ಸೆಮಿಫೈನಲ್‌ ಹೊಸ್ತಿಲಿಗೆ ದಕ್ಷಿಣ ಆಫ್ರಿಕಾ; ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ಗೆ ಸೋಲು

By Kannadaprabha News  |  First Published Jun 22, 2024, 9:08 AM IST

ಮೊದಲು ಬ್ಯಾಟ್‌ ಮಾಡಿದ ದ.ಆಫ್ರಿಕಾ, ಡಿ ಕಾಕ್‌ ಸ್ಫೋಟಕ ಆಟದ ಹೊರತಾಗಿಯೂ 6 ವಿಕೆಟ್‌ಗೆ 163 ರನ್‌ ಕಲೆಹಾಕಿತು. ಪವರ್‌-ಪ್ಲೇನಲ್ಲೇ 63 ರನ್‌ ಚಚ್ಚಿದ ಡಿ ಕಾಕ್‌-ರೀಜಾ ಹೆಂಡ್ರಿಕ್ಸ್‌ ಜೋಡಿ ತಂಡಕ್ಕೆ 200+ ರನ್‌ ಭರವಸೆ ಮೂಡಿಸಿದ್ದರು. ಆದರೆ ಬಳಿಕ ತಂಡದ ರನ್‌ ವೇಗಕ್ಕೆ ಇಂಗ್ಲೆಂಡ್ ಬೌಲರ್‌ಗಳು ಕಡಿವಾಣ ಹಾಕಿದರು.


ಗ್ರಾಸ್‌ ಐಲೆಟ್‌(ಸೇಂಟ್‌ ಲೂಸಿಯಾ): ಈ ಬಾರಿ ಟಿ20 ವಿಶ್ವಕಪ್‌ನ ಸೂಪರ್‌-8 ಹಂತದಲ್ಲಿ ಸತತ 2ನೇ ಗೆಲುವು ದಾಖಲಿಸಿದ ದಕ್ಷಿಣ ಆಫ್ರಿಕಾ, ಸೆಮಿಫೈನಲ್‌ ಹೊಸ್ತಿಲು ತಲುಪಿದೆ. ಶುಕ್ರವಾರ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ವಿರುದ್ಧ ಕರಾರುವಕ್‌ ಬೌಲಿಂಗ್‌ ದಾಳಿ ನೆರವಿನಿಂದ ದ.ಆಫ್ರಿಕಾ 7 ರನ್‌ ರೋಚಕ ಗೆಲುವು ಸಾಧಿಸಿತು.

ಮೊದಲು ಬ್ಯಾಟ್‌ ಮಾಡಿದ ದ.ಆಫ್ರಿಕಾ, ಡಿ ಕಾಕ್‌ ಸ್ಫೋಟಕ ಆಟದ ಹೊರತಾಗಿಯೂ 6 ವಿಕೆಟ್‌ಗೆ 163 ರನ್‌ ಕಲೆಹಾಕಿತು. ಪವರ್‌-ಪ್ಲೇನಲ್ಲೇ 63 ರನ್‌ ಚಚ್ಚಿದ ಡಿ ಕಾಕ್‌-ರೀಜಾ ಹೆಂಡ್ರಿಕ್ಸ್‌ ಜೋಡಿ ತಂಡಕ್ಕೆ 200+ ರನ್‌ ಭರವಸೆ ಮೂಡಿಸಿದ್ದರು. ಆದರೆ ಬಳಿಕ ತಂಡದ ರನ್‌ ವೇಗಕ್ಕೆ ಇಂಗ್ಲೆಂಡ್ ಬೌಲರ್‌ಗಳು ಕಡಿವಾಣ ಹಾಕಿದರು. ಹೆಂಡ್ರಿಕ್ಸ್‌ 25 ಎಸೆತಗಳಲ್ಲಿ 19 ರನ್‌ ಗಳಿಸಿದರೂ, ಮತ್ತೊಂದು ಕಡೆ ಸ್ಫೋಟಕ ಆಟವಾಡಿದ ಡಿ ಕಾಕ್‌ 38 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ನೊಂದಿಗೆ 65 ರನ್‌ ಚಚ್ಚಿದರು. ಇವರಿಬ್ಬರ ನಿರ್ಗಮನದ ಬಳಿಕ ದ.ಆಫ್ರಿಕಾ ಸತತ ವಿಕೆಟ್‌ ಕಳೆದುಕೊಂಡಿತು. ಆದರೆ ಮಿಲ್ಲರ್‌ 28 ಎಸೆತಗಳಲ್ಲಿ 43 ರನ್‌ ಸಿಡಿಸಿ ತಂಡವನ್ನು 160ರ ಗಡಿ ತಲುಪಿಸಿದರು.

