
ಮೆಲ್ಬರ್ನ್: 2023-25ನೇ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ತೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು 5 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿ ಬೀಗಿದೆ. ಇದರ ಬೆನ್ನಲ್ಲೇ ಸತತ ಎರಡನೇ ಬಾರಿಗೆ ಟೆಸ್ಟ್ ವಿಶ್ವಕಪ್ ಗೆಲ್ಲುವ ಕಾಂಗರೂ ಪಡೆಯ ಕನಸು ನುಚ್ಚುನೂರಾಗಿದೆ. ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಪ್ರದರ್ಶನ ಸಾಕಷ್ಟು ನಿರಾಸೆ ಮೂಡಿಸಿತ್ತು. ಇದೀಗ ಆಸ್ಟ್ರೇಲಿಯಾ ತಂಡವು ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಗೆ ಸಜ್ಜಾಗಿದೆ. ಮೊದಲ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ಕಾಂಗರೂ ಪಡೆಯಲ್ಲಿ ಎರಡು ಮಹತ್ವದ ಬದಲಾವಣೆ ಮಾಡಲಾಗಿದೆ.
ಇಬ್ಬರು ಸ್ಟಾರ್ ಕ್ರಿಕೆಟಿಗರು ಔಟ್:
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಟೀವ್ ಸ್ಮಿತ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಸ್ಟೀವ್ ಸ್ಮಿತ್ ಆಕರ್ಷಕ ಅರ್ಧಶತಕ ಸಿಡಿಸಿದ್ದರು. ಇನ್ನು ಫೀಲ್ಡಿಂಗ್ ಮಾಡುವ ವೇಳೆಯಲ್ಲಿ ತೆಂಬಾ ಬವುಮಾ ಅವರ ಕ್ಯಾಚ್ ಹಿಡಿಯುವ ಯತ್ನದಲ್ಲಿ ಕೈಬೆರಳಿಗೆ ತುತ್ತಾಗಿ ಮೈದಾನ ತೊರೆದಿದ್ದರು. ಇದೀಗ ವೆಸ್ಟ್ ಇಂಡೀಸ್ ಎದುರಿನ ಮೊದಲ ಟೆಸ್ಟ್‌ಗೆ ಸ್ಟೀವ್ ಸ್ಮಿತ್ ಅಲಭ್ಯರಾಗಿದ್ದು, ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಇನ್ನೊಂದೆಡೆ ಆಸ್ಟ್ರೇಲಿಯಾ ತಂಡದ ಪ್ರಮುಖ ಬ್ಯಾಟರ್ ಮಾರ್ನರ್ ಲಬುಶೇನ್ ಕಳೆದ ಕೆಲ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಪಲ್ಯ ಅನುಭವಿಸುತ್ತಾ ಬಂದಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲೂ ಮಾರ್ನಸ್ ಲಬುಶೇನ್ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲವಾಗಿದ್ದರು. ಹರಿಣಗಳೆದುರು ಲಬುಶೇನ್ ಮೊದಲ ಇನ್ನಿಂಗ್ಸ್‌ನಲ್ಲಿ 17 ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 22 ರನ್ ಸಿಡಿಸಿದ್ದರು. ಹೀಗಾಗಿ ಮಾರ್ನಸ್ ಲಬುಶೇನ್‌ಗೆ ಆಸ್ಟ್ರೇಲಿಯಾ ಟೆಸ್ಟ್ ತಂಡದಿಂದ ಗೇಟ್‌ಪಾಸ್ ನೀಡಲಾಗಿದೆ. ಲಬುಶೇನ್ 2023ರಲ್ಲಿ 34.91 ರ ಸರಾಸರಿಯಲ್ಲಿ ರನ್ ಗಳಿಸಿದ್ದರು. ಇನ್ನು 2024ರಲ್ಲಿ ಲಬುಶೇನ್ ಬ್ಯಾಟಿಂಗ್ ಸರಾಸರಿ 30.93ಕ್ಕೆ ಕುಸಿತ ಕಂಡಿದೆ.
ಇಬ್ಬರು ಆಟಗಾರರು ಕಮ್‌ಬ್ಯಾಕ್:
ಇನ್ನು ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡದಲ್ಲಿ ಎರಡು ಹೊಸ ಮುಖಗಳಿಗೆ ಮಣೆಹಾಕಲಾಗಿದೆ. ವಿಂಡೀಸ್ ಎದುರಿನ ಮೊದಲ ಟೆಸ್ಟ್‌ಗೆ ಉಸ್ಮಾನ್ ಖವಾಜಾ ಜತೆ ಸ್ಯಾಮ್ ಕ್ವಾಂಟಾಸ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಇಂಗ್ಲಿಶ್ ಕಮ್‌ಬ್ಯಾಕ್ ಮಾಡಿದ್ದಾರೆ. ಇಲ್ಲಿಯತನಕ ಈ ಇಬ