T20 World Cup: ಕೈಗೂಡದ ಪಾಕ್ ಪ್ರಾರ್ಥನೆ, ಹರಿಣಗಳೆದುರು ಸೋಲುಂಡ ಟೀಂ ಇಂಡಿಯಾ

Published : Oct 30, 2022, 08:16 PM ISTUpdated : Oct 30, 2022, 08:34 PM IST
T20 World Cup: ಕೈಗೂಡದ ಪಾಕ್ ಪ್ರಾರ್ಥನೆ, ಹರಿಣಗಳೆದುರು ಸೋಲುಂಡ ಟೀಂ ಇಂಡಿಯಾ

ಸಾರಾಂಶ

ದಕ್ಷಿಣ ಆಫ್ರಿಕಾ ಎದುರು ರೋಚಕ ಸೋಲು ಕಂಡ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ದಕ್ಷಿಣ ಆಫ್ರಿಕಾ ಟೀಂ ಇಂಡಿಯಾ ಈ ಸೋಲಿನೊಂದಿಗೆ ಪಾಕಿಸ್ತಾನದ ಸೆಮೀಸ್ ಹಾದಿ ಬಹುತೇಕ ಅಂತ್ಯ

ಪರ್ತ್‌(ಅ.30): ದಕ್ಷಿಣ ಆಫ್ರಿಕಾ ಎದುರು ಟೀಂ ಇಂಡಿಯಾ ಗೆಲುವು ಸಾಧಿಸಲಿ ಎನ್ನುವ ಪಾಕಿಸ್ತಾನದ ಪ್ರಾರ್ಥನೆ ಕೈಗೂಡಲಿಲ್ಲ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಎದುರು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 5 ವಿಕೆಟ್ ರೋಚಕ ಸೋಲು ಅನುಭವಿಸಿದೆ. ಭಾರತ ನೀಡಿದ್ದ 134 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಹರಿಣಗಳ ಪಡೆ ಇನ್ನೂ ಎರಡು ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ. ದಕ್ಷಿಣ ಆಫ್ರಿಕಾದ ಈ ಗೆಲುವಿನೊಂದಿಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಸೆಮೀಸ್ ಹಾದಿ ಬಹುತೇಕ ಅಂತ್ಯವಾಗಿದೆ.

ಭಾರತ ನೀಡಿದ್ದ 134 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಆರಂಭದಲ್ಲೇ ಆರ್ಶದೀಪ್ ಸಿಂಗ್ ಮಾರಕ ದಾಳಿಗೆ ತತ್ತರಿಸಿ ಹೋಯಿತು. ಮತ್ತೊಮ್ಮೆ ಆರ್ಶದೀಪ್ ಸಿಂಗ್ ತಾವೆಸೆದ ಮೊದಲ ಚೆಂಡಿನಲ್ಲೇ ಕ್ವಿಂಟನ್ ಡಿ ಕಾಕ್ ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಅದೇ ಓವರ್‌ನ ಮೂರನೇ ಎಸೆತದಲ್ಲಿ ಕಳೆದ ಪಂದ್ಯದ ಶತಕವೀರ ರಿಲೇ ರೌಸೊ ಎಲ್‌ಬಿ ಬಲೆಗೆ ಕೆಡಹುವಲ್ಲಿ ಯಶಸ್ವಿಯಾದರು. ಇನ್ನು ಆರನೇ ಓವರ್‌ನಲ್ಲಿ ದಾಳಿಗಿಳಿದ ಅನುಭವಿ ವೇಗಿ ಮೊಹಮ್ಮದ್ ಶಮಿ ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ದಕ್ಷಿಣ ಆಫ್ರಿಕಾ ತಂಡವು 24 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಆರಂಭದಿಂದಲೇ ಆಕ್ರಮಣಕಾರಿ ಬೌಲಿಂಗ್ ಪ್ರದರ್ಶನ ತೋರಿದ ಭಾರತೀಯ ಬೌಲರ್‌ಗಳು ಎದುರಾಳಿ ಬ್ಯಾಟರ್‌ಗಳನ್ನು ಸುಲಭವಾಗಿ ರನ್‌ ಗಳಿಸಲು ಅವಕಾಶ ಮಾಡಿಕೊಡಲಿಲ್ಲ. ಪರಿಣಾಮ ಮೊದಲ 10 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ ತಂಡವು ಕೇವಲ 40 ರನ್ ಗಳಿಸಲಷ್ಟೇ ಶಕ್ತವಾಯಿತು.

