ನಾನು ಪಂತ್‌, ರಾಹುಲ್‌ ಜೊತೆ ಸ್ಪರ್ಧಿಸಿದ್ರೆ ನನ್ನ ದೇಶ ಬಿಟ್ಟುಕೊಟ್ಟಂತೆ; ಮತ್ತೆ ಹೃದಯ ಗೆದ್ದ ಸಂಜು ಸ್ಯಾಮ್ಸನ್‌..!

By Naveen Kodase  |  First Published Sep 18, 2022, 1:56 PM IST

* ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್ ಸ್ಥಾನ ಪಡೆಯಲು ವಿಫಲ
* ಭಾವನಾತ್ಮಕವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡ ಕೇರಳ ಮೂಲದ ಕ್ರಿಕೆಟಿಗ
*  ನಾನು ರಾಹುಲ್‌ ಇಲ್ಲವೇ ಪಂತ್‌ ಜೊತೆ ಸ್ಪರ್ಧಿಸುತ್ತಿಲ್ಲ ಎಂದ ಸ್ಯಾಮ್ಸನ್‌


ನವದೆಹಲಿ(ಸೆ.18): ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡ ಪ್ರಕಟವಾಗಿದ್ದಾಗ ಒಂದು ಅಚ್ಚರಿ ಕಾಡಿತ್ತು. ಕೇರಳ ಮೂಲದ ಪ್ರತಿಭಾನ್ವಿತ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್, ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದರು. ಇದರ ಬೆನ್ನಲ್ಲೇ ಹಲವು ಅಭಿಮಾನಿಗಳು ಬಿಸಿಸಿಐ ಆಯ್ಕೆ ಸಮಿತಿ ಮೇಲೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು.

ಸಂಜು ಸ್ಯಾಮ್ಸನ್‌, ಕಮ್‌ಬ್ಯಾಕ್ ಮಾಡಿದ ಬಳಿಕ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಸಂಜು ಸ್ಯಾಮ್ಸನ್‌ ಯಾವುದೇ ಕ್ರಮಾಂಕದಲ್ಲಿ ಬೇಕಾದರೂ ಬ್ಯಾಟ್ ಬೀಸುವ ಕ್ಷಮತೆ ಹೊಂದಿದ್ದಾರೆ ಹಾಗೂ ವಿಕೆಟ್ ಕೀಪಿಂಗ್‌ನಲ್ಲೂ ಸೈ ಎನಿಸಿಕೊಂಡಿದ್ದಾರೆ. ಇದೇ ವೇಳೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಬ್ಯಾಟಿಂಗ್‌ನಲ್ಲಿ ದಯನೀಯ ವೈಫಲ್ಯ ಅನುಭವಿಸುತ್ತಾ ಬಂದಿದ್ದಾರೆ. ಇನ್ನು ಕೆ ಎಲ್ ರಾಹುಲ್ ಕೂಡಾ ಬಲಿಷ್ಠ ತಂಡಗಳೆದುರು ದೊಡ್ಡ ಮೊತ್ತ ಕಲೆಹಾಕಲು ವಿಫಲವಾಗುತ್ತಲೇ ಬಂದಿದ್ದಾರೆ. ಹೀಗಾಗಿ ಹಲವು ಮಂದಿ, ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಸಂಜು ಸ್ಯಾಮ್ಸನ್‌ಗೆ ಅವಕಾಶ ಸಿಗಬಹುದು ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಸಂಜು ಸ್ಯಾಮ್ಸನ್‌ಗೆ 15 ಆಟಗಾರರ ಬಳಗವಿರಲಿ, ಮೀಸಲು ಆಟಗಾರರ ಪಟ್ಟಿಯಲ್ಲೂ ಸ್ಥಾನ ಸಿಕ್ಕಿರಲಿಲ್ಲ. 