Latest Videos

undefined

ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಇಂಗ್ಲೆಂಡ್‌, ನಿಧಾನ ಆರಂಭ ಪಡೆದರೂ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ಕೊನೆ 3 ಓವರಲ್ಲಿ ಮತ್ತೆ ದ.ಆಫ್ರಿಕಾ ಮ್ಯಾಜಿಕ್‌ ಮಾಡಿ ಪಂದ್ಯ ತನ್ನದಾಗಿಸಿಕೊಂಡಿತು. 10.2 ಓವರಲ್ಲಿ 64ಕ್ಕೆ 4 ವಿಕೆಟ್‌ ಕಳೆದುಕೊಂಡಿದ್ದ ತಂಡ, 14 ಓವರಲ್ಲಿ 87 ರನ್‌ ಗಳಿಸಿತ್ತು. ಆದರೆ ಹ್ಯಾರಿ ಬ್ರೂಕ್‌(37 ಎಸೆತಗಳಲ್ಲಿ 53) ಹಾಗೂ ಲಿವಿಂಗ್‌ಸ್ಟೋನ್‌(17 ಎಸೆತಗಳಲ್ಲಿ 33) ಬಳಿಕ 3 ಓವರಲ್ಲಿ 52 ರನ್‌ ಸಿಡಿಸಿದರು. ಕೊನೆ 3 ಓವರಲ್ಲಿ 25 ರನ್‌ ಬೇಕಿದ್ದಾಗ ರಬಾಡ, ಯಾನ್ಸನ್‌ ಹಾಗೂ ನೋಕಿಯಾ ನಿಖರ ದಾಳಿ ಸಂಘಟಿಸಿ ಇಂಗ್ಲೆಂಡನ್ನು ಕಟ್ಟಿಹಾಕಿದರು.

ಸ್ಕೋರ್‌: 
ದ.ಆಫ್ರಿಕಾ 20 ಓವರಲ್ಲಿ 163/6 (ಡಿ ಕಾಕ್‌ 65, ಮಿಲ್ಲರ್‌ 43, ಆರ್ಚರ್‌ 3-40),
ಇಂಗ್ಲೆಂಡ್‌ 20 ಓವರಲ್ಲಿ 156/6 (ಬ್ರೂಕ್‌ 53, ಲಿವಿಂಗ್‌ಸ್ಟೋನ್‌ 33, ಕೇಶವ್‌ 2-25) 
ಪಂದ್ಯಶ್ರೇಷ್ಠ: ಡಿ ಕಾಕ್‌

ಆಸ್ಟ್ರೇಲಿಯಾಗೆ ತಲೆಬಾಗಿದ ಬಾಂಗ್ಲಾದೇಶ

ನಾರ್ತ್ ಸೌಂಡ್ (ಆ್ಯಂಟಿಗಾ): 2024ರ ಟಿ20 ವಿಶ್ವಕಪ್‌ನ ಮೊದಲ ಹ್ಯಾಟ್ರಿಕ್‌ಗೆ ಸಾಕ್ಷಿಯಾದ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ನಡುವಿನ ಮಳೆ ಬಾಧಿತ ಸೂಪರ್-8 ಹಣಾಹಣಿಯಲ್ಲಿ ಮಾಜಿ ಚಾಂಪಿಯನ್ ಆಸೀಸ್ 28 ರನ್ ಜಯಭೇರಿ ಬಾರಿಸಿದೆ. ಇದರೊಂದಿಗೆ ಆಸ್ಟ್ರೇಲಿಯಾ ಸೂಪರ್ -8ರ ಗುಂಪು 2ರಲ್ಲಿ ಅಂಕ ಖಾತೆ ತೆರೆದು, ಅಗ್ರಸ್ಥಾನ ಪಡೆದುಕೊಂಡಿತು. 

ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 8 ವಿಕೆಟ್‌ಗೆ 140 ರನ್ ಕಲೆಹಾಕಿತು. ರನ್ ಖಾತೆ ತೆರೆಯುವ ಮೊದಲೇ ತಂಜೀದ್ ಹಸನ್ (00) ವಿಕೆಟ್ ಕಳೆದುಕೊಂಡ ಬಾಂಗ್ಲಾಕ್ಕೆ ನಾಯಕ ನಜ್ರುಲ್ ಹೊಸೈನ್ (41) ಹಾಗೂ ತೌಹೀದ್‌ ಹೃದೊಯ್ (28 ಎಸೆತಗಳಲ್ಲಿ 40) ಆಸರೆಯಾದರು. ಉಳಿದಂತೆ ಲಿಟನ್ ದಾಸ್ (16), ತಸ್ಟೀನ್ ಅಹ್ಮದ್ (ಔಟಾಗದೆ 13) ಎರಡಂಕಿ ಮೊತ್ತ ಕಲೆಹಾಕಿ ತಂಡವನ್ನು ಕಾಪಾಡಿದರು. 18ನೇ ಓವರ್‌ನ ಕೊನೆ ಎಸೆತಗಳಲ್ಲಿ ಮಹ್ಮದುಲ್ಲಾ ಮಹದಿ ಹಸನ್, 20ನೇ ಓವರ್‌ನ ಮೊದಲ ಎಸೆತದಲ್ಲಿ ತೌಹೀದ್ ವಿಕೆಟ್ ಪಡೆಯುವ ಮೂಲಕ
ಕಮಿನ್ಸ್ ಹ್ಯಾಟ್ರಿಕ್ ಪೂರ್ಣಗೊಳಿಸಿದರು.

ಮಳೆ ಕಾಟ: ಆಸೀಸ್ ಸುಲಭ ಗುರಿ ಬೆನ್ನತ್ತುವ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. 6.2 ಓವರಲ್ಲಿ 64 ರನ್ ಗಳಿಸಿದ್ದಾಗ ಮಳೆಯಿಂದ ಪಂದ್ಯ ಸ್ಥಗಿತಗೊಂಡಿತು. ಮತ್ತೆ ಪಂದ್ಯ ಶುರುವಾದರೂ 11.2 ಓವರ್‌ಗಳಲ್ಲಿ 2 ವಿಕೆಟ್‌ಗೆ 100 ರನ್ ಗಳಿಸಿದ್ದಾಗ ಮತ್ತೆ ಮಳೆರಾಯನ ಎದುರಾಯಿತು. ಆ ಬಳಿಕ ಮಳೆ ನಿಲ್ಲಲಿಲ್ಲ. ಹೀಗಾಗಿ ಡಕ್ವರ್ತ್ ಲೂಯಿಸ್ ನಿಯಮದನ್ವಯ 28 ರನ್‌ಗಳಿದಂದ ಮುಂದಿದ್ದ ಆಸೀಸ್ ಗೆಲುವು ತನ್ನದಾಗಿಸಿಕೊಂಡಿತು. ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ 35 ಎಸೆತಗಳಲ್ಲಿ ಔಟಾಗದೆ 53, ಟ್ರಾವಿಸ್ ಹೆಡ್ 31 ರನ್ ಕೊಡುಗೆ ನೀಡಿದರು.

ಸ್ಕೋರ್: ಬಾಂಗ್ಲಾದೇಶ 20 ಓವರಲ್ಲಿ 140/8 (ನಮ್ಮುಲ್ 41, ತಹೀದ್ 40, ಕಮಿನ್ಸ್ 3-29), ಆಸ್ಟ್ರೇಲಿಯಾ 11.2 ಓವರಲ್ಲಿ 100/2 (ವಾರ್ನರ್ 53x, ಹೆಡ್ 31, ರಿಶಾದ್ 2-23) 

ಪಂದ್ಯಶ್ರೇಷ್ಠ: ಪ್ಯಾಟ್ ಕಮಿನ್ಸ್

click me!