ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿ
ಅಭ್ಯಾಸ ಪಂದ್ಯದಲ್ಲಿ ಸ್ಪೋಟಕ ಆರಂಭ ಪಡೆದ ಟೀಂ ಇಂಡಿಯಾ
27 ಎಸೆತಗಳಲ್ಲಿ ಸ್ಪೋಟಕ ಅರ್ಧಶತಕ ಚಚ್ಚಿದ ಕೆ ಎಲ್ ರಾಹುಲ್
ಬ್ರಿಸ್ಬೇನ್(ಅ.17): ಐಸಿಸಿ ಟಿ20 ವಿಶ್ವಕಪ್‌ಗೆ ಮಾಜಿ ಚಾಂಪಿಯನ್ ಭಾರತ ತಂಡ ಅಂತಿಮ ಸುತ್ತಿನ ಸಿದ್ಧತೆ ಆರಂಭಿಸಿದ್ದು, ಸೋಮವಾರ ಮೊದಲ ಅಭ್ಯಾಸ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಪ್ರೇಲಿಯಾ ವಿರುದ್ಧ ಸೆಣಸಾಟ ಆರಂಭಿಸಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದು, ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಸ್ಪೋಟಕ ಆರಂಭ ಪಡೆದಿದೆ. ಟೀಂ ಇಂಡಿಯಾ ಮೊದಲ 7 ಓವರ್ ಅಂತ್ಯದ ವೇಳೆಗೆ ವಿಕೆಟ್ ನಷ್ಟವಿಲ್ಲದೇ 75 ರನ್ ಗಳಿಸಿದೆ. ಕನ್ನಡಿಗ ಕೆ ಎಲ್ ರಾಹುಲ್ ಕೇವಲ 27 ಎಸೆತಗಳಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ದಾರೆ.ಮತ್ತೊಂದು ತುದಿಯಲ್ಲಿ ನಾಯಕ ರೋಹಿತ್ ಶರ್ಮಾ 14 ರನ್ ಬಾರಿಸಿದ್ದಾರೆ.
ಕಳೆದ ಆವೃತ್ತಿಯಲ್ಲಿ ಪ್ರಧಾನ ಸುತ್ತಿನಿಂದಲೇ ಹೊರಬಿದ್ದಿದ್ದ ಭಾರತ ಈ ಬಾರಿ ಟೂರ್ನಿಗೂ ಮುನ್ನ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಗುರಿ ಹೊಂದಿದ್ದು, 2ನೇ ಅಭ್ಯಾಸ ಪಂದ್ಯವನ್ನು ಬುಧವಾರ ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಆಸ್ಟ್ರೇಲಿಯಾ ಎದುರಿನ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡವು 15 ಆಟಗಾರರನ್ನು ಒಳಗೊಂಡಿದ್ದು, ಎಲ್ಲಾ ಆಟಗಾರರು ಅಭ್ಯಾಸ ಮಾಡಲು ಸಜ್ಜಾಗಿದ್ದಾರೆ.
