2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ICC ಮಹತ್ವದ ಬದಲಾವಣೆ..!

By Naveen KodaseFirst Published Nov 23, 2022, 11:27 AM IST
Highlights

* 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ವೆಸ್ಟ್ ಇಂಡೀಸ್-ಅಮೆರಿಕ ಆತಿಥ್ಯ
* ಮುಂಬರುವ ಟಿ20 ವಿಶ್ವಕಪ್‌ ಹೊಸ ಮಾದರಿಯಲ್ಲಿ ಆಯೋಜನೆ
* ಈಗಿರುವ 16 ತಂಡಗಳ ಬದಲಿಗೆ 20 ತಂಡಗಳು ಪಾಲ್ಗೊಳ್ಳಲು ಅವಕಾಶ

ನವದೆಹಲಿ(ನ.23): ಟಿ20 ವಿಶ್ವಕಪ್‌ ಮಾದರಿಯಲ್ಲಿ ಐಸಿಸಿ ಬದಲಾವಣೆ ತಂದಿದ್ದು, 2024ರ ವಿಶ್ವಕಪ್‌ ಹೊಸ ಮಾದರಿಯಲ್ಲಿ ನಡೆಯಲಿದೆ. ಈಗಿರುವ 16 ತಂಡಗಳ ಬದಲು ಮುಂದಿನ ಆವೃತ್ತಿಯಲ್ಲಿ 20 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ ಎಂದು ಐಸಿಸಿ ತಿಳಿಸಿದೆ. 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಈಗಾಗಲೇ 12 ತಂಡಗಳು ನೇರ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.

2021, 2022ರ ಟಿ20 ವಿಶ್ವಕಪ್‌ ಸೂಪರ್‌ 12 ಮಾದರಿಯಲ್ಲಿ ನಡೆದಿತ್ತು. ಆದರೆ 2024ರಲ್ಲಿ ವೆಸ್ಟ್‌ಇಂಡೀಸ್‌, ಅಮೆರಿಕದಲ್ಲಿ ನಡೆಯುಲಿರುವ ಟೂರ್ನಿಯಲ್ಲಿ ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಿದ್ದು, ಪ್ರತೀ ಗುಂಪಿನಲ್ಲಿ ತಲಾ 5 ತಂಡಗಳಿರಲಿವೆ. ಪ್ರತೀ ಗುಂಪಿನಿಂದ ಅಗ್ರ 2 ಸ್ಥಾನಗಳನ್ನು ಪಡೆದ ತಂಡಗಳು ಸೂಪರ್‌ 8 ಹಂತ ಪ್ರವೇಶಿಸಲಿದ್ದು, ಅಲ್ಲಿ ತಲಾ 4 ತಂಡಗಳ 2 ಗುಂಪುಗಳಾಗಿ ಸ್ಪರ್ಧೆ ನಡೆಯಲಿವೆ. ಬಳಿಕ ಎರಡೂ ಗುಂಪಿನಿಂದ ತಲಾ 2 ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಡಲಿದ್ದು, ಗೆದ್ದ ತಂಡಗಳು ಫೈನಲ್‌ನಲ್ಲಿ ಆಡಲಿವೆ.

ಆತಿಥ್ಯ ದೇಶಗಳಾದ ವೆಸ್ಟ್‌ಇಂಡೀಸ್‌, ಅಮೆರಿಕ, 2022ರ ಟಿ20 ವಿಶ್ವಕಪ್‌ನ ಅಗ್ರ 8 ತಂಡಗಳಾದ ಇಂಗ್ಲೆಂಡ್‌, ಪಾಕಿಸ್ತಾನ, ಭಾರತ, ಆಸ್ಪ್ರೇಲಿಯಾ, ದ.ಆಫ್ರಿಕಾ, ಶ್ರೀಲಂಕಾ, ನೆದರ್‌ಲೆಂಡ್‌್ಸ, ನ್ಯೂಜಿಲೆಂಡ್‌ ಹಾಗೂ ಐಸಿಸಿ ಟಿ20 ರ‍್ಯಾಂಕಿಂಗ್‌‌ ಆಧಾರದಲ್ಲಿ ಆಫ್ಘಾನಿಸ್ತಾನ, ಬಾಂಗ್ಲಾದೇಶ ತಂಡಗಳು ಈಗಾಗಲೇ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಉಳಿದ 8 ತಂಡಗಳು ಪ್ರಾದೇಶಿಕ ಅರ್ಹತಾ ಟೂರ್ನಿ ಮೂಲಕ ಅರ್ಹತೆ ಪಡೆದುಕೊಳ್ಳಲಿವೆ.

ರಿಷಭ್ ಪಂತ್, ಊರ್ವಶಿ ರೌಟೇಲಾ ಲಿಂಕ್-ಅಪ್: ಬಾಯಿ ಬಿಟ್ಟ ಶುಭಮನ್ ಗಿಲ್

ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಲ್ಲಿ ಜರುಗಿದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ 16 ತಂಡಗಳು ಪಾಲ್ಗೊಂಡಿದ್ದವು. ಈ ಪೈಕಿ 8 ತಂಡಗಳು ಸೂಪರ್ 12 ಹಂತಕ್ಕೆ ನೇರ ಅರ್ಹತೆಯನ್ನು ಪಡೆದುಕೊಂಡರೆ, ಇನ್ನುಳಿದ 8 ತಂಡಗಳು ಅರ್ಹತಾ ಸುತ್ತಿನಲ್ಲಿ ಪಾಲ್ಗೊಂಡು, ಅಲ್ಲಿಂದ ನಾಲ್ಕು ತಂಡಗಳು ಸೂಪರ್ 12 ಹಂತಕ್ಕೆ ಪ್ರವೇಶ ಪಡೆದಿದ್ದವು. ಸೂಪರ್ 12 ಹಂತದ ಅಂತ್ಯದ ವೇಳೆಗೆ ಎರಡು ಗುಂಪಿನಲ್ಲಿ ತಲಾ ಅಗ್ರ 2 ಸ್ಥಾನ ಪಡೆದಿದ್ದ ತಂಡಗಳು ಸೆಮಿಫೈನಲ್ ಪ್ರವೇಶಿಸಿದ್ದವು. ಅದರಲ್ಲಿ ಗ್ರೂಪ್ 1ನಿಂದ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳು ಸೆಮೀಸ್ ಪ್ರವೇಶಿಸಿದ್ದರೇ, ಗ್ರೂಪ್ 2 ನಿಂದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿದ್ದವು. ಇನ್ನು ಈ ಪೈಕಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಮೀಸ್‌ನಲ್ಲೇ ಮುಗ್ಗರಿಸಿದರೆ, ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದವು. ಇನ್ನು ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿದ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

click me!