
ಅಹಮದಾಬಾದ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ಆಫ್ಘಾನಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದು, ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಡಬಲ್ ಸೂಪರ್ ಓವರ್ ಪಂದ್ಯಕ್ಕೆ ಸಾಕ್ಷಿಯಾಗಿದೆ. ಮೊದಲ ಓವರ್ ಓವರ್ ಕೂಡಾ ಟೈ ಆಗಿದ್ದರಿಂದ ಫಲಿತಾಂಶಕ್ಕಾಗಿ ಎರಡನೇ ಸೂಪರ್ ಓವರ್‌ಗೆ ಮೊರೆ ಹೋಗಲಾಯಿತು. ಎರಡನೇ ಸೂಪರ್ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು 5 ರನ್ ಅಂತರದ ರೋಚಕ ಜಯ ಸಾಧಿಸಿತು.
ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 187 ರನ್ ಕಲೆಹಾಕಿತ್ತು. ಇನ್ನು ಗುರಿ ಬೆನ್ನತ್ತಿದ ಆಫ್ಘಾನಿಸ್ತಾನ ತಂಡವು, ಕೊನೆಯ ಓವರ್‌ನಲ್ಲಿ ನಡೆದ ಹೈಡ್ರಾಮದ ನೆರವಿನಿಂದ 187 ರನ್ ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿತು. ಹೀಗಾಗಿ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು.
ಮೊದಲು ಬ್ಯಾಟ್ ಮಾಡಲಿಳಿದ ಆಫ್ಘಾನಿಸ್ತಾನ ಪರ ಅಝ್ಮತುಲ್ಲಾ ಓಮರ್‌ಝೈ, ಲುಂಗಿ ಎಂಗಿಡಿ ಎಸೆದ ಮೊದಲ ಎಸೆತವನ್ನೇ ಬೌಂಡರಿಗಟ್ಟಿದರು. ಮರು ಎಸೆತವನ್ನು ಓಮರ್‌ಝೈ ಸಿಕ್ಸರ್ ಚಚ್ಚಿದರು. ಇದಾದ ಬಳಿಕ ಮೂರನೇ ಎಸೆತದಲ್ಲಿ ಓವರ್‌ಝೈ ಒಂದು ರನ್ ಗಳಿಸಿದರು. ಇನ್ನು ನಾಲ್ಕನೇ ಎಸೆತದಲ್ಲಿ ರೆಹಮನುಲ್ಲಾ ಗುರ್ಬಾಜ್ ಒಂದು ರನ್ ಗಳಿಸಿದರು. ಐದನೇ ಎಸೆತದಲ್ಲಿ ಓಮರ್‌ಝೈ ಬೌಂಡರಿ ಗಳಿಸಿದರು ಹಾಗೂ ಕೊನೆಯ ಎಸೆತದಲ್ಲಿ ಒಂದು ರನ್ ಗಳಿಸಿದರು. ಈ ಮೂಲಕ ದಕ್ಷಿಣ ಆಫ್ರಿಕಾಗೆ ಗೆಲ್ಲಲು 18 ರನ್ ಗುರಿ ನೀಡಿತು.
ಇನ್ನು ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಮಿಲ್ಲರ್ ಹಾಗೂ ಬ್ರೆವೀಸ್‌ರನ್ನು ಮೈದಾನಕ್ಕಿಳಿಸಿತು. ಬೌಲಿಂಗ್ ಮಾಡಲಿಳಿದ ಫಜಲ್‌ಹಕ್ ಫಾರೂಕಿ ಮೊದಲ ಎಸೆತದಲ್ಲಿ ಮಿಲ್ಲರ್ ಗೆ ಒಂದು ರನ್ ಬಿಟ್ಟುಕೊಟ್ಟರು. ಮರು ಎಸೆತದಲ್ಲಿ ಬ್ರೆವೀಸ್ ಸಿಕ್ಸರ್ ಚಚ್ಚಿದರು. ಇನ್ನು ಮೂರನೇ ಎಸೆತದಲ್ಲಿ ಫಾರೂಕಿ, ಬ್ರೇವಿಸ್ ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಇನ್ನು ನಾಲ್ಕನೇ ಎಸೆತದಲ್ಲಿ ಸ್ಟಬ್ಸ್ ಬೌಂಡರಿ ಬಾರಿಸಿದರು. ಐದನೇ ಎಸೆತದಲ್ಲಿ ಯಾವುದೇ ರನ್ ನೀಡಲಿಲ್ಲ. ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಸ್ಟಬ್ಸ್ ಸೂಪರ್ ಓವರ್ ಮತ್ತೆ ಟೈ ಆಗುವಂತೆ ಮಾಡಿದರು.
ಎರಡನೇ ಸೂಪರ್ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ಬಾರಿಸಿದ ಎರಡು ಸಿಕ್ಸರ್ ಹಾಗೂ ಸ್ಟಬ್ಸ್ ಬಾರಿಸಿದ ಒಂದು ಸಿಕ್ಸರ್ ನೆರವಿನಿಂದ ಎರಡನೇ ಸೂಪರ್ ಓವರ್‌ನಲ್ಲಿ 23 ರನ್ ಕಲೆಹಾಕಿತು. ಈ ಮೂಲಕ ಆಫ್ಘಾನ್‌ಗೆ ಕಠಿಣ ಗುರಿ ನೀಡಿತು. ಎರಡನೇ ಸೂಪರ್ ಓವರ್ ಮಾಡುವ ಜವಾಬ್ದಾರಿ ಹೊತ್ತ ಕೇಶವ್ ಮಹರಾಜ್ ಮೊದಲ ಎಸೆತದಲ್ಲಿ ನಬಿಗೆ ಯಾವುದೇ ರನ್ ನೀಡಲಿಲ್ಲ. ಎರಡನೇ ಎಸೆತದಲ್ಲಿ ನಬಿ ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಕ್ರೀಸ್‌ಗಿಳಿದ ರೆಹಮನುಲ್ಲಾ ಗುರ್ಬಾಜ್ ಸತತ ಮೂರು ಎಸೆತಗಳಲ್ಲಿ 3 ಸಿಕ್ಸರ್ ಸಿಡಿಸುವ ಮೂಲಕ ಆಫ್ಘಾನ್ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದರು. ಒತ್ತಡದಲ್ಲಿ ಕೇಶವ್ ಮಹರಾಜ್ ಒಂದು ವೈಡ್ ಬಾಲ್ ಎಸೆತದರು. ಕೊನೆಯ ಎಸೆತದಲ್ಲಿ ಆಫ್ಘಾನ್ ಗೆಲ್ಲಲು ಕೇವಲ 5 ರನ್ ಅಗತ್ಯವಿತ್ತು. ಆದರೆ ಬೌಂಡರಿ ಬಾರಿಸುವ ಯತ್ನದಲ್ಲಿ ಗುರ್ಬಾಜ್ ವಿಕೆಟ್ ಒಪ್ಪಿಸುವುದರೊಂದಿಗೆ ಆಫ್ಘಾನ್ ಪಂದ್ಯ ಕೈಚೆಲ್ಲಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.