Ind vs Pak ಕೊನೆಯ ಓವರ್‌ನಲ್ಲಿ ಚೆಂಡು ವಿಕೆಟ್‌ಗೆ ಬಡಿದರೂ ಟೀಂ ಇಂಡಿಯಾಗೆ ಬೈಸ್ ಮೂಲಕ 3 ರನ್ ಸಿಕ್ಕಿದ್ದು ಯಾಕೆ..? ರೂಲ್ಸ್ ಏನು?

By Naveen KodaseFirst Published Oct 24, 2022, 1:45 PM IST
Highlights

ಮೆಲ್ಬರ್ನ್‌ನಲ್ಲಿ ಪಾಕಿಸ್ತಾನ ವಿರುದ್ದ ಭಾರತಕ್ಕೆ ರೋಚಕ ಜಯ
ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ವಿರಾಟ್ ಕೊಹ್ಲಿ
ಹಲವು ನಾಟಕೀಯ ಸನ್ನಿವೇಶಕ್ಕೆ ಸಾಕ್ಷಿಯಾದ 20ನೇ ಓವರ್‌

ಮೆಲ್ಬರ್ನ್‌(ಅ.24): ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವು ಹಲವು ನಾಟಕೀಯ ಸನ್ನಿವೇಶ ಸನ್ನಿವೇಶಗಳಿಗೆ ಸಾಕ್ಷಿಯಾಯಿತು. ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 160 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಆರಂಭದಲ್ಲೇ ಕೆ ಎಲ್ ರಾಹುಲ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮೊದಲ 7 ಓವರ್‌ನಲ್ಲಿ ಭಾರತದ ನಾಲ್ವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು.

ಇನ್ನು 5ನೇ ವಿಕೆಟ್‌ಗೆ ಜತೆಯಾದ ವಿರಾಟ್ ಕೊಹ್ಲಿ(82*) ಹಾಗೂ ಹಾರ್ದಿಕ್ ಪಾಂಡ್ಯ(40) ಆಕರ್ಷಕ 113 ರನ್‌ಗಳ ಜತೆಯಾಟವಾಡುವ ಮೂಲಕ ಟೀಂ ಇಂಡಿಯಾವನ್ನು ಗೆಲುವಿನತ್ತ ಕೊಂಡೊಯ್ದರು. ಹೀಗಿದ್ದು ಭಾರತ ಕೊನೆಯ ಓವರ್‌ನಲ್ಲಿ 16 ರನ್‌ಗಳ ಅಗತ್ಯವಿತ್ತು. ಕೊನೆಯ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿಯನ್ನು ಪಾಕಿಸ್ತಾನದ ಸ್ಪಿನ್ನರ್ ಮೊಹಮ್ಮದ್ ನವಾಜ್ ಹೊತ್ತುಕೊಂಡರು. ಕೊನೆಯ ಓವರ್‌ ಹಲವು ನಾಟಕೀಯ ಸನ್ನಿವೇಶಕ್ಕೆ ಸಾಕ್ಷಿಯಾಯಿತು. 

ಕೊನೆ ಓವರ್‌ ಹೇಗಿತ್ತು?

ಕೊನೆ 6 ಎಸೆತಗಳಲ್ಲಿ ಭಾರತಕ್ಕೆ 16 ರನ್‌ ಬೇಕಿತ್ತು. ಪಾಕಿಸ್ತಾನಕ್ಕೆ ಸ್ಪಿನ್ನರ್‌ ನವಾಜ್‌ರನ್ನು ದಾಳಿಗಿಳಿಸುವುದು ಬಿಟ್ಟು ಬೇರೆ ಆಯ್ಕೆ ಇರಲಿಲ್ಲ. ಆದರೆ ನವಾಜ್‌ ಮೊದಲ ಎಸೆತದಲ್ಲೇ ಹಾರ್ದಿಕ್‌ರನ್ನು ಔಟ್‌ ಮಾಡಿದರು. 2ನೇ ಎಸೆತದಲ್ಲಿ ಕಾರ್ತಿಕ್‌ 1 ರನ್‌ ಪಡೆದರೆ, 3ನೇ ಎಸೆತದಲ್ಲಿ ಕೊಹ್ಲಿ 2 ರನ್‌ ಕದ್ದರು. ಕೊನೆ 3 ಎಸೆತದಲ್ಲಿ 13 ರನ್‌ ಬೇಕಿತ್ತು. ನೋಬಾಲ್‌ ಆದ 4ನೇ ಎಸೆತದಲ್ಲಿ ವಿರಾಟ್‌ ಸಿಕ್ಸರ್‌ ಸಿಡಿಸಿದರು. 3 ಎಸೆತಗಳಲ್ಲಿ 6 ರನ್‌ ಬೇಕಿದ್ದಾಗ ನವಾಜ್‌ ವೈಡ್‌ ಎಸೆದರು. ಆ ನಂತರ ಫ್ರೀ ಹಿಟ್‌ನಲ್ಲಿ ಕೊಹ್ಲಿ ಬೌಲ್ಡ್‌ ಆದರೂ ಬೈ ಮೂಲಕ 3 ರನ್‌ ತಂಡದ ಮೊತ್ತಕ್ಕೆ ಸೇರ್ಪಡೆಗೊಂಡಿತು. ಈ ಬಾಲ್‌ ಅನ್ನು ಡೆಡ್ ಬಾಲ್ ಎಂದು ಘೋಷಿಸಲು ಪಾಕಿಸ್ತಾನ ಆಟಗಾರರು ಅಂಪೈರ್ ಬಳಿ ಮನವಿ ಮಾಡಿಕೊಂಡರು. ಆದರೂ ಅದನ್ನು ಅಂಪೈರ್ ಪುರಸ್ಕರಿಸಲಿಲ್ಲ. ಇನ್ನು 5ನೇ ಎಸೆತದಲ್ಲಿ ಕಾರ್ತಿಕ್‌ ರನೌಟ್ ಆದಾಗ 1 ಎಸೆತದಲ್ಲಿ 2 ರನ್‌ ಬೇಕಿತ್ತು. ನವಾಜ್‌ ಮತ್ತೊಂದು ವೈಡ್‌ ಎಸೆದರು. ಕೊನೆ ಎಸೆತದಲ್ಲಿ ಬೇಕಿದ್ದ ಒಂದು ರನ್‌ ಅನ್ನು ಅಶ್ವಿನ್‌ ಗಳಿಸಿ ತಂಡವನ್ನು ಜಯದ ದಡ ದಾಟಿಸಿದರು.

