
ಹರಾರೆ (ಜು.25) ಐರ್ಲೆಂಡ್, ಇಂಗ್ಲೆಂಡ್ ವಿರುದ್ದ ಟಿ20 ಸರಣಿ ಸೋತ ಶ್ರೇಯಸ್ ಅಯ್ಯರ್ ನಾಯಕತ್ವದ ಟೀಂ ಇಂಡಿಯಾ ಇದೀಗ ಜಿಂಬಾಬ್ಬೆ ವಿರುದ್ಧ ಸರಣಿ ಗೆದ್ದು ನಿಟ್ಟುಸಿರು ಬಿಟ್ಟಿದೆ. ಸ್ಫೋಟಕ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾ 219 ರನ್ ಸಿಡಿಸಿತ್ತು. ಬೃಹತ್ ಮೊತ್ತ ಚೇಸ್ ಮಾಡಲು ಜಿಂಬಾಬ್ವೆ ತಂಡಕ್ಕೆ ಭಾರತ ಅವಕಾಶ ನೀಡಲಿಲ್ಲ. ಮಾರಕ ಬೌಲಿಂಗ್ ದಾಳಿಗೆ ಜಿಂಬಾಬ್ಬೆ ತತ್ತರಿಸಿತ್ತು. ಪರಿಣಾಮ 129 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ಟೀಂ ಇಂಡಿಯಾ 90 ರನ್ ಗೆಲುವು ದಾಖಲಿಸಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆ ಸರಣಿ ಗೆದ್ದುಕೊಂಡಿದೆ.
ಜಿಂಬಾಬ್ವೆ ತಂಡಕ್ಕೆ ಚೇಸಿಂಗ್ ಸವಾಲು ಆರಂಭದಲ್ಲೇ ತೀವ್ರಗೊಂಡಿತ್ತು. ಬ್ರಿಯಾನ್ ಬೆನ್ನೆಟ್ ಹೊರತುಪಡಿಸಿದರೆ ಜಿಂಬಾಬ್ಬೆ ಪರ ದಿಟ್ಟ ಹೋರಾಟ ಯಾರಿಂದಲೂ ಬರಲಿಲ್ಲ. ಆರಂಭಿಕ ಬ್ರಿಯಾನ್ 32 ರನ್ ಕಾಣಿಕೆ ನೀಡಿದ್ದರು. ಪ್ರಿನ್ಸ್ ಯಾದವ್, ಯಶ್ ಠಾಕೂರ್, ರವಿ ಬಿಶ್ನೋಯ್, ಶಿವಂ ದುಬೆ, ತಿಲಕ್ ವರ್ಮಾ, ಅಭಿಷೇಕ್ ಶರ್ಮಾ ವಿಕೆಟ್ ಕಬಳಿಸಿ ಜಿಂಬಾಬ್ವೆಗೆ ಶಾಕ್ ನೀಡಿದರು. ಜಿಂಬಾಬ್ವೆ 17.5 ಓವರ್‌ಗಳಲ್ಲಿ 129 ರನ್‌ಗೆ ಆಲೌಟ್ ಆಯಿತು.
ಟೀಂ ಇಂಡಿಯಾ ಪರ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. 44 ಎಸೆದಲ್ಲಿ ಇಶಾನ್ ಕಿಶನ್ 81 ರನ್ ಸಿಡಿಸಿ ಮಿಂಚಿದ್ದರು. 9 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ ಇಶಾನ್ 184ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಇಶಾನ್ ಕಿಶನ್ ಬ್ಯಾಟಿಂಗ್ ಪರಿಣಾಮ ಟೀಂ ಇಂಡಿಯಾ 200 ರನ್ ದಾಟಿ ಬೃಹತ್ ಮೊತ್ತ ದಾಖಲಿಸಿತ್ತು.
ವೈಭವ್ ಸೂರ್ಯವಂಶಿ ಸ್ಫೋಟಕ ಆರಂಭ ಹೆಚ್ಚು ಹೊತ್ತು ಇರಲಿಲ್ಲ. ಸೂರ್ಯವಂಶಿ 20 ರನ್ ಸಿಡಿಸಿ ಔಟಾದರು. ನಾಯಕ ಶ್ರೇಯಸ್ ಅಯ್ಯರ್ 25 ರನ್ ಸಿಡಿಸಿದರು. ಇತ್ತ ತಿಲಕ್ ವರ್ಮಾ ಸ್ಫೋಟಕ ಬ್ಯಾಟಿಂಗ್ ಭಾರತಕ್ಕೆ ನೆರವಾಯಿತು. ತಿಲಕ್ ವರ್ಮಾ ಕೇವಲ 29 ಎಸೆತದಲ್ಲಿ ಅಜೇಯ 60 ರನ್ ಸಿಡಿಸಿದರು. ಭಾರತ 5 ವಿಕೆಟ್ ನಷ್ಟಕ್ಕೆ 219 ರನ್ ಸಿಡಿಸಿದರು.
ಇಶಾನ್ ಕಿಶನ್ 81 ರನ್ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ದಾಖಲೆ ಪುಡಿ ಮಾಡಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ ಟಿ20ಯಲ್ಲಿ ಗರಿಷ್ಠ ರನ್ ಸಿಡಿಸಿದ ದಾಖಲೆ ಕೊಹ್ಲಿ ಹೆಸರಲ್ಲಿತ್ತು. ಕೊಹ್ಲಿಯ 720 ರನ್ ದಾಖಲೆಯನ್ನು ಕಿಶನ್ ಮುರಿದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.