'ನಿನಗ್ಯಾವ ಉಚಿತ ಭಾಗ್ಯವಿಲ್ಲ': 1983ರ ವಿಶ್ವಕಪ್ ಫೈನಲ್‌ನ ಸ್ವಾರಸ್ಯಕರ ಘಟನೆ ಬಿಚ್ಚಿಟ್ಟ ಸನ್ನಿ..!

Published : Jun 25, 2023, 12:43 PM IST
'ನಿನಗ್ಯಾವ ಉಚಿತ ಭಾಗ್ಯವಿಲ್ಲ': 1983ರ ವಿಶ್ವಕಪ್ ಫೈನಲ್‌ನ ಸ್ವಾರಸ್ಯಕರ ಘಟನೆ ಬಿಚ್ಚಿಟ್ಟ ಸನ್ನಿ..!

ಸಾರಾಂಶ

* 1983ರ ಏಕದಿನ ವಿಶ್ವಕಪ್ ಗೆಲುವಿಗೀಗ 40ರ ಹರೆಯ * 1983ರ ಏಕದಿನ ವಿಶ್ವಕಪ್ ಫೈನಲ್‌ ಸ್ವಾರಸ್ಯಕರ ಘಟನೆ ಮೆಲುಕು ಹಾಕಿದ ಸುನಿಲ್ ಗವಾಸ್ಕರ್ * ಲಾರ್ಡ್ಸ್‌ ಮೈದಾನದಲ್ಲಿ ಬಲಾಢ್ಯ ವೆಸ್ಟ್ ಇಂಡೀಸ್‌ಗೆ ಸೋಲುಣಿಸಿದ್ದ ಕಪಿಲ್ ದೇವ್ ಪಡೆ

ನವದೆಹಲಿ(ಜೂ.25): 1983 ಜೂನ್‌ 25 ಭಾರತೀಯ ಕ್ರಿಕೆಟ್‌ ಇತಿಹಾಸವನ್ನು ಸುವರ್ಣಾಕ್ಷರದಲ್ಲಿ ಬರೆದಿಟ್ಟ ದಿನ. ಸತತ ಎರಡು ಏಕದಿನ ವಿಶ್ವಕಪ್ ಗೆದ್ದು, ಹ್ಯಾಟ್ರಿಕ್ ಕಪ್ ಗೆಲ್ಲಬೇಕು ಎಂದು ಕಣಕ್ಕಿಳಿದಿದ್ದ ಬಲಾಢ್ಯ ಕೆರಿಬಿಯನ್ ಪಡೆಗೆ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಶಾಕ್ ಕೊಟ್ಟು ಚಾಂಪಿಯನ್‌ ಆದ ಸುವರ್ಣ ಸಂದರ್ಭಕ್ಕೆ ಇದೀಗ 40 ವರ್ಷ ಭರ್ತಿ. ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್‌ ಇಂಡೀಸ್ ಎದುರು ಕಪಿಲ್ ಡೆವಿಲ್ಸ್ ಪಡೆ 43 ರನ್‌ಗಳ ಸ್ಮರಣೀಯ ಗೆಲುವು ದಾಖಲಿಸಿ ಬೀಗಿತ್ತು. ಇಂದು ಅದರ 40ನೇ ವಾರ್ಷಿಕೋತ್ಸವನ್ನು ಆಚರಿಸಲಾಗುತ್ತಿದ್ದು, ದಿಗ್ಗಜ ಕ್ರಿಕೆಟಿಗ ಹಾಗೂ ಚೊಚ್ಚಲ ವಿಶ್ವಕಪ್ ವಿಜೇತ ತಂಡದ ಸದಸ್ಯ ಸುನಿಲ್ ಗವಾಸ್ಕರ್, ವಿಂಡೀಸ್‌ ಎದುರಿನ ಫೈನಲ್‌ ಪಂದ್ಯದ ಕುರಿತಾದ ಸ್ವಾರಸ್ಯಕರ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ. 

ಜೂನ್‌ 24ರ ಶನಿವಾರ 'ಅದಾನಿ ಡೇ' ಆಚರಣೆಯ ಭಾಗವಾಗಿ ಅದಾನಿ ಗ್ರೂಪ್‌, ಚೊಚ್ಚಲ ವಿಶ್ವಕಪ್ ವಿಜೇತ ತಂಡದ ಸದಸ್ಯರನ್ನು ಒಟ್ಟಿಗೆ ಸೇರಿಸಿ 'ಜೀತೆಂಗೇ ಹಮ್‌' ಎನ್ನುವ ಅಭಿಯಾನ ಆರಂಭಿಸಿತು. ಈ ಕಾರ್ಯಕ್ರಮದ ವೇಳೆ ಸುನಿಲ್ ಗವಾಸ್ಕರ್, ವೆಸ್ಟ್ ಇಂಡೀಸ್ ತಂಡದ ಮಾರಕ ವೇಗಿಯಾಗಿದ್ದ ಹಾಗೂ ಕೌಂಟಿ ಕ್ರಿಕೆಟ್‌ನಲ್ಲಿ ಸೋಮರ್‌ಸೆಟ್‌ ಪರ ಸಹ ಆಟಗಾರನಾಗಿದ್ದ ಜೋಯೆಲ್ ಗಾರ್ನರ್‌ ಅವರ ಜತೆಗಿನ ಸ್ವಾರಸ್ಯಕರ ಘಟನೆಯೊಂದನ್ನು ಸನ್ನಿ ಮೆಲುಕು ಹಾಕಿದ್ದಾರೆ. ಗೆಳೆಯ ಎನ್ನುವ ಕಾರಣಕ್ಕೆ ಸುಲಭವಾಗಿ ರನ್‌ ನೀಡುವುದಿಲ್ಲ ಎಂದು ಹೇಳಿದ ಗಾರ್ನರ್ ಮಾತನ್ನು ಸುನಿಲ್ ಗವಾಸ್ಕರ್ ನೆನಪಿಸಿಕೊಂಡಿದ್ದಾರೆ.

ವಿಂಡೀಸ್ ಪ್ರವಾಸಕ್ಕೆ ಭಾರತ ತಂಡ: ಆಯ್ಕೆ ಸಮಿತಿ ವಿರುದ್ದ ತಿರುಗಿ ಬಿದ್ದ ವಾಸೀಂ ಜಾಫರ್..!

ಕೌಂಟಿ ಕ್ರಿಕೆಟ್‌ನಲ್ಲಿ ಸೋಮರ್‌ಸೆಟ್‌ ಪರ ಆಡುವಾಗ ನಾನು ಹಾಗೂ ಮಿಸ್ಟರ್ ಜೋಯಲ್ ಗಾರ್ನರ್‌ ಇಬ್ಬರೂ ಪ್ಲಾಟ್‌ಮೇಟ್‌ಗಳಾಗಿದ್ದೆವು. ಪ್ರತಿ ಬಾಲ್‌ ನನ್ನ ಮೂಗಿನ ಪಕ್ಕದಲ್ಲೇ ಹಾದು ಹೋಗುತ್ತಿದ್ದವು, ನನ್ನ ಬ್ಯಾಟ್‌ನಿಂದ ಗಾರ್ನರ್ ಹಾಕಿದ ಬಾಲ್ ಟಚ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಾನು ನಾನ್‌-ಸ್ಟ್ರೈಕ್‌ಗೆ ಹೋದೆ. ಆಗ ಗಾರ್ನರ್ ನನ್ನ ಬಳಿಯೇ  ಹಾದು ಹೋಗುತ್ತಿದ್ದರು. ನೀಳ ಕಾಯದ ಮಾರಕ ಜೋಯೆಲ್ ಗಾರ್ನರ್ ಅವರನ್ನು ಕ್ರಿಕೆಟ್‌ ವಲಯದಲ್ಲಿ ಬಿಗ್ ಬರ್ಡ್ ಎಂದೇ ಕರೆಯಲಾಗುತ್ತಿತ್ತು. ಆವರು ನನ್ನ ಪ್ಲಾಟ್‌ ಮೇಟ್‌ ಆಗಿದ್ದರಿಂದ ಅವರ ಬಳಿ,  " ಏಯ್ ಬರ್ಡ್‌, ನಿನ್ನ ಹಳೆಯ ಪ್ಲಾಟ್‌ಮೇಟ್‌ಗೆ ಒಂದು ರನ್‌ ಖಾತೆ ತೆರೆಯಲಾದರು ಅವಕಾಶ ಮಾಡಿಕೊಡು" ಎಂದು ಕೇಳಿದೆ. ಆಗಿನ್ನೂ ನಾನು ಖಾತೆಯನ್ನೇ ತೆರೆದಿರಲಿಲ್ಲ. ಆಗ ಜೊಯೆಲ್ ಗಾರ್ನರ್, "ಇಲ್ಲಪ್ಪ. ನಿನಗೆ ನಾನು ಪುಕ್ಕಟೆ ರನ್‌ ಬಿಟ್ಟುಕೊಡುವುದಿಲ್ಲ. ಯಾಕೆಂದರೆ ಇದು ವಿಶ್ವಕಪ್ ಫೈನಲ್‌" ಎಂದು ಹೇಳಿದ್ದರು. ಹೀಗಾಗಿ ನನಗೆ ವಿಶ್ವಕಪ್ ಫೈನಲ್‌ನಲ್ಲಿ ಯಾವುದೇ ಉಚಿತ ರನ್ ಸಿಗಲಿಲ್ಲ, ನಾನು ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದೆ ಎಂದು ಗವಾಸ್ಕರ್ ಹೇಳಿದ್ದಾರೆ

1983ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಎನಿಸಿಕೊಂಡಿದ್ದ ಹಾಗೂ ಹಾಲಿ ಬಿಸಿಸಿಐ ಅಧ್ಯಕ್ಷರಾಗಿರುವ ರೋಜರ್ ಬಿನ್ನಿ ಕೂಡಾ ವಿಶ್ವಕಪ್ ಗೆದ್ದ ಕ್ಷಣವನ್ನು ಸ್ಮರಿಸಿಕೊಂಡಿದ್ದಾರೆ. " 1983ರ ಏಕದಿನ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ನನಗೆ ಅದೊಂದು ಅದ್ಭುತ ಪಯಣವಾಗಿತ್ತು. ತಂಡದಲ್ಲಿ ಸಾಕಷ್ಟು ದೃಢಸಂಕಲ್ಪವಿತ್ತು ಹಾಗೂ ಟೀಂ ಸ್ಪಿರಿಟ್ ಇತ್ತು. ಈಗಿರುವ ನಮ್ಮ ಹಾಲಿ ತಂಡವು ಕೂಡಾ ಒಳ್ಳೆಯ ಪ್ರತಿಭಾನ್ವಿತ ಆಟಗಾರರನ್ನು ಒಳಗೊಂಡಿದ್ದು ಎಲ್ಲರೂ ಸಂಘಟಿತ ಪ್ರದರ್ಶನ ತೋರಿದರೆ ಮತ್ತೊಮ್ಮೆ ನಮ್ಮ ಭಾರತ ಕ್ರಿಕೆಟ್ ತಂಡವು ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಬಹುದಾಗಿದೆ ಎಂದು ಬಿನ್ನಿ ಹೇಳಿದ್ದಾರೆ. ಆಲ್ರೌಂಡರ್ ರೋಜರ್ ಬಿನ್ನಿ 1983ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 18 ವಿಕೆಟ್‌ ಕಬಳಿಸಿ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?