಕಾಪುದ ಅಮ್ಮ (ಕಾಪುವಿನ ತಾಯಿ)ನ ದರ್ಶನ, ಪೂಜೆಯಿಂದ ಮನಸ್ಸಿಗೆ ಬಹಳ ನೆಮ್ಮದಿಯಾಯಿತು. ಮುಂದೆ ಅವಕಾಶ ಸಿಕ್ಕಿದರೆ ದೇವಾಲಯದ ಲೋಕಾರ್ಪಣೆಯ ಸಂದರ್ಭದಲ್ಲಿ ಬರುತ್ತೇನೆ ಎಂದರು.
ಇಲ್ಲಿ ನಮ್ಮನ್ನು ನೋಡುವುದಕ್ಕೆ ಇಷ್ಟು ಜನ ಬರುತ್ತಾರೆ ಎಂದು ಯೋಚಿಸಿರಲಿಲ್ಲ. ಇಲ್ಲಿನ ಜನರ ಪ್ರೀತಿ ಮನಸ್ಸಿಗೆ ಮುಟ್ಟಿದೆ. ಕರಾವಳಿಯ ಬೇರೆ ದೇವಸ್ಥಾನಗಳಿಗೂ ಹೋಗಿದ್ದೇವೆ, ನಾನೊಬ್ಬ ಸಾಮಾನ್ಯ ವ್ಯಕ್ತಿಯಾಗಿ ದೇವಸ್ಥಾನಗಳಿಗೆ ಹೋಗುತಿದ್ದೇನೆ, ಸೆಲೆಬ್ರಿಟಿಯಾಗಿ ಅಲ್ಲ. ಸಾಮಾನ್ಯ ವ್ಯಕ್ತಿಯಾಗಿ ದೊಡ್ಡ ಜೀವನವನ್ನು ನಡೆಸಬೇಕು ಎಂಬುದು ನನ್ನ ಆಸೆ ಎಂದರು.
ಭರ್ಜರಿ ಮೀನೂಟ ಸವಿದ ಸೂರ್ಯಕುಮಾರ್ ಯಾದವ್:
ಇನ್ನು ಸೂರ್ಯಕುಮಾರ್ ಯಾದವ್, ಕರಾವಳಿಗೆ ಬಂದ ಬಳಿಕ ಉಡುಪಿಯ ಪ್ರಸಿದ್ಧ ಖಾಸಗಿ ಹೋಟೆಲ್‌ನಲ್ಲಿ ಭರ್ಜರಿಯಾಗಿಯೇ ಮೀನೂಟ ಸವಿದಿದ್ದಾರೆ. ಸೂರ್ಯ, ಪಾಂಪ್ರೇಟ್ ಘೀ ರೋಸ್ಟ್, ಅಂಜಲ್ ತವಾ ಫ್ರೈ, ಫ್ರೋನ್ಸ್ ಘೀ ರೋಸ್ಟ್ & ನೀರ್ ದೋಸೆ, ಸಿಲ್ವರ್ ಫಿಶ್ ರವಾ, ರೈಸ್, ಕಾಣೆ ಮಸಾಲ ಹಾಗೂ ಬಟರ್ ಮಿಲ್ಕ್ ರುಚಿ ಸಚಿದರು.
ವಿಮಾನ ನಿಲ್ದಾಣದಲ್ಲೇ ವಿವಾಹ ವಾರ್ಷಿಕೋತ್ಸವ ಆಚರಿಸಿದ ಕ್ರಿಕೆಟಿಗ ಸೂರ್ಯ ಕುಮಾರ್ ದಂಪತಿ
ಭಾರತ ಕ್ರಿಕೆಟ್ ತಂಡದ ಟ್ವೆಂಟಿ 20 ಸ್ಪೆಷಲಿಸ್ಟ್ ಆಟಗಾರ ಸೂರ್ಯ ಕುಮಾರ್ ಯಾದವ್ ಸೋಮವಾರ ಮಂಗಳೂರಿಗೆ ಆಗಮಿಸಿದ್ದರು. ಸೂರ್ಯಕುಮಾರ್ ಅವರ ಪತ್ನಿ ದೀವಿಶಾ ಶೆಟ್ಟಿ ಕರಾವಳಿ ಮೂಲದವರಾಗಿದ್ದು, ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಈ ದಂಪತಿ ಸೋಮವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
ಈ ದಂಪತಿ ಸೋಮವಾರ ಎಂಟನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ನಿಲ್ದಾಣದ ‘ಪ್ರಣಾಮ್’ ತಂಡದವರು ದಂಪತಿ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಈ ಮಾಹಿತಿಯನ್ನು ವಿಮಾನ ನಿಲ್ದಾಣದ ಆಡಳಿತ ತನ್ನ ‘ಎಕ್ಸ್’ ಖಾತೆಯಲ್ಲಿ ಚಿತ್ರ ಸಮೇತ ಹಂಚಿಕೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.