Aus vs WI ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್‌ ಅಪರೂಪದ ದಾಖಲೆ ಸರಿಗಟ್ಟಿದ ಸ್ಟೀವ್ ಸ್ಮಿತ್..!

By Naveen KodaseFirst Published Dec 1, 2022, 3:41 PM IST
Highlights

ವೆಸ್ಟ್ ಇಂಡೀಸ್ ಎದುರಿನ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಬೃಹತ್ ಮೊತ್ತ
ಅಜೇಯ ದ್ವಿಶತಕ ಸಿಡಿಸಿ ಮಿಂಚಿದ ಸ್ಟೀವ್ ಸ್ಮಿತ್
29ನೇ ಟೆಸ್ಟ್ ಶತಕ ಸಿಡಿಸಿ ಬ್ರಾಡ್ಮನ್ ದಾಖಲೆ ಸರಿಗಟ್ಟಿದ ಸ್ಮಿತ್

ಪರ್ತ್‌(ಡಿ.01): ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಅನುಭವಿ ಬ್ಯಾಟರ್ ಸ್ಟೀವ್ ಸ್ಮಿತ್, ವೆಸ್ಟ್ ಇಂಡೀಸ್ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಕರ್ಷಕ ದ್ವಿಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಸ್ಟೀವ್ ಸ್ಮಿತ್, ತಮ್ಮ ಟೆಸ್ಟ್ ವೃತ್ತಿಜೀವನದ 29ನೇ ಶತಕ ಸಿಡಿಸುವ ಮೂಲಕ ಗುರುವಾರ ಕ್ರಿಕೆಟ್ ದಂತಕಥೆ ಸರ್ ಡಾನ್ ಬ್ರಾಡ್ಮನ್ ದಾಖಲೆ ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿನ ಪರ್ತ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವೆಸ್ಟ್‌ ಇಂಡೀಸ್‌ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್ 194 ಎಸೆತಗಳನ್ನು ಎದುರಿಸಿ ಮೂರಂಕಿ ಮೊತ್ತ ದಾಖಲಿಸುವ ಮೂಲಕ 29ನೇ ಶತಕ ಸಿಡಿಸಿ ಡಾನ್ ಬ್ರಾಡ್ಮನ್‌ ಅವರ ಶತಕಗಳ ದಾಖಲೆಗಳನ್ನು ಸರಿಗಟ್ಟಿದರು. ಡಾನ್‌ ಬ್ರಾಡ್ಮನ್‌ ಕೇವಲ 52 ಪಂದ್ಯಗಳನ್ನಾಡಿ 29 ಶತಕ ಸಿಡಿಸಿದರೆ, ಸ್ಮಿತ್ 88ನೇ ಟೆಸ್ಟ್ ಪಂದ್ಯದಲ್ಲಿ ಬ್ರಾಡ್ಮನ್ ದಾಖಲೆ ಸರಿಗಟ್ಟಿದ್ದು, ಇದೀಗ ಟೆಸ್ಟ್‌ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ಸಿಡಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸ್ಮಿತ್ ಜಂಟಿ 14ನೇ ಸ್ಥಾನಕ್ಕೇರಿದ್ದಾರೆ. ಇನ್ನು ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ 51 ಟೆಸ್ಟ್ ಶತಕ ಸಿಡಿಸುವ ಮೂಲಕ ಗರಿಷ್ಠ ಶತಕ ಸಿಡಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

29 x 💯

Steve Smith showing no signs of slowing down! | pic.twitter.com/ebkgO2j8n5

— cricket.com.au (@cricketcomau)

Ind vs NZ: ಮಳೆಯಿಂದ 3ನೇ ಪಂದ್ಯ ರದ್ದು; ಏಕದಿನ ಸರಣಿ ಕಿವೀಸ್ ಪಾಲು..!