undefined
T20 World Cup: ಮೂರನೇ ವೇಗಿಯ ಸ್ಥಾನಕ್ಕೆ ಇಬ್ಬರು ಬೌಲರ್‌ಗಳ ನಡುವೆ ಪೈಪೋಟಿಯಿದೆ: ರಾಬಿನ್ ಉತ್ತಪ್ಪ
ಈಗಾಗಲೇ ಟೂರ್ನಿಯ ಪೂರ್ವಭಾವಿ ತಯಾರಿಯ ಭಾಗವಾಗಿ ಟೀಂ ಇಂಡಿಯಾ, ಪಶ್ಚಿಮ ಆಸ್ಪ್ರೇಲಿಯಾ ವಿರುದ್ಧ 2 ಅಭ್ಯಾಸ ಪಂದ್ಯಗಳನ್ನಾಡಿದ್ದು, 1 ಪಂದ್ಯ ಗೆದ್ದು ಮತ್ತೊಂದಲ್ಲಿ ಸೋಲು ಕಂಡಿದೆ. ಮತ್ತೊಂದೆಡೆ ಆತಿಥೇಯ ಆಸ್ಪ್ರೇಲಿಯಾ, ಇಂಗ್ಲೆಂಡ್ ವಿರುದ್ಧ ತವರಿನ ಟಿ20 ಸರಣಿಯ ಸೋಲಿನ ಆಘಾತದಲ್ಲಿದೆ. ಹೀಗಾಗಿ ಉಭಯ ತಂಡಗಳೂ ತುಂಬು ವಿಶ್ವಾಸದೊಂದಿಗೆ ಟೂರ್ನಿಗೆ ಕಾಲಿಡಲು ಎದುರು ನೋಡುತ್ತಿವೆ. ಭಾರತೀಯ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದ್ದರೂ ಮೊನಚು ಕಳೆದುಕೊಂಡಿರುವ ಬೌಲಿಂಗ್ ಪಡೆ ತನ್ನ ಸಾಮರ್ಥ್ಯ ಸಾಬೀತುಪಡಿಸಬೇಕಿದೆ. ಬುಮ್ರಾ ಬದಲು ತಂಡ ಸೇರಿಕೊಂಡಿರುವ ಮೊಹಮದ್ ಶಮಿ ಮೇಲೆ ಎಲ್ಲರ ಕಣ್ಣಿದೆ.
ಅಭ್ಯಾಸ ಪಂದ್ಯಕ್ಕೆ ತಂಡಗಳು ಹೀಗಿವೆ ನೋಡಿ
ಭಾರತ: ರೋಹಿತ್ ಶರ್ಮಾ(ನಾಯಕ), ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆರ್ಶದೀಪ್ ಸಿಂಗ್.
ಆಸ್ಟ್ರೇಲಿಯಾ: ಆರೋನ್ ಫಿಂಚ್(ನಾಯಕ), ಮಿಚೆಲ್ ಮಾರ್ಶ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋನಿಸ್, ಟಿಮ್ ಡೇವಿಡ್, ಜೋಶ್ ಇಂಗ್ಲಿಶ್(ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಆಸ್ಟನ್ ಏಗರ್, ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್‌ಸನ್.
ನೆಟ್ಸ್‌ನಲ್ಲಿ ರೋಹಿತ್‌ಗೆ 11ರ ದ್ರುಶಿಲ್ ಬೌಲಿಂಗ್!
ಪತ್‌ರ್: ಟಿ20 ವಿಶ್ವಕಪ್‌ಗೆ ಅಭ್ಯಾಸ ನಿರತರಾಗಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ 11ರ ಹರೆಯದ ದ್ರುಶಿಲ್ ಚೌಹಾಣ್ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿ ಗಮನ ಸೆಳೆದಿದ್ದಾನೆ. ಭಾನುವಾರ ಬೆಳಗ್ಗೆ ಕ್ರೀಡಾಂಗಣದಲ್ಲಿ ಸುಮಾರು 100ರಷ್ಟುಬಾಲಕರು ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರು.
ಈ ವೇಳೆ ಅತ್ಯುತ್ತಮವಾಗಿ ಬೌಲ್ ಮಾಡುತ್ತಿದ್ದ ಎಡಗೈ ವೇಗಿ ದ್ರುಶಿಲ್‌ರನ್ನು ರೋಹಿತ್ ಗಮನಿಸಿದ್ದು, ಬಳಿಕ ನೆಟ್ಸ್‌ಗೆ ಆಗಮಿಸಿ ತಮಗೆ ಬೌಲ್ ಮಾಡುವಂತೆ ಕೇಳಿಕೊಂಡರು. ಬಳಿಕ ಆಟಗಾರರ ಡ್ರೆಸ್ಸಿಂಗ್ ಕೋಣೆಗೂ ಕರೆದೊಯ್ದ ರೋಹಿತ್, ಕೋಚ್‌ಗಳು ಹಾಗೂ ಸಿಬ್ಬಂದಿಯನ್ನು ಪರಿಚಯಿಸಿದ್ದಾರೆ. ಇದರ ಫೋಟೋ, ವಿಡಿಯೋ ವೈರಲ್ ಆಗಿದೆ.