ಸಿಡ್ನಿ ಟೆಸ್ಟ್‌; ಸಿರಾಜ್, ಪ್ರಸಿದ್ಧ್ ಮಾರಕ ದಾಳಿ, ಟೀಂ ಇಂಡಿಯಾಗೆ ಅಲ್ಪ ಮುನ್ನಡೆ!

By Naveen Kodase  |  First Published Jan 4, 2025, 9:49 AM IST

ಸಿಡ್ನಿ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 181 ರನ್‌ಗಳಿಗೆ ಆಲೌಟ್. ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಮಾರಕ ದಾಳಿಗೆ ಆಸೀಸ್ ತತ್ತರಿಸಿತು. ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 4 ರನ್‌ಗಳ ಮುನ್ನಡೆ ಸಾಧಿಸಿದೆ.


ಸಿಡ್ನಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಸಿಡ್ನಿ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡವು ಸಾಧಾರಣ ಮೊತ್ತಕ್ಕೆ ಸರ್ವಪತನ ಕಂಡಿದೆ. ಮೊಹಮ್ಮದ್ ಸಿರಾಜ್, ಕನ್ನಡಿಗ ವೇಗಿ ಪ್ರಸಿದ್ಧ್ ಕೃಷ್ಣ ಮಾರಕ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡವು 181 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 4 ರನ್‌ಗಳ ಅಮೂಲ್ಯ ಮುನ್ನಡೆ ಪಡೆದಿದೆ.

ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಕೊನೆಯ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲೇ ಬುಮ್ರಾ ಹಾಗೂ ಸಿರಾಜ್ ಶಾಕ್ ನೀಡಿದರು. ಲಬುಶೇನ್ 2 ರನ್ ಗಳಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರೆ, ಸ್ಯಾಮ್ ಕಾನ್‌ಸ್ಟಾಸ್‌ಗೆ ಸಿರಾಜ್ ಪೆವಿಲಿಯನ್ ಹಾದಿ ತೋರಿಸಿದರು. ಕಾನ್‌ಸ್ಟಾಸ್ 23 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಅದೇ ಬುಮ್ರಾಗೆ ಟ್ರ್ಯಾವಿಸ್ ಹೆಡ್ ಬಲಿ ಪಡೆಯುವಲ್ಲಿ ಸಿರಾಜ್ ಯಶಸ್ವಿಯಾದರು.

Tap to resize

Latest Videos

ಇನ್ನು ಮಧ್ಯಮ ಕ್ರಮಾಂಕದಲ್ಲಿ ಸ್ಟೀವ್ ಸ್ಮಿತ್ ಹಾಗೂ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ವೆಬ್‌ಸ್ಟರ್ ಆಸರೆಯಾದರು. ಆದರೆ ಲಂಚ್ ಬ್ರೇಕ್‌ಗೂ ಮುನ್ನ ಸ್ಮಿತ್(33) ಅವರನ್ನು ಬಲಿ ಪಡೆಯುವಲ್ಲಿ ಕನ್ನಡಿಗ ವೇಗಿ ಪ್ರಸಿದ್ಧ್ ಕೃಷ್ಣ ಯಶಸ್ವಿಯಾದರು. ಮತ್ತೊಂದು ತುದಿಯಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ ವೆಬ್‌ಸ್ಟರ್ 57 ರನ್ ಸಿಡಿಸುವ ಮೂಲಕ ಪಾದಾರ್ಪಣೆ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅಲೆಕ್ಸ್ ಕ್ಯಾರಿ 21 ರನ್ ಸಿಡಿಸಿ ಪ್ರಸಿದ್ದ್‌ಗೆ ಮೂರನೇ ಬಲಿಯಾದರು.

ಟೀಂ ಇಂಡಿಯಾ ಪರ ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ತಲಾ 3 ವಿಕೆಟ್ ಪಡೆದರೆ, ನಿತೀಶ್ ರೆಡ್ಡಿ ಹಾಗೂ ಜಸ್ಪ್ರೀತ್ ಬುಮ್ರಾ ತಲಾ 2 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು. 

click me!