T20 World Cup: ಶಮಿ ಬಿರುಗಾಳಿಗೆ ಆಸೀಸ್ ಧೂಳೀಪಟ, ಟೀಂ ಇಂಡಿಯಾಗೆ ಭರ್ಜರಿ ಜಯ

By Naveen Kodase  |  First Published Oct 17, 2022, 1:24 PM IST

ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಶಾಕ್ ನೀಡಿದ ಟೀಂ ಇಂಡಿಯಾ
ಬೌಲಿಂಗ್‌ನಲ್ಲಿ ಮಾರಕ ದಾಳಿ ನಡೆಸಿ ಮಿಂಚಿದ ಮೊಹಮ್ಮದ್ ಶಮಿ
ಕೊನೆಯ ಓವರ್‌ನಲ್ಲಿ 3 ವಿಕೆಟ್ ಕಬಳಿಸಿ ಅಬ್ಬರಿಸಿದ ಶಮಿ


ಬ್ರಿಸ್ಬೇನ್‌(ಅ.17): ಅನುಭವಿ ವೇಗಿ ಮೊಹಮ್ಮದ್ ಶಮಿ ತಾವೆಷ್ಟು ಉಪಯುಕ್ತ ಡೆತ್ ಓವರ್ ಬೌಲರ್ ಎನ್ನುವುದನ್ನು ಆಸ್ಟ್ರೇಲಿಯಾ ಎದುರಿನ ಅಭ್ಯಾಸ ಪಂದ್ಯದಲ್ಲಿ ಅನಾವರಣ ಮಾಡಿದ್ದಾರೆ. ಕಳೆದೊಂದು ವರ್ಷದಿಂದ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡದ ಶಮಿ, ಆಸ್ಟ್ರೇಲಿಯಾ ಎದುರಿನ ಅಭ್ಯಾಸ ಪಂದ್ಯದ ಕೊನೆಯ ಓವರ್‌ನಲ್ಲಿ ಬೌಲಿಂಗ್ ಮಾಡಿ 11 ರನ್‌ಗಳನ್ನು ರಕ್ಷಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಕೊನೆಯ ಓವರ್‌ನಲ್ಲಿ ಶಮಿ ನೀಡಿದ್ದ 4 ರನ್ ಪಡೆದದ್ದು 3 ವಿಕೆಟ್‌..!

ಹೌದು, ಭಾರತ ನೀಡಿದ್ದ 187 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಆತಿಥೇಯ ಆಸ್ಟ್ರೇಲಿಯಾ ತಂಡವು ಕೊನೆಯ ಓವರ್‌ನಲ್ಲಿ ಗೆಲ್ಲಲು 11 ರನ್‌ಗಳ ಅಗತ್ಯವಿತ್ತು. ಬುಮ್ರಾ ಅನುಪಸ್ಥಿತಿಯಲ್ಲಿ ಕೊನೆಯ ಕ್ಷಣದಲ್ಲಿ ಭಾರತದ 15 ಆಟಗಾರರ ತಂಡ ಕೂಡಿಕೊಂಡ ಶಮಿ, ಆಸ್ಟ್ರೇಲಿಯಾ ಎದುರಿನ ಅಭ್ಯಾಸ ಪಂದ್ಯ ಕೊನೆಯ ಓವರ್‌ ಬೌಲಿಂಗ್ ಮಾಡುವ ಜವಾಬ್ದಾರಿ ಹೊತ್ತುಕೊಂಡರು. ಮೊದಲ ಎರಡು ಎಸೆತಗಳಲ್ಲಿ ತಲಾ 2 ರನ್ ನೀಡಿದರು. ಇನ್ನು ಮೂರನೇ ಎಸೆತದಲ್ಲಿ ಪ್ಯಾಟ್ ಕಮಿನ್ಸ್ ಬಲಿ ಪಡೆದರು. ನಾಲ್ಕನೇ ಎಸೆತದಲ್ಲಿ ಆಸ್ಟನ್ ಏಗರ್ ರನೌಟ್‌ಗೆ ಬಲಿಯಾದರೆ, ಐದು ಹಾಗೂ ಆರನೇ ಎಸೆತದಲ್ಲಿ ಜೊಶ್ ಇಂಗ್ಲಿಶ್ ಹಾಗೂ ಕೇನ್ ರಿಚರ್ಡ್‌ಸನ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು.

