
ಬೆಂಗಳೂರು: ಕಳೆದ ಮೂರು ಸೀಸನ್ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುತ್ತಾ ಬಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್‌ಮೆಂಟ್ ಇದೀಗ ಹಳೆಯ ಕುದುರೆಗಳಿಗೆ ಗೇಟ್‌ಪಾಸ್ ನೀಡಲು ಶುರು ಮಾಡಿದೆ. ಇದರ ಭಾಗವಾಗಿ ಕಳೆದ 17 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚಿಂಗ್ ಸ್ಟಾಫ್ ಆಗಿ ಕಾರ್ಯನಿರ್ವಹಿಸಿದ್ದ ದಿಗ್ಗಜ ಕ್ರಿಕೆಟಿಗ ಸ್ಟಿಫನ್ ಫ್ಲೆಮಿಂಗ್, ಸಿಎಸ್‌ಕೆ ತಂಡಕ್ಕೆ ಗುಡ್ ಬೈ ಹೇಳಿದ್ದಾರೆ. ಈ ವಿಷಯವನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕೂಡಾ ಖಚಿತಪಡಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು 2023ರಲ್ಲಿ ಕೊನೆಯ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ಬೀಗಿತ್ತು. ಇದಾದ ಬಳಿಕ 2024,2025 ಹಾಗೂ 2026ರಲ್ಲಿ ಚೆನ್ನೈ ತಂಡವು ಪ್ರಶಸ್ತಿ ಗೆಲ್ಲುವುದು ಬದಿಗಿರಲಿ, ಪ್ಲೇ ಆಫ್‌ಗೇರಲು ಕೂಡಾ ಸಾಧ್ಯವಾಗಿರಲಿಲ್ಲ. ಸತತ ಮೂರು ವರ್ಷಗಳಿಂದ ಸಿಎಸ್‌ಕೆ ತಂಡದ ನೀರಸ ಪ್ರದರ್ಶನಕ್ಕೆ ಇದೀಗ ತಂಡದ ಹೆಡ್‌ಕೋಚ್ ತಲೆದಂಡವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
'ಸೂಪರ್ ಕಿಂಗ್ಸ್ ಮತ್ತು ಸ್ಟೀಫನ್ ಫ್ಲೆಮಿಂಗ್ ಪರಸ್ಪರ ಬೇರ್ಪಡಲು ನಿರ್ಧರಿಸಿದ್ದಾರೆ, ಇದು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಮತ್ತು ಶಾಶ್ವತ ಪಾಲುದಾರಿಕೆಗಳಲ್ಲಿ ಒಂದನ್ನು ಮುಕ್ತಾಯಗೊಳಿಸಿದೆ. ಫ್ಲೆಮಿಂಗ್ ಮತ್ತು ಸೂಪರ್ ಕಿಂಗ್ಸ್ ಆಡಳಿತ ಮಂಡಳಿಯ ನಡುವೆ ನಡೆದ ಮುಕ್ತ ಮತ್ತು ಪ್ರಾಮಾಣಿಕ ಚರ್ಚೆಗಳ ಸರಣಿಯ ನಂತರ, ಗೌರವ ಮತ್ತು ಕೃತಜ್ಞತೆಯಿಂದ ಈ ನಿರ್ಧಾರಕ್ಕೆ ಬರಲಾಯಿತು' ಎಂದು ಸಿಎಸ್‌ಕೆ ಫ್ರಾಂಚೈಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
OFFICIAL ANNOUNCEMENT
The Super Kings and Head Coach Stephen Fleming have mutually decided to part ways.
Together, we shared one of the most successful and enduring partnerships in IPL history. The legacy you've built will continue to inspire us.
With immense respect and… pic.twitter.com/qjvb4oZUuU— Chennai Super Kings (@ChennaiIPL) July 13, 2026
ನ್ಯೂಜಿಲೆಂಡ್ ಮೂಲದ ದಿಗ್ಗಜ ಕ್ರಿಕೆಟಿಗ ಸ್ಟಿಫನ್ ಫ್ಲೆಮಿಂಗ್, 2008ರ ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆಟಗಾರನಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಇದಾದ ಮರುವರ್ಷ ಅಂದರೆ 2009ರಿಂದ ಸಿಎಸ್‌ಕೆ ತಂಡದ ಹೆಡ್‌ಕೋಚ್ ಆಗಿ ನೇಮಕಗೊಂಡರು. ಇದಾದ 17 ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ ಇಂದು ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿ ಮಾಡುವಲ್ಲಿ ಫ್ಲೆಮಿಂಗ್ ಪಾತ್ರ ದೊಡ್ಡದಿದೆ.
ಸ್ಟಿಫನ್ ಫ್ಲೆಮಿಂಗ್ ಮಾರ್ಗದರ್ಶನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಐದು ಐಪಿಎಲ್ ಟ್ರೋಫಿ ಹಾಗೂ ಎರಡು ಚಾಂಪಿಯನ್ಸ್ ಲೀಗ್ ಟಿ20 ಟೂರ್ನಮೆಂಟ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದಷ್ಟೇ ಅಲ್ಲದೇ ಚೆನ್ನೈ ಸೂಪರ್ ಕಿಂಗ್ಸ್ ತಂಡವು 10 ಬಾರಿ ಫೈನಲ್ ಸೇರಿದಂತೆ ಒಟ್ಟು 12 ಬಾರಿ ಪ್ಲೇ ಆಫ್ ಪ್ರವೇಶಿಸಿದೆ.
ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಐಪಿಎಲ್ ಟ್ರೋಫಿ ಗೆದ್ದ ತಂಡ ಎನ್ನುವ ಹೆಗ್ಗಳಿಕೆ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಿದೆ. ಈ ಎರಡು ತಂಡಗಳು ತಲಾ 5 ಬಾರಿ ಐಪಿಎಲ್ ಟ್ರೋಫಿ ಗೆದ್ದಿವೆ. ಆದರೆ ಕಳೆದ ಮೂರ್ನಾಲ್ಕು ಸೀಸನ್‌ನಿಂದಲೂ ಈ ಎರಡು ತಂಡಗಳು ಪ್ಲೇ ಆಫ್‌ಗೇರಲು ಪರದಾಡುತ್ತಿವೆ. ಹೀಗಾಗಿ ಮುಂಬರುವ ಐಪಿಎಲ್ ಸೀಸನ್‌ಗೂ ಮುನ್ನ ಎರಡೂ ಫ್ರಾಂಚೈಸಿಗಳು ತಂಡದಲ್ಲಿ ಮೇಜರ್ ಸರ್ಜರಿಗೆ ಮುಂದಾಗಿದ್ದು, ಹೊಸ ತಂಡ ಕಟ್ಟಲು ತಯಾರಿ ನಡೆಸುತ್ತಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.