ಕೊಹ್ಲಿ ನೀಡಿದ ಜೀವದಾನ ಬಳಸಿಕೊಂಡ ಮಾರ್ಕ್‌ರಮ್‌: ಆರಂಭದಲ್ಲೇ ವಿಕೆಟ್‌ ಕಳೆದುಕೊಂಡು ಕಂಗಾಲಾಗಿದ್ದ ದಕ್ಷಿಣ ಆಫ್ರಿಕಾ ತಂಡವು ಆ ಬಳಿಕ ರಕ್ಷಣಾತ್ಮಕ ರಣತಂತ್ರಕ್ಕೆ ಮೊರೆಹೋಯಿತು. ಅಶ್ವಿನ್ ಎಸೆದ 12ನೇ ಓವರ್‌ನಲ್ಲಿ ಮಾರ್ಕ್‌ರಮ್‌, ಮಿಡ್‌ವಿಕೆಟ್‌ನತ್ತ ಚೆಂಡು ಬಾರಿಸಿದರು. ಆದರೆ ಕೊಹ್ಲಿ ಸುಲಭ ಕ್ಯಾಚ್ ಕೈಚೆಲ್ಲಿ ಜೀವದಾನ ನೀಡಿದರು. ಇದರ ಲಾಭ ಪಡೆದ ಮಾರ್ಕ್‌ರಮ್, ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿದರು. 4ನೇ ವಿಕೆಟ್‌ಗೆ ಡೇವಿಡ್ ಮಿಲ್ಲರ್ ಜತೆಗೂಡಿ ಏಯ್ಡನ್ ಮಾರ್ಕ್‌ರಮ್‌ 76 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 100ರ ಗಡಿ ತಲುಪಿಸಿದರು. ಸಮಯೋಚಿತ ಬ್ಯಾಟಿಂಗ್ ನಡೆಸಿದ ಮಾರ್ಕ್‌ರಮ್‌ 41 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 52 ರನ್ ಬಾರಿಸಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು.

ಕೊನೆಯ 3 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ ಗೆಲ್ಲಲು 25 ರನ್‌ಗಳ ಅಗತ್ಯವಿತ್ತು. 18ನೇ ಓವರ್ ಬೌಲಿಂಗ್ ಮಾಡಲಿಳಿದ ಅಶ್ವಿನ್‌ಗೆ ಡೇವಿಡ್ ಮಿಲ್ಲರ್ ಸತತ ಎರಡು ಸಿಕ್ಸರ್ ಸಿಡಿಸುವ ಮೂಲಕ ಪಂದ್ಯ ದಕ್ಷಿಣ ಆಫ್ರಿಕಾ ಪರ ವಾಲುವಂತೆ ಮಾಡಿದರು. ಆದರೆ ಅಶ್ವಿನ್ 4ನೇ ಎಸೆತದಲ್ಲಿ ಟ್ರಿಸ್ಟಿನ್ ಸ್ಟಬ್ಸ್‌ ಅವರನ್ನು ಬಲಿ ಪಡೆಯುವ ಮೂಲಕ ಪಂದ್ಯಕ್ಕೆ ತಿರುವು ತಂದುಕೊಡುವ ಯತ್ನ ನಡೆಸಿದರು.

T20 World Cup ಕುಸಿದ ಟೀಂ ಇಂಡಿಯಾ ಬೆಳಕಾದ 'ಸೂರ್ಯ'ಕುಮಾರ್ ಯಾದವ್..!