Latest Videos

undefined

ಇದೀಗ ಐಸಿಸಿ ಟಿ20 ವಿಶ್ವಕಪ್‌ಗೆ ತಮ್ಮನ್ನು ಕೈಬಿಟ್ಟಿದ್ದಕ್ಕೆ ಪ್ರತಿಕ್ರಿಯಿಸಿರುವ ಸಂಜು ಸ್ಯಾಮ್ಸನ್‌ ತಾವು ಯಾರೊಂದಿಗೂ ಸ್ಪರ್ಧಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆನ್‌ಲೈನ್‌ ಮಾಧ್ಯಮವೊಂದರ ಜೊತೆ ಮಾತನಾಡುತ್ತಿದ್ದ ವೇಳೆ ಸ್ಯಾಮ್ಸನ್‌ಗೆ ರಿಷಭ್‌ ಪಂತ್‌ ಹಾಗೂ ಕೆ.ಎಲ್‌.ರಾಹುಲ್‌ರಿಂದಾಗಿ ತಮಗೆ ಸ್ಥಾನ ಸಿಗುತ್ತಿಲ್ಲವೇ ಎನ್ನುವ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ಸಂಜು, ‘ಈ ನಡುವೆ ನಾನು ಯಾರ ಬದಲು ಆಡುತ್ತೇನೆ ಎಂದು ಚರ್ಚೆಯಾಗುತ್ತಿರುತ್ತದೆ. ಆದರೆ ನಾನು ರಾಹುಲ್‌ ಇಲ್ಲವೇ ಪಂತ್‌ ಜೊತೆ ಸ್ಪರ್ಧಿಸುತ್ತಿಲ್ಲ. ಅವರೂ ನನ್ನ ತಂಡದಲ್ಲೇ ಆಡುತ್ತಾರೆ. ಅವರೊಂದಿಗೆ ಸ್ಪರ್ಧಿಸಿದರೆ ನನ್ನ ದೇಶವನ್ನು ಬಿಟ್ಟುಕೊಟ್ಟಂತೆ ಆಗುತ್ತದೆ’ ಎಂದಿದ್ದಾರೆ.

Sanju Samson is an incredible and down to earth human being.pic.twitter.com/Xaln77a77d

— Johns. (@CricCrazyJohns)

T20 World Cup ಟೂರ್ನಿಯಿಂದ ಜಡೇಜಾ ಹೊರಬಿದ್ದಿದ್ದು, ಟೀಂ ಇಂಡಿಯಾಗೆ ದೊಡ್ಡ ನಷ್ಟ: ಮಹೆಲಾ ಜಯವರ್ಧನೆ

ಭಾರತ ತಂಡಕ್ಕೆ 5 ವರ್ಷಗಳ ಬಳಿಕ ನಾನು ಕಮ್‌ಬ್ಯಾಕ್ ಮಾಡಿದ್ದೇ ನನ್ನ ಸೌಭಾಗ್ಯ ಎಂದು ಭಾವಿಸುತ್ತೇನೆ. 5 ವರ್ಷಗಳ ಹಿಂದೆ, ಭಾರತ ಕ್ರಿಕೆಟ್‌ ತಂಡವು, ಜಗತ್ತಿನ ಬಲಿಷ್ಠ ಕ್ರಿಕೆಟ್ ತಂಡಗಳಲ್ಲಿ ಒಂದು ಎನಿಸಿಕೊಂಡಿತ್ತು. ಸದ್ಯ ಈಗಲೂ ಕೂಡಾ ಭಾರತ ನಂ.1 ಕ್ರಿಕೆಟ್ ತಂಡ ಎನಿಸಿಕೊಂಡಿದೆ. ನಮ್ಮ ತಂಡದಲ್ಲಿ ಸಾಕಷ್ಟು ಗುಣಮಟ್ಟದ ಆಟಗಾರರಿದ್ದಾರೆ. ಹೀಗಾಗಿ ವಿಶ್ವದ ನಂ.1 ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವುದು ಅಷ್ಟು ಸುಲಭ ಸಾಧ್ಯವಲ್ಲ. ಆದರೆ ಇದೇ ವೇಳೆ ತಾವು ತಮ್ಮ ಬಗ್ಗೆ ಯೋಚಿಸಬೇಕು. ನಿಮಗೆ ಯಾವಾಗ ಹಾಗೂ ಎಷ್ಟು ಅವಕಾಶ ಸಿಕ್ಕಿದೆ ಎನ್ನುವುದನ್ನು ಯೋಚಿಸಬೇಕು. ನಾವು ಯಾವಾಗಲೂ ಸರಿಯಾದ ದಿಕ್ಕಿನಲ್ಲಿ ಯೋಚಿಸುವಂತಹ ಮನಸ್ಥಿತಿಯನ್ನು ಇಟ್ಟುಕೊಳ್ಳಬೇಕು ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ಐಸಿಸಿ ಟಿ20 ವಿಶ್ವಕಪ್‌ಗೆ ಭಾರತ ತಂಡ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯಜುವೇಂದ್ರ ಚಹಲ್, ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆರ್ಶ್‌ದೀಪ್‌ ಸಿಂಗ್.

ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯಿ, ದೀಪಕ್ ಚಹರ್.

 
 

click me!