ದಕ್ಷಿಣ ಆಫ್ರಿಕಾ ವೇಗಿಗಳ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ ಬ್ಯಾಟರ್‌ಗಳು
ಮೊದಲು ಬ್ಯಾಟ್ ಮಾಡಿ 133 ರನ್ ಬಾರಿಸಿದ ರೋಹಿತ್ ಶರ್ಮಾ ಪಡೆ
ಮತ್ತೊಮ್ಮೆ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದ ಸೂರ್ಯಕುಮಾರ್ ಯಾದವ್
ಪರ್ತ್(ಅ.30): ಲುಂಗಿ ಎಂಗಿಡಿ ಮಾರಕ ದಾಳಿಯ ಹೊರತಾಗಿಯೂ, ಸೂರ್ಯಕುಮಾರ್ ಯಾದವ್ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 133 ರನ್ ಬಾರಿಸಿದ್ದು, ದಕ್ಷಿಣ ಆಫ್ರಿಕಾ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದೆ.
ಇಲ್ಲಿನ ಪರ್ತ್ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಮತ್ತೊಮ್ಮೆ ಭಾರತ ನಿರೀಕ್ಷಿತ ಆರಂಭ ಪಡೆಯಲು ವಿಫಲವಾಯಿತು. ನಾಯಕ ರೋಹಿತ್ ಶರ್ಮಾ 14 ಎಸೆತಗಳಲ್ಲಿ 15 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ಕೆ ಎಲ್ ಮೂರನೇ ಪಂದ್ಯದಲ್ಲೂ ಮತ್ತೆ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ವಿಫಲರಾದರು. ರಾಹುಲ್ 14 ಎಸೆತಗಳಲ್ಲಿ 9 ರನ್ ಬಾರಿಸಿ ಎಂಗಿಡಿಗೆ ಎರಡನೇ ಬಲಿಯಾದರು.
undefined
T20 World Cup: ದಕ್ಷಿಣ ಆಫ್ರಿಕಾ ಎದುರು ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ, ಒಂದು ಮಹತ್ವದ ಬದಲಾವಣೆ
ಇನ್ನು ಮೊದಲೆರಡು ಪಂದ್ಯಗಳಲ್ಲಿ ಅಜೇಯ ಅರ್ಧಶತಕ ಸಿಡಿಸಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಆರಂಭದಲ್ಲೇ ಕಟ್ಟಿ ಹಾಕುವಲ್ಲಿ ಲುಂಗಿ ಎಂಗಿಡಿ ಯಶಸ್ವಿಯಾದರು. ವಿರಾಟ್ ಕೊಹ್ಲಿ 11 ರನ್ ಬಾರಿಸುತ್ತಿದ್ದಂತೆಯೇ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸಾವಿರ ರನ್ ಪೂರೈಸಿದ ಎರಡನೇ ಭಾರತೀಯ ಬ್ಯಾಟರ್ ಎನ್ನುವ ಹಿರಿಮೆಗೆ ಪಾತ್ರರಾದರು. ಇದರ ಬೆನ್ನಲ್ಲೇ 12 ರನ್ ಗಳಿಸಿದ್ದ ವಿರಾಟ್ ಕೊಹ್ಲಿ, ವೇಗಿ ಎಂಗಿಡಿಗೆ ಮೂರನೇ ಬಲಿಯಾದರು. ಅಕ್ಷರ್ ಪಟೇಲ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ದೀಪಕ್ ಹೂಡಾ ಖಾತೆ ತೆರೆಯುವ ಮುನ್ನವೇ ನೊಕಿಯಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪೆರೇಡ್ ನಡೆಸಿದರು. ಹಾರ್ದಿಕ್ ಪಾಂಡ್ಯ 2 ರನ್ ಗಳಿಸಿ ಎಂಗಿಡಿಗೆ ನಾಲ್ಕನೇ ಬಲಿಯಾದರು.
Suryakumar Yadav and Dinesh Karthik look to revive India's innings 💪 | | 📝: https://t.co/GI5MZQJSjA pic.twitter.com/9ZKa7Q6s6H
— ICC (@ICC)ಮತ್ತೆ ಆಸರೆಯಾದ ಸೂರ್ಯಕುಮಾರ್ ಯಾದವ್: ಭಾರತ ತಂಡವು 8.3 ಓವರ್‌ನಲ್ಲಿ ಕೇವಲ 49 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದರು. ಆದರೆ ಆರನೇ ವಿಕೆಟ್‌ಗೆ ಸೂರ್ಯಕುಮಾರ್ ಯಾದವ್ ಹಾಗೂ ದಿನೇಶ್ ಕಾರ್ತಿಕ್ ಸಮಯೋಚಿತ 52 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. 52 ರನ್‌ಗಳ ಜತೆಯಾಟದಲ್ಲಿ ದಿನೇಶ್ ಕಾರ್ತಿಕ್ ಬಾರಿಸಿದ್ದು ಕೇವಲ 6 ರನ್ ಮಾತ್ರ.
ಕ್ರಿಕೆಟ್ ವೃತ್ತಿಜೀವನದಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ಸೂರ್ಯಕುಮಾರ್ ಯಾದವ್, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ ಎರಡನೇ ಅರ್ಧಶತಕ ಸಿಡಿಸುವ ಮೂಲಕ ಕಂಗಾಲಾಗಿದ್ದ ತಂಡಕ್ಕೆ ಆಸರೆಯಾದರು. ಒಟ್ಟು 40 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ ಯಾದವ್ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 68 ರನ್ ಬಾರಿಸಿ 19ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಒಂದು ವೇಳೆ ಸೂರ್ಯಕುಮಾರ್ ಯಾದವ್ ಅರ್ಧಶತಕ ಬಾರಿಸದಿದ್ದರೇ ಟೀಂ ಇಂಡಿಯಾ 100 ರನ್ ಗಡಿ ದಾಟುವುದು ಕಷ್ಟವಾಗುವ ಸಾಧ್ಯತೆಯಿತ್ತು, ಯಾಕೆಂದರೆ ಈ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಪರ ದಾಖಲಾದ ಎರಡನೇ ಗರಿಷ್ಠ ಸ್ಕೋರ್ 15 ರನ್ ಎನಿಸಿಕೊಂಡಿತು. ರೋಹಿತ್ ಶರ್ಮಾ, ಕೊಹ್ಲಿ ಹಾಗೂ ಸೂರ್ಯಕುಮಾರ್ ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳು ಸಹಾ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ.
ದಕ್ಷಿಣ ಆಫ್ರಿಕಾ ತಂಡದ ಪರ ಲುಂಗಿ ಎಂಗಿಡಿ 4 ವಿಕೆಟ್ ಪಡೆದರೆ, ಎಡಗೈ ವೇಗಿ ವೇಯ್ನ್ ಪಾರ್ನೆಲ್ 3 ಹಾಗೂ ಏನ್ರಿಚ್ ನೊಕಿಯ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಭಾರತ: 133/9
ಸೂರ್ಯಕುಮಾರ್ ಯಾದವ್: 68
ರೋಹಿತ್ ಶರ್ಮಾ: 15
ಲುಂಗಿ ಎಂಗಿಡಿ: 29/4
(* ಭಾರತದ ಬ್ಯಾಟಿಂಗ್ ಮುಕ್ತಾಯದ ವೇಳೆಗೆ)