Tap to resize

Latest Videos

undefined

ಟೀಂ ಇಂಡಿಯಾ ಸವಾಲಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡಕ್ಕೆ ನಾಯಕ ಆರೋನ್ ಫಿಂಚ್ ಹಾಗೂ ಮಿಚೆಲ್ ಮಾರ್ಶ್‌ ಸ್ಪೋಟಕ ಆರಂಭವನ್ನೇ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 41 ರನ್‌ಗಳ ಜತೆಯಾಟವಾಡಿತು. ಡೇವಿಡ್ ವಾರ್ನರ್ ಅನುಪಸ್ಥಿತಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಮಿಚೆಲ್ ಮಾರ್ಶ್‌ ಕೇವಲ 18 ಎಸೆತಗಳಲ್ಲಿ 4 ಬೌಂಡರಿ ಹಾಗೂ ಎರಡು ಸಿಕ್ಸರ್ ಸಹಿತ 35 ರನ್‌ ಬಾರಿಸಿ ಭುವನೇಶ್ವರ್ ಕುಮಾರ್‌ಗೆ ವಿಕೆಟ್‌ ಒಪ್ಪಿಸಿದರು. ಇನ್ನು 11 ರನ್ ಗಳಿಸಿದ್ದ ಸ್ಟೀವ್ ಸ್ಮಿತ್, ಲೆಗ್‌ ಸ್ಪಿನ್ನರ್ ಯುಜುವೇಂದ್ರ ಚಹಲ್‌ಗೆ ವಿಕೆಟ್ ಒಪ್ಪಿಸಿದರೆ, ಆಲ್ರೌಂಡರ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ 23 ರನ್‌ಗಳಿಗೆ ಸೀಮಿತವಾಯಿತು.

What A Win! 👌 👌 beat Australia by 6⃣ runs in the warm-up game! 👏 👏

Scorecard ▶️ https://t.co/3dEaIjgRPS | pic.twitter.com/yqohLzZuf2

— BCCI (@BCCI)

ನಾಯಕ ಆ್ಯರೋನ್ ಫಿಂಚ್ ಏಕಾಂಗಿ ಹೋರಾಟ ವ್ಯರ್ಥ: ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ, ಮತ್ತೊಂದು ತುದಿಯಲ್ಲಿ ದಿಟ್ಟ ಬ್ಯಾಟಿಂಗ್ ನಡೆಸಿದ ಅಸ್ಟ್ರೇಲಿಯಾ ನಾಯಕ ಆ್ಯರೋನ್‌ ಫಿಂಚ್, ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ಕಾಂಗರೂ ಪಡೆಯ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದರು. ಫಿಂಚ್ 54 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 76 ರನ್‌ ಬಾರಿಸಿ 19ನೇ ಓವರ್‌ನ ಮೊದಲ ಎಸೆತದಲ್ಲಿ ಹರ್ಷಲ್ ಪಟೇಲ್‌ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. 

T20 World Cup: ಆಸೀಸ್‌ ಎದುರಿನ ಅಭ್ಯಾಸ ಪಂದ್ಯದಲ್ಲೇ ಅಬ್ಬರಿಸಿ ಬೊಬ್ಬಿರಿದ ಸೂರ್ಯ, ರಾಹುಲ್‌..!

ಇದಾದ ಬಳಿಕ ಆಸ್ಟ್ರೇಲಿಯಾ ನಿರಂತರ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಪರಿಣಾಮ ಆಸ್ಟ್ರೇಲಿಯಾ ತಂಡವು 180 ರನ್‌ಗಳಿಗೆ ಸರ್ವಪತನ ಕಂಡಿತು. ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್‌ ಸ್ಟೋನಿಸ್, ಟಿಮ್‌ ಡೇವಿಡ್ ಹಾಗೂ ಜೋಶ್ ಇಂಗ್ಲಿಶ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಲು ವಿಫಲರಾದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ, ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ 7 ವಿಕೆಟ್ ಕಳೆದುಕೊಂಡು 186 ರನ್ ಕಲೆಹಾಕಿತ್ತು. ಕೆ ಎಲ್ ರಾಹುಲ್ ಕೇವಲ 33 ಎಸೆತಗಳಲ್ಲಿ 57 ರನ್ ಚಚ್ಚಿದರೆ, ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ 33 ಎಸೆತಗಳಲ್ಲಿ 50 ರನ್ ಬಾರಿಸಿ ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾದರು.

click me!