T20 World Cup 2021: ವಾರ್ನರ್ ಅಬ್ಬರಕ್ಕೆ ಸೋಲಿಗೆ ಶರಣಾದ ಶ್ರೀಲಂಕಾ, 2ನೇ ಸ್ಥಾನಕ್ಕೆ ಆಸ್ಟ್ರೇಲಿಯಾ!

By Suvarna News  |  First Published Oct 28, 2021, 10:51 PM IST
  • ಆಕರ್ಷಕ ಹಾಫ್ ಸೆಂಚುರಿ ಸಿಡಿಸಿದ ಡೇವಿಡ್ ವಾರ್ನರ್
  • ವಾರ್ನರ್ ಅಬ್ಬರದಿಂದ ಆಸ್ಟ್ರೇಲಿಯಾಗೆ ವಿಕೆಟ್ ಗೆಲುವು
  • T20 World Cup 2021 ಟೂರ್ನಿಯ ರೋಚಕ ಹೋರಾಟ

ದುಬೈ(ಅ.28): ಡೇವಿಡ್ ವಾರ್ನರ್(David Warner) ಸ್ಫೋಟಕ ಬ್ಯಾಟಿಂಗ್ ಹಾಗೂ ಆಸೀಸ್(Australia) ತಂಡದ ಮಿಂಚಿನ ಬೌಲಿಂಗ್ ದಾಳಿಯಿಂದ ಶ್ರೀಲಂಕಾ(Srilanka) ವಿರುದ್ಧ 7 ವಿಕೆಟ್ ಗೆಲುುವು ಸಾಧಿಸಿದೆ. ಈ ಮೂಲಕ T20 World Cup 2021 ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದೆ. ಇಷ್ಟೇ ಅಲ್ಲ ಅಂಕಪಟ್ಟಿಯಲ್ಲಿ(Points Table) 3ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಜಿಗಿದಿದೆ. ಇತ್ತ ಗೆಲುವಿನ ವಿಶ್ವಾಸದಲ್ಲಿದ್ದ ಶ್ರೀಲಂಕಾ ನಿರಾಸೆ ಅನುಭವಿಸಿದೆ.

T20 World Cup: ಟೀಂ ಇಂಡಿಯಾ ವಿಶ್ವಕಪ್‌ ಗೆಲ್ಲಲಿದೆ ಎಂದು ಭವಿಷ್ಯ ನುಡಿದ ಸೆಹ್ವಾಗ್

Latest Videos

undefined

ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಆರಂಭದಲ್ಲಿ ಆಸ್ಟ್ರೇಲಿಯಾ ದಾಳಿಗೆ ತತ್ತರಿಸಿತ್ತು. ಆದರೆ ಕುಸಾಲ್ ಪರೇರ ಹಾಗೂ ಚಾರತ್ ಅಸಲಂಕಾ ಜೊತೆಯಾಟದಿಂದ ಶ್ರೀಲಂಕಾ ಚೇತರಿಸಿಕೊಂಡಿತು. ಪರೇರಾ 35 ಹಾಗೂ ಅಸಲಂಕಾ 35 ರನ್ ಕಾಣಿಕೆ ನೀಡಿದರು. ಅಂತಿಮ ಹಂತದಲ್ಲಿ ಭಾನುಕಾ ರಾಜಪಕ್ಸೆ ಅಜೇಯ 33 ರನ್ ಸಿಡಿಸಿದರು. ನಾಯಕ ದಸೂನ್ ಶನಕ 12 ರನ್ ಸಿಡಿಸಿ ಔಟಾದರು. ಇದರೊಂದಿಗೆ ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ 154 ರನ್ ಸಿಡಿಸಿತು.

155 ರನ್ ಟಾರ್ಗೆಟ್(Target) ಪಡೆದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆಯಿತು. ಡೇವಿಡ್ ವಾರ್ನರ್ ಹಾಗೂ ನಾಯಕ ಆ್ಯರೋನ್ ಫಿಂಚ್(Aaron Finch) ಜೊತೆಯಾಟ ಶ್ರೀಲಂಕಾ ತಂಡವನ್ನು ಮತ್ತಷ್ಟು ಆತಂಕದಲ್ಲಿ ದೂಡಿತು. ಮೊದಲ ವಿಕೆಟ್‌ಗೆ ಈ ಜೋಡಿ 70 ರನ್ ಸಿಡಿಸಿತು. ಫಿಂಚ್ 23 ಎಸೆತದಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 37 ರನ್ ಸಿಡಿಸಿ ಔಟಾದರು. 

Black Lives Matter: ಮಂಡಿಯೂರದೆ ತಪ್ಪು ಮಾಡಿದೆ ಎಂದು ಕ್ಷಮೆಯಾಚಿಸಿದ ಡಿ ಕಾಕ್..

ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನದ ಮೂಲಕ ಹೈದರಾಬಾದ್ ತಂಡದಿಂದ ಹೊರಗುಳಿದಿದ್ದ ಡೇವಿಡ್ ವಾರ್ನರ್ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಕಮ್‌ಬ್ಯಾಕ್ ಮಾಡಿದರು. ಆದರೆ ಗ್ಲೆನ್ ಮ್ಯಾಕ್ಸ್‌ವೆಲ್ ನಿರಾಸೆ ಅನುಭವಿಸಿದರು. ಕೇವಲ 5 ರನ್ ಸಿಡಿಸಿ ಮ್ಯಾಕ್ಸ್‌ವೆಲ್ ನಿರ್ಗಮಿಸಿದರು.

ದಿಟ್ಟ ಹೋರಾಟ ನೀಡಿದ ವಾರ್ನರ್ ಹಾಫ್ ಸೆಂಚುರಿ ಸಿಡಿಸಿದರು. ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಜೊತೆಯಾಟದಿಂದ ಆಸ್ಟ್ರೇಲಿಯಾ ಗೆಲುವಿನ ಹಾದಿಯಲ್ಲಿ ಮುನ್ನಡೆಯಿತು.  ಅಂತಿಮ 30 ಎಸೆತದಲ್ಲಿ ಅಸ್ಟ್ರೇಲಿಯಾ ಗೆಲುವಿಗೆ 25 ರನ್ ಅವಶ್ಯಕತೆ ಇತ್ತು. ಗೆಲುವಿನ ಸನಿಹದಲ್ಲಿ ಡೇವಿಡ್ ವಾರ್ನರ್ ವಿಕೆಟ್ ಕೈಚೆಲ್ಲಿದರು. ವಾರ್ನರ್ 47 ಎಸೆತದಲ್ಲಿ 10 ಬೌಂಡರಿ ಮೂಲಕ 65 ರನ್ ಸಿಡಿಸಿದರು. 

ಸ್ಟೀವ್ ಸ್ಮಿತ್ ಹಾಗೂ ಮಾರ್ಕಸ್ ಸ್ಟೊಯ್ನಿಸ್ ಜೊತೆಯಾಟ ಆಸ್ಟ್ರೇಲಿಯಾ ತಂಡದ ಗೆಲುವು ಖಚಿತ ಪಡಿಸಿತು. ಸ್ಮಿತ್ ಅಜೇಯ 28 ರನ್ ಸಿಡಿಸಿದರೆ, ಸ್ಟೊಯ್ನಿಸ್ ಅಜೇಯ 16 ರನ್ ಸಿಡಿಸಿದರು. ಈ ಮೂಲಕ 17 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಆಸ್ಟ್ರೇಲಿಯಾ ಗುರಿ ತಲುಪಿತು. 7 ವಿಕೆಟ್ ಭರ್ಜರಿ ಗೆಲುವು ಕಂಡ ಆಸ್ಟ್ರೇಲಿಯಾ ಸಂಭ್ರಮಿಸಿತು. 

ಅಂಕಪಟ್ಟಿ:
ಶ್ರೀಲಂಕಾ ವಿರುದ್ಧದ ಗೆಲುವಿನ ಬಳಿಕ ಆಸ್ಟ್ರೇಲಿಯಾ ಮೊದಲ ಗುಂಪಿನ ಅಂಕಪಟ್ಟಿಯಲ್ಲಿ 3ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್ ಕೂಡ 2 ಪಂದ್ಯದಿಂದ 2 ಗೆಲುವು ಸಾಧಿಸಿ 4 ಅಂಕ ಸಂಪಾದಿಸಿದೆ. ಆದರೆ ಆಸ್ಟ್ರೇಲಿಯಾಗಿಂತ ಉತ್ತಮ ರನ್‌ರೇಟ್ ಹೊಂದಿರುವ ಕಾರಣ ಮೊದಲ ಸ್ಥಾನದಲ್ಲಿದೆ. ಇತ್ತ ಶ್ರೀಲಂಕಾ 2ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಜಾರಿದೆ.

ಎರಡನೇ ಗುಂಪಿನ ಅಂಕಪಟ್ಟಿಯಲ್ಲಿ ಪಾಕಿಸ್ತಾನ 2 ಪಂದ್ಯ ಗೆದ್ದು ಮೊದಲ ಸ್ಥಾನದಲ್ಲಿದೆ. ಇನ್ನು ತಲಾ ಒಂದೊಂದು ಪಂದ್ಯ ಗೆದ್ದಿರುವ ಆಫ್ಘಾನಿಸ್ತಾನ ಹಾಗೂ ನಮಿಬಿಯಾ ಅಂಕಪಟ್ಟಿಯಲ್ಲಿ 2 ಮತ್ತು 3ನೇ ಸ್ಥಾನದಲ್ಲಿದೆ. ಒಂದೊಂದು ಸೋಲು ಕಂಡಿರುವ ನ್ಯೂಜಿಲೆಂಡ್ ಹಾಗೂ ಭಾರತ 4 ಮತ್ತು 5ನೇ ಸ್ಥಾನದಲ್ಲಿದೆ. ಇತ್ತ 2 ಸೋಲು ಅನುಭವಿಸಿರುವ ಸ್ಕಾಟ್‌ಲೆಂಡ್ ಅಂತಿಮ ಸ್ಥಾನದಲ್ಲಿದೆ.

click me!