ಆದರೆ ಶಮಿ ಎಸೆತದ 19ನೇ ಓವರ್‌ನ ಮೊದಲ ಎಸೆತದಲ್ಲೇ ಮಿಲ್ಲರ್ ಬೌಂಡರಿ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದರು. 19ನೇ ಓವರ್‌ನಲ್ಲಿ ಶಮಿ ಕೇವಲ 6 ರನ್ ನೀಡಿದರು. ಹೀಗಾಗಿ ಕೊನೆಯ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ಗೆಲ್ಲಲು 6 ರನ್‌ಗಳ ಅಗತ್ಯವಿತ್ತು. ಭುವನೇಶ್ವರ್ ಕುಮಾರ್ ಕೊನೆಯ ಓವರ್‌ ಬೌಲಿಂಗ್ ಮಾಡುವ ಜವಾಬ್ದಾರಿ ಹೊತ್ತುಕೊಂಡರು. ಆದರೆ ಕೊನೆಯ ಓವರ್‌ನಲ್ಲಿ ಮಿಲ್ಲರ್ ಎರಡು ಬೌಂಡರಿ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ, ಲುಂಗಿ ಎಂಗಿಡಿ ಮಾರಕ ದಾಳಿಗೆ ತತ್ತರಿಸಿ ಹೋಯಿತು. ಟೀಂ ಇಂಡಿಯಾ 49 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಆದರೆ 5ನೇ ವಿಕೆಟ್‌ಗೆ ದಿನೇಶ್ ಕಾರ್ತಿಕ್ ಹಾಗೂ ಸೂರ್ಯಕುಮಾರ್ ಯಾದವ್ ಜೋಡಿ 51 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸಮಯೋಚಿತ ಬ್ಯಾಟಿಂಗ್ ನಡೆಸಿದ ಸೂರ್ಯಕುಮಾರ್ ಯಾದವ್ ಆಕರ್ಷಕ 68 ರನ್‌ ಬಾರಿಸುವ ಮೂಲಕ ಟೀಂ ಇಂಡಿಯಾ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು.

ಪಾಕಿಸ್ತಾನ ಸೆಮೀಸ್ ಹಾದಿ ಬಹುತೇಕ ಅಂತ್ಯ: ದಕ್ಷಿಣ ಆಫ್ರಿಕಾ ತಂಡವು ಇದೀಗ ಗ್ರೂಪ್ 2ನಲ್ಲಿ ಎರಡು ಗೆಲುವು ಹಾಗೂ ಒಂದು ರದ್ದಾದ ಪಂದ್ಯದ ನೆರವಿನಿಂದ ಒಟ್ಟು 5 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇನ್ನು ಟೀಂ ಇಂಡಿಯಾ 4 ಅಂಕಗಳ ಸಹಿತ ಎರಡನೇ ಸ್ಥಾನಕ್ಕೆ ಜಾರಿದೆ. ಆದರೆ ಭಾರತ ಇನ್ನುಳಿದ ಎರಡು ಪಂದ್ಯಗಳಲ್ಲಿ ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ವಿರುದ್ದ ಕಣಕ್ಕಿಳಿಯಲಿದ್ದು, ಎರಡೂ ಪಂದ್ಯಗಳಲ್ಲೂ ಗೆಲುವು ಸಾಧಿಸಿದರೆ 8 ಅಂಕಗಳೊಂದಿಗೆ ಸುಲಭವಾಗಿ ಸೆಮೀಸ್ ಪ್ರವೇಶಿಸಲಿದೆ. ಇನ್ನು ಎರಡು ಸೋಲು ಒಂದು ಗೆಲುವು ಗಳೊಂದಿಗೆ ಕೇವಲ 2 ಅಂಕಗಳಿಸಿದ್ದು, ಇನ್ನೆರಡು ಪಂದ್ಯ ಜಯಿಸಿದರೂ ತನ್ನ ಖಾತೆಯಲ್ಲಿ 6 ಅಂಕಗಳನ್ನು ಹೊಂದಲಿದೆ. ಹೀಗಿದ್ದೂ ಸೆಮೀಸ್ ಹಾದಿ ತಲುಪಲು ಪವಾಡವೇ ನಡೆಯಬೇಕಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್
ಕೆಲವೇ ದಿನದಲ್ಲಿ ಸ್ಮೃತಿ ಮಂಧನಾ ಮದುವೆ ಆಘಾತದಿಂದ ಹೊರಬಂದಿದ್ದೇಗೆ? 3 ವರ್ಷ ಹಿಂದೆ ಹೇಳಿದ್ದ ಟಿಪ್ಸ್