This is pure cricketing genius. and DK run for three runs after the ball hits the stump on a no ball and richoted towards boundary line.
pic.twitter.com/tbv98iZdlD

— Kumar Manish (@kumarmanish9)

ಇನ್ನು ಅಷ್ಟಕ್ಕೂ ಡೆಡ್ ಬಾಲ್ ನಿಯಮವೇನು..?

ಕ್ರಿಕೆಟ್‌ನ ನೀತಿ ನಿಯಮಗಳನ್ನು ರೂಪಿಸುವ ಎಂಸಿಸಿ ಪ್ರಕಾರ, 'ಬೌಲಿಂಗ್ ಮಾಡಿದ ಬಳಿಕ ಚೆಂಡು ವಿಕೆಟ್ ಕೀಪರ್ ಅಥವಾ ಬೌಲರ್‌ ಕೈ ಸೇರಿದ ಬಳಿಕ ಅದು ಡೆಡ್ ಬಾಲ್ ಆಗಿ ಬದಲಾಗುತ್ತದೆ. ಅಥವಾ ಚೆಂಡು ಬೌಂಡರಿ ದಾಟಿದ ಬಳಿಕ ಆ ಬಾಲ್ ಡೆಡ್ ಎನಿಸಿಕೊಳ್ಳುತ್ತದೆ. ಅದೇ ರೀತಿ ಬ್ಯಾಟರ್ ಔಟ್ ಆದ ಬಳಿಕ ಡೆಡ್ ಬಾಲ್ ಆಗುತ್ತದೆ. ಇಲ್ಲಿ ಡೆಡ್ ಬಾಲ್ ಪದದ ಅರ್ಥ, ಆ ಎಸೆತ ಅಂತ್ಯವಾಗಿದೆ ಎನ್ನುವುದಾಗಿದೆ.' 

ಪಾಕಿಸ್ತಾನಿ ಫ್ಯಾನ್‌ಗೆ 'ಸುಂದರ..ಅತಿ ಸುಂದರ..' ರಿಪ್ಲೈ ನೀಡಿದ ಗೂಗಲ್‌ ಸಿಇಒ!

ಇನ್ನು ಇದಷ್ಟೇ ಅಲ್ಲದೇ 'ಬ್ಯಾಟರ್ ಚೆಂಡನ್ನು ಎದುರಿಸಲು ಸಿದ್ದವಿದ್ದಾಗ, ಬೌಲಿಂಗ್‌ಗೂ ಮುನ್ನ ಒಂದು ವೇಳೆ ಒಂದೋ ಅಥವಾ ಎರಡೂ ಬೇಲ್ಸ್ ಉರುಳಿಬಿದ್ದರೂ ಅಂಪೈರ್ ಡೆಡ್ ಬಾಲ್ ಎಂದು ಘೋಷಿಸುತ್ತಾರೆ. ಆದರೆ ಫ್ರೀ ಹಿಟ್ ಎಸೆತವಾಗಿದ್ದರಿಂದ ಮೇಲಿನ ಇದ್ಯಾವ ಘಟನೆಗಳು ನಡೆಯಲಿಲ್ಲ.' ಇದರ ಲಾಭ ಬಳಸಿಕೊಂಡ ವಿರಾಟ್ ಕೊಹ್ಲಿ ಮೂರು ರನ್‌ ಓಡಿದರು. ಹೀಗಾಗಿ ಅಂಪೈರ್ ಬೈಸ್ ರೂಪದಲ್ಲಿ ಭಾರತ ತಂಡಕ್ಕೆ 3 ರನ್ ನೀಡಿದರು.

click me!