ಭಾನುವಾರ ನ್ಯೂಯಾರ್ಕ್‌ನಲ್ಲಿ ನಿಗದಿಯಾಗಿರುವ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ, ಭಾನುವಾರ ನ್ಯೂಯಾರ್ಕ್‌ನಲ್ಲಿ ಮಳೆಯಾಗುವ ಸಾಧ್ಯತೆ ಶೇ.51ರಷ್ಟು ಇದೆ.
ನ್ಯೂಯಾರ್ಕ್: ಟಿ20 ವಿಶ್ವಕಪ್ ಟೂರ್ನಿಯ ಬಹುನಿರೀಕ್ಷಿತ ಕದನಕ್ಕೆ ವೇದಿಕೆ ಸಜ್ಜಾಗಿದ್ದು, ಇಂದು ಸಂಜೆ 8 ಗಂಟೆಯಿಂದ ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಹೀಗಿರುವಾಗಲೇ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆಯ ಸುದ್ದಿಯೊಂದು ಎದುರಾಗಿದ್ದು, ಈ ಪಂದ್ಯ ನಡೆಯೋದೇ ಡೌಟ್ ಎನ್ನಲಾಗುತ್ತಿದೆ.
ಹೌದು, ಭಾನುವಾರ ನ್ಯೂಯಾರ್ಕ್‌ನಲ್ಲಿ ನಿಗದಿಯಾಗಿರುವ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ, ಭಾನುವಾರ ನ್ಯೂಯಾರ್ಕ್‌ನಲ್ಲಿ ಮಳೆಯಾಗುವ ಸಾಧ್ಯತೆ ಶೇ.51ರಷ್ಟು ಇದೆ. ಕ್ರೀಡಾಂಗಣದ ಔಟ್‌ಫೀಲ್ಡ್ ಮೊದಲೇ ನಿಧಾನಗತಿಯಲ್ಲಿದ್ದು, ಮಳೆ ಬಿದ್ದರೆ ಮತ್ತಷ್ಟು ನಿಧಾನಗೊಳ್ಳಲಿದೆ. ಜೊತೆಗೆ ಇದೊಂದು ತಾತ್ಕಾಲಿಕ ಕ್ರೀಡಾಂಗಣವಾಗಿರುವ ಕಾರಣ, ಇಲ್ಲಿ ಒಳಚರಂಡಿ ವ್ಯವಸ್ಥೆಯೂ ಸೂಕ್ತ ರೀತಿಯಲ್ಲಿ ಇದ್ದಂತಿಲ್ಲ. ಹೀಗಾಗಿ ಕೆಲ ಕಾಲ ಮಳೆ ಸುರಿದರೂ ಪಂದ್ಯ ರದ್ದಾಗುವ ಸಾಧ್ಯತೆಯೇ ಹೆಚ್ಚು.
ಪಂದ್ಯಕ್ಕೆ ಭಾರಿ ಭದ್ರತೆ!
ಐಸಿಸ್ ಉಗ್ರರಿಂದ ಪಂದ್ಯದ ಮೇಲೆ ದಾಳಿ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಎರಡೂ ತಂಡಗಳಿಗೆ ನ್ಯೂಯಾರ್ಕ್ ಪೊಲೀಸರು ಬಿಗಿ ಭದ್ರತೆ ಒದಗಿಸಲಿದ್ದಾರೆ. ಅಲ್ಲದೇ ಕ್ರೀಡಾಂಗಣದ ಸುತ್ತ ಮುತ್ತ ದೊಡ್ಡ ಸಂಖ್ಯೆಯಲ್ಲಿ ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪಾಕಿಸ್ತಾನ ಎದುರಿನ ಹೈವೋಲ್ಟೇಜ್ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ; ಒಂದು ಮೇಜರ್ ಚೇಂಜ್?
ಅಮೆರಿಕ ಅಧ್ಯಕ್ಷರ ಕಾರ್ಯಕ್ರಮಗಳಿಗೆ ನೀಡುವ ಭದ್ರತೆ ರೀತಿಯಲ್ಲಿ ಈ ಪಂದ್ಯಕ್ಕೂ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ನ್ಯೂಯಾರ್ಕ್ ಪೊಲೀಸ್ ಆಯುಕ್ತ ತಿಳಿಸಿದ್ದಾರೆ. ಎಫ್‌ಬಿಐ ಸೇರಿ ಅಮೆರಿಕದ ವಿವಿಧ ಭದ್ರತಾ ಏಜೆನ್ಸಿಗಳು ಸಹ ತನ್ನ ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಿವೆ ಎಂದು ತಿಳಿದುಬಂದಿದೆ.
ಬೆಟ್ಟಿಂಗ್: ಭಾರತವೇ ಫೇವರಿಟ್!
ಭಾರತ-ಪಾಕ್ ಪಂದ್ಯ ಬೆಟ್ಟಿಂಗ್ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ್ದು, ಕ್ರಿಕೆಟ್ ಗೊತ್ತಿಲ್ಲದವರಿಂದಲೂ ಉಭಯ ತಂಡಗಳ ಮೇಲೆಕೋಟ್ಯಂತರ ರೂ. ಹಣ ಹೂಡಿಕೆ ಮಾಡುತ್ತಿದ್ದಾರೆ.
ಬೆಟ್ಟಿಂಗ್ ಆ್ಯಪ್‌ಗಳಲ್ಲಿ ಭಾರತವೇ ಗೆಲುವಿನ ಫೇವರಿಟ್ ಎಂದು ಪ್ರದರ್ಶಿಸಲಾಗುತ್ತಿದೆ. ಈ ನಡುವೆ ಅಮೆರಿಕದ ಖ್ಯಾತ ರ್‍ಯಾಪ್ ಗಾಯಕ ಡ್ರೇಕ್ ಅಬ್ರಹಾರಂ ಪಾಕ್ ವಿರುದ್ಧ ಭಾರತ ಗೆಲ್ಲಲಿದೆ ಎಂದು 6.5 ಲಕ್ಷ ಡಾಲರ್(5.42 ಕೋಟಿ ರು.) ಬೆಟ್ ಹಾಕಿದ್ದಾರೆ. ಈ ವಿಷಯವನ್ನು ಸ್ವತಃ ಅವರೇ ಇನ್‌ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ. ಅವರು ಇತ್ತೀಚೆಗೆ ಐಪಿಎಲ್ ಫೈನಲ್‌ಗೂ ಮುನ್ನ ಕೆಕೆಆರ್ ಗೆಲ್ಲಲಿದೆ ಎಂದು ₹2 ಕೋಟಿ ಬೆಟ್ ಕಟ್ಟಿದ್ದರು.
T20 World Cup 2024: ಇಂದು ಭಾರತ vs ಪಾಕ್ ಹೈವೋಲ್ಟೇಜ್ ಕದನ!
ಜಾಹೀರಾತು: ಪ್ರತಿ ಸೆಕೆಂಡ್‌ಗೆ 4 ಲಕ್ಷ ರು.?
ಬದ್ಧವೈರಿಗಳ ನಡುವಿನ ಪಂದ್ಯದ ವೇಳೆ ಪ್ರಸಾರಗೊಳ್ಳುವ ಜಾಹೀರಾತಿನ ಮೌಲ್ಯ ಕೂಡಾ ಭರ್ಜರಿ ಏರಿಕೆಯಾಗಿದ್ದು, ಪ್ರತಿ ಸೆಕೆಂಡ್‌ಗೆ ₹4 ಲಕ್ಷ ರು. ನಿಗದಿಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ವಿಶ್ವಕಪ್‌ನ ಸಾಮಾನ್ಯ ಪಂದ್ಯಗಳಲ್ಲಿ ಪ್ರತಿ 10 ಸೆಕೆಂಡ್‌ಗಳ ಜಾಹೀರಾತಿಗೆ ₹6 ಲಕ್ಷ ಇದೆ. ಆದರೆ ಭಾರತ-ಪಾಕ್ ಪಂದ್ಯದ ವೇಳೆ 10 ಸೆಕೆಂಡ್ ಜಾಹೀರಾತು ಮೌಲ್ಯ ಕನಿಷ್ಠ ₹40 ಲಕ್ಷಕ್ಕಿಂತ ಹೆಚ್ಚಿದೆ ಎಂದು ತಿಳಿದುಬಂದಿದೆ.
ಭಾರತ-ಪಾಕ್ ಟಿ20 ವಿಶ್ವಕಪ್ ಮುಖಾಮುಖಿ
ವರ್ಷ ಸ್ಕೋರ್ ಫಲಿತಾಂಶ
2007 ಭಾರತ 141/9, ಪಾಕ್ 141/9 ಬೌಲ್ ಔಟ್‌ನಲ್ಲಿ ಗೆದ್ದ ಭಾರತ
2007 ಭಾರತ 157/5, ಪಾಕ್ 152/10 ಭಾರತಕ್ಕೆ 5 ರನ್ ಗೆಲುವು(ಫೈನಲ್)
2012 ಪಾಕ್ 128/10, ಭಾರತ 129/2 ಭಾರತಕ್ಕೆ 8 ವಿಕೆಟ್ ಗೆಲುವು
2014 ಪಾಕ್ 130/7, ಭಾರತ 131/3 ಭಾರತಕ್ಕೆ 7 ವಿಕೆಟ್ ಜಯ
2016 ಪಾಕ್ 118/5, ಭಾರತ 119/4 ಭಾರತಕ್ಕೆ 6 ವಿಕೆಟ್ ಗೆಲುವು
2021 ಭಾರತ 151/7, ಪಾಕ್ 152/0 ಪಾಕ್‌ಗೆ 10 ವಿಕೆಟ್ ಗೆಲುವು
2022 ಪಾಕ್ 159/8, ಭಾರತ 160/6 ಭಾರತಕ್ಕೆ 4 ವಿಕೆಟ್ ಜಯ