T20 World Cup: ಹರಿಣಗಳಿಗೆ ಸುಲಭ ಗುರಿ ನೀಡಿದ ಬಾಂಗ್ಲಾದೇಶ

By Suvarna NewsFirst Published Nov 2, 2021, 5:24 PM IST
Highlights

* ಆಫ್ರಿಕಾ ಎದುರು ಕೇವಲ 84 ರನ್‌ಗಳಿಗೆ ಬಾಂಗ್ಲಾದೇಶ ಆಲೌಟ್

* ಸುಲಭ ಗುರಿ ಪಡೆದ ಹರಿಣಗಳು

* ತಲಾ 3 ವಿಕೆಟ್ ಕಬಳಿಸಿ ಮಿಂಚಿದ ರಬಾಡ, ನೊಕಿಯೆ

ಅಬುಧಾಬಿ(ನ.02): ವೇಗಿ ಕಗಿಸೋ ರಬಾಡ (Kagiso Rabada) (20/3) ಹಾಗೂ ಏನ್ರಿಚ್ ನೊಕಿಯೆ (Anrich Nortje) (8/3) ಮಾರಕ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ಕ್ರಿಕೆಟ್ ತಂಡವು (Bangladesh Cricket Team) 10 ವಿಕೆಟ್ ಕಳೆದುಕೊಂಡು ಕೇವಲ 84 ರನ್‌ ಬಾರಿಸಿದ್ದು, ತೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡಕ್ಕೆ (South Africa Cricket) ಗೆಲ್ಲಲು ಸುಲಭ ಗುರಿ ನೀಡಿದೆ. ಚುರುಕಾಗಿ ರನ್‌ ಗಳಿಸಿ ನೆಟ್‌ ರನ್‌ರೇಟ್ ಉತ್ತಮಪಡಿಸಿಕೊಳ್ಳಲು ಹರಿಣಗಳ ಪಡೆ ಎದುರು ನೋಡುತ್ತಿದೆ.

ಇಲ್ಲಿನ ಶೇಕ್ ಜಾಯೆದ್ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬಾಂಗ್ಲಾದೇಶ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ರಬಾಡ ಎಸೆದ 3.5 ಓವರ್‌ನಲ್ಲಿ ಬಾಂಗ್ಲಾದೇಶ ಆರಂಭಿಕ ಬ್ಯಾಟರ್ ಮೊಹಮ್ಮದ್ ನಯೀಮ್‌ (Mohammad Naim) 9 ರನ್‌ ಬಾರಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಮರು ಎಸೆತದಲ್ಲಿ ಸೌಮ್ಯ ಸರ್ಕಾರ ಶೂನ್ಯ ಸುತ್ತಿ ರಬಾಡಗೆ ಎರಡನೇ ಬಲಿಯಾದರು. ಇನ್ನು ಬಾಂಗ್ಲಾ ಅನುಭವಿ ಬ್ಯಾಟರ್ ಮುಷ್ಫಿಕುರ್ ರಹೀಮ್ (Mushfiqur Rahim) ಕೂಡಾ ಶೂನ್ಯ ಸುತ್ತಿ ರಬಾಡಗೆ ಮೂರನೇ ಬಲಿಯಾದರು. ಇನ್ನು ನಾಯಕ ಮೊಹಮದುಲ್ಲಾ 3 ರನ್‌ ಬಾರಿಸಿ ನೊಕಿಯೆಗೆ ವಿಕೆಟ್ ಒಪ್ಪಿಸಿದರೆ, ಅಫಿಫ್ ಹೊಸೈನ್ ಶೂನ್ಯ ಸುತ್ತಿ ಪ್ರಿಟೋರಿಯಸ್‌ಗೆ ವಿಕೆಟ್‌ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬಹುತೇಕ ಬ್ಯಾಟರ್‌ಗಳು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದು, ಬಾಂಗ್ಲಾದೇಶ ತಂಡದ ಪಾಲಿಗೆ ಹಿನ್ನೆಡೆಯಾಗಿ ಪರಿಣಮಿಸಿತು. ಅನುಭವಿ ಆಟಗಾರರು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಲು ವಿಫಲರಾದರು. 

A spectacular performance from South Africa leads to them bowling out Bangladesh for 84 👏

Which bowler impressed you the most? | | https://t.co/ahwmbzGcK2 pic.twitter.com/8CgxeaTNI8

— T20 World Cup (@T20WorldCup)

T20 World Cup: ಬಾಂಗ್ಲಾ ಎದುರು ಟಾಸ್ ಗೆದ್ದ ಆಫ್ರಿಕಾ ಬೌಲಿಂಗ್ ಆಯ್ಕೆ

ಕೊಂಚ ಪ್ರತಿರೋಧ ತೋರಿದ ಲಿಟನ್ ದಾಸ್‌, ಮಹದಿ ಹಸನ್: ದಕ್ಷಿಣ ಆಫ್ರಿಕಾದ ಸಂಘಟಿತ ಬೌಲಿಂಗ್ ಪ್ರದರ್ಶನಕ್ಕೆ ಬಾಂಗ್ಲಾದೇಶ ಬ್ಯಾಟರ್‌ಗಳು ಅಕ್ಷರಶಃ ನಲುಗಿ ಹೋದರು. ಐವರು ಬಾಂಗ್ಲಾ ಬ್ಯಾಟರ್‌ಗಳು ಶೂನ್ಯ ಸುತ್ತಿದರು. ಇನ್ನುಳಿದಂತೆ ಆರಂಭಿಕ ಬ್ಯಾಟರ್‌ ಲಿಟನ್ ದಾಸ್‌ 36 ಎಸೆತಗಳನ್ನು ಎದುರಿಸಿ 1 ಬೌಂಡರಿ ಸಹಿತ 24 ರನ್‌ ಬಾರಿಸಿದರೆ, ಮೆಹದಿ ಹಸನ್ ಕೊನೆಯಲ್ಲಿ 25 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 27 ರನ್ ಬಾರಿಸಿ ವಿಕೆಟ್‌ ಒಪ್ಪಿಸಿದರು. ಇನ್ನು ಶಕೀಬ್ ಅಲ್ ಹಸನ್ (Shakib Al Hasan) ಬದಲು ತಂಡದಲ್ಲಿ ಸ್ಥಾನ ಪಡೆದ ಶಮೀಮ್ ಹೊಸೈನ್ 11 ರನ್‌ ಬಾರಿಸಿದರು. ಈ ಮೂವರು ಬ್ಯಾಟರ್ ಹೊರತುಪಡಿಸಿ ಬಾಂಗ್ಲಾದೇಶದ ಉಳಿದ್ಯಾವ ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ.

Yuvraj Singh Comeback ನಿವೃತ್ತಿ ವಾಪಾಸ್ ಪಡೆದು ಮೈದಾನಕ್ಕಿಳಿಯುವುದಾಗಿ ಘೋಷಿಸಿದ ಸಿಕ್ಸರ್‌ ಕಿಂಗ್ ಯುವರಾಜ್ ಸಿಂಗ್..!

ದಕ್ಷಿಣ ಆಫ್ರಿಕಾ ಪರ ವೇಗದ ದಾಳಿ ಸಂಘಟಿಸಿದ ಕಗಿಸೋ ರಬಾಡ ಕೇವಲ 20 ರನ್‌ ನೀಡಿ ಅಗ್ರ ಕ್ರಮಾಂಕದ ಮೂರು ವಿಕೆಟ್‌ ಪಡೆದು ಬಾಂಗ್ಲಾಗೆ ಆರಂಭಿಕ ಆಘಾತ ನೀಡಿದರು. ಇನ್ನು ಮತ್ತೋರ್ವ ವೇಗಿ ಏನ್ರಿಚ್ ನೊಕಿಯೆ ಕೇವಲ 8 ರನ್‌ ನೀಡಿ 3 ವಿಕೆಟ್ ಕಬಳಿಸಿದರು. ಇನ್ನುಳಿದಂತೆ ಸ್ಪಿನ್ನರ್ ತಬ್ರೀಜ್ ಸಂಶಿ 2 ಹಾಗೂ ಡ್ವೇನ್ ಪ್ರಿಟೋರಿಯಸ್‌ ಒಂದು ವಿಕೆಟ್ ಕಬಳಿಸಿ ಮಿಂಚಿದರು.

ಸಂಕ್ಷಿಪ್ತ ಸ್ಕೋರ್

ಬಾಂಗ್ಲಾದೇಶ: 84/10 (18.2 ಓವರ್‌ಗಳಲ್ಲಿ)
ಮೆಹದಿ ಹಸನ್: 27
ಏನ್ರಿಚ್ ನೊಕಿಯೆ: 8/3

(* ಬಾಂಗ್ಲಾದೇಶ ಬ್ಯಾಟಿಂಗ್ ಮುಕ್ತಾಯದ ವೇಳೆಗೆ)

click me!