ಸೌತ್ ಆಫ್ರಿಕಾ ವಿರುದ್ಧ ಸರಣಿಗೆ ಭಾರತ ತಂಡ ಪ್ರಕಟ; ಹಾರ್ದಿಕ್ ಕಮ್‌ಬ್ಯಾಕ್!

By Suvarna NewsFirst Published Mar 8, 2020, 4:52 PM IST
Highlights

ಕನ್ನಡಿಗ ಸುನಿಲ್ ಜೋಶಿ ನೇತೃತ್ವದ ನೂತನ ಆಯ್ಕೆ ಸಮಿತಿ ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ತಂಡ ಪ್ರಕಟಿಸಿದೆ. ತಂಡದಲ್ಲಿ ಇಬ್ಬರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. 15 ಸದಸ್ಯರ ತಂಡ ಇಲ್ಲಿದೆ.
 

"

ಮುಂಬೈ(ಮಾ.08): ಸೌತ್ ಆಫ್ರಿಕಾ ವಿರುದ್ದದ 3 ಪಂದ್ಯಗಳ ತವರಿನ ಏಕದಿನ ಸರಣಿಗೆ ಟೀಂ ಇಂಡಿಯಾ ಆಯ್ಕೆ ಸಮಿತಿ 15 ಸದಸ್ಯರ ತಂಡ ಸೆಲೆಕ್ಟ್ ಮಾಡಿದೆ. ವಿಶೇಷ ಅಂದರೆ ಕನ್ನಡಿಗ ಸುನಿಲ್ ಜೋಶಿ ಆಯ್ಕೆ ಸಮಿತಿ ಮುಖ್ಯಸ್ಥನಾಗಿ ನೇಮಕವಾದ ಬಳಿಕ ಆಯ್ಕೆ ಮಾಡಿದ ಮೊದಲ ತಂಡವಿದು. ಈ ತಂಡದಲ್ಲಿ ಇಬ್ಬರು ಕನ್ನಡಿಗರು ಸ್ಥಾನ ಪಡೆದಿದ್ದಾರೆ.

ಸುನಿಲ್ ಜೋಶಿ ನೇತೃತ್ವದ ಆಯ್ಕೆ ಸಮಿತಿ ಸೌತ್ ಆಫ್ರಿಕಾ ಸರಣಿಗೆ ಬಲಿಷ್ಠ ತಂಡ ಪ್ರಕಟಿಸಿದೆ. ಕೆಎಲ್ ರಾಹುಲ್ ಹಾಗೂ ಮನೀಶ್ ಪಾಂಡೆ ತಂಡಕ್ಕೆ ಆಯ್ಕೆಯಾಗಿರುವ ಕನ್ನಡಿಗರು. ರೋಹಿತ್ ಶರ್ಮಾಗೆ ಹೆಚ್ಚಿನ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಸೌತ್ ಆಫ್ರಿಕಾ ಸರಣಿಯಿಂದ ದೂರ ಉಳಿದಿದ್ದಾರೆ. 

ಇನ್ನು ಇಂಜುರಿಯಿಂದ ಸುದೀರ್ಘ ದಿನಗಳಿಂದ ಟೀಂ ಇಂಡಿಯಾದಿಂದ ದೂರವಿದ್ದ ಹಾರ್ದಿಕ್ ಪಾಂಡ್ಯ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಡಿವೈ ಪಾಟೀಲ್ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಪಾಂಡ್ಯಗೆ ಜೋಶಿ ಸಮಿತಿ ಸ್ಥಾನ ನೀಡಿದೆ.

ಇಂಜುರಿಯಿಂದ ಚೇತರಿಸಿಕೊಂಡ ಸ್ವಿಂಗ್ ವೇಗಿ ಭುವನೇಶ್ವರ್ ಕುಮಾರ್ ಕೂಡ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇತ್ತ ವೇಗಿ ಶಮಿಗೆ ವಿಶ್ರಾಂತಿ ನೀಡಲಾಗಿದೆ. ಜೊತೆಗೆ ಯುವ ಕ್ರಿಕೆಟಿಗ ಶುಭ್‌ಮಾನ್ ಗಿಲ್‌ಗೆ ಅವಕಾಶ ನೀಡಲಾಗಿದೆ. ಸ್ಪಿನ್ ಜೋಡಿಗಳಾದ ಯಜುವೇಂದ್ರ ಚಹಾಲ್ ಹಾಗೂ ಕುಲ್ದೀಪ್ ಯಾದವ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 

ಸೌತ್ ಆಫ್ರಿಕಾ ಏಕದಿನ ಸರಣಿಗೆ ಭಾರತ ತಂಡ;
ಶಿಖರ್ ಧವನ್, ಪೃಥ್ವಿ ಶಾ, ವಿರಾಟ್ ಕೊಹ್ಲಿ(ನಾಯಕ), ಕೆಎಲ್ ರಾಹುಲ್, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಹಾಲ್, ಜಸ್ಪ್ರೀತ್ ಬುಮ್ರಾ, ನವದೀಪ್ ಸೈನಿ, ಕುಲ್ದೀಪ್ ಯಾದವ್, ಶುಭ್‌ಮಾನ್ ಗಿಲ್

ಮಾರ್ಚ್ 12 ರಿಂದ 18 ವರೆಗೆ ಭಾರತ ಹಾಗೂ ಸೌತ್ ಆಫ್ರಿಕಾ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಮೊದಲ ಪಂದ್ಯ ದರ್ಮಶಾಲಾದಲ್ಲಿ ನಡೆದರೆ, 2ನೇ ಪಂದ್ಯ ಮಾರ್ಚ್ 15 ರಂದು ಲಕ್ನೋದಲ್ಲಿ ನಡೆಯಲಿದೆ. ಅಂತಿಮ ಪಂದ್ಯಕ್ಕೆ ಕೋಲ್ಕತಾ ಆತಿಥ್ಯವಹಿಸಿದೆ.

ಮಾರ್ಚ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!