ಇನ್ನು ಆಸ್ಟ್ರೇಲಿಯಾ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ಸಿಡಿಸಿದ ದಾಖಲೆ ಮಾಜಿ ನಾಯಕ ರಿಕಿ ಪಾಂಟಿಂಗ್ ಹೆಸರಿನಲ್ಲಿದೆ. ರಿಕಿ ಪಾಂಟಿಂಗ್ ಆಸ್ಟ್ರೇಲಿಯಾ ಪರ 168 ಟೆಸ್ಟ್‌ ಪಂದ್ಯಗಳನ್ನಾಡಿ 41 ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಇನ್ನು ಮತ್ತೋರ್ವ ಮಾಜಿ ನಾಯಕ ಸ್ಟೀವ್ ವಾ ಕೂಡಾ 168 ಟೆಸ್ಟ್ ಪಂದ್ಯಗಳನ್ನಾಡಿ 32 ಶತಕ ಸಿಡಿಸಿದ್ದಾರೆ. ಮ್ಯಾಥ್ಯೂ ಹೇಡನ್‌ 30 ಟೆಸ್ಟ್ ಶತಕ ಸಿಡಿಸುವ ಮೂಲಕ ಆಸ್ಟ್ರೇಲಿಯಾ ಪರ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ಸಿಡಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಸ್ಮಿತ್-ಲಬುಶೇನ್ ದ್ವಿಶತಕ; ಆಸೀಸ್‌ ಬೃಹತ್ ಮೊತ್ತ

ವೆಸ್ಟ್ ಇಂಡೀಸ್ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್‌ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆರಂಭದಲ್ಲೇ ಡೇವಿಡ್ ವಾರ್ನರ್(5) ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ ತಂಡವು ಎರಡನೇ ವಿಕೆಟ್‌ಗೆ ಉಸ್ಮಾನ್ ಖವಾಜ(65) ಹಾಗೂ ಮಾರ್ನಸ್‌ ಲಬುಶೇನ್ 142 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಖವಾಜ ವಿಕೆಟ್‌ ಪತನದ ಬಳಿಕ ಜತೆಯಾದ ಮಾರ್ನಸ್ ಲಬುಶೇನ್ ಹಾಗೂ ಸ್ಟೀವ್ ಸ್ಮಿತ್ ಜೋಡಿಯು ಮೂರನೇ ವಿಕೆಟ್‌ಗೆ 251 ರನ್‌ಗಳ ಜತೆಯಾಟವಾಡುವ ಮೂಲಕ ತಂಡವು ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಲಬುಶೇನ್ 350 ಎಸೆತಗಳನ್ನು ಎದುರಿಸಿ 20 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 204 ರನ್ ಬಾರಿಸಿದರು. ಇನ್ನು ಇದಾದ ಬಳಿಕ ಸ್ಟೀವ್ ಸ್ಮಿತ್ ಹಾಗೂ ಟ್ರಾವಿಸ್ ಹೆಡ್ 198 ರನ್‌ಗಳ ಜತೆಯಾಟವಾಡಿತು. ಸ್ಟೀವ್ ಸ್ಮಿತ್ 311 ಎಸೆತಗಳನ್ನು ಎದುರಿಸಿ 16 ಬೌಂಡರಿ ಸಹಿತ ಅಜೇಯ 200 ರನ್ ಬಾರಿಸಿದರೆ, ಟ್ರಾವಿಸ್ ಹೆಡ್ 99 ರನ್ ಬಾರಿಸಿ ವಿಕೆಟ್‌ ಒಪ್ಪಿಸುವ ಮೂಲಕ ಕೇವಲ ಒಂದು ರನ್ ಅಂತರದಲ್ಲಿ ಶತಕ ವಂಚಿತರಾದರು. ಆಸ್ಟ್ರೇಲಿಯಾ 4 ವಿಕೆಟ್‌ ಕಳೆದುಕೊಂಡು 598 ರನ್ ಬಾರಿಸಿ ಮೊದಲ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತು.

ವೆಸ್ಟ್‌ ಇಂಡೀಸ್ ತಿರುಗೇಟು:

ಇನ್ನು ಮೊದಲ ಇನಿಂಗ್ಸ್‌ ಆರಂಭಿಸಿದ ವೆಸ್ಟ್ ಇಂಡೀಸ್ ತಂಡವು ಎರಡನೇ ದಿನದಾಟದಂತ್ಯದ ವೇಳೆಗೆ ವಿಕೆಟ್ ನಷ್ಟವಿಲ್ಲದೇ 74 ರನ್ ಕಲೆಹಾಕಿದೆ. ತೇಗ್‌ನರೇನ್‌ ಚಂದ್ರಪಾಲ್‌ ಅಜೇಯ 47 ರನ್ ಬಾರಿಸಿದರೆ, ನಾಯಕ ಕ್ರೇಗ್ ಬ್ರಾಥ್‌ವೇಟ್ 18 ರನ್ ಬಾರಿಸಿ ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇನ್ನೂ ವೆಸ್ಟ್ ಇಂಡೀಸ್ ತಂಡವು 524 ರನ್‌ಗಳ ಹಿನ್ನೆಡೆಯಲ್ಲಿದೆ. 
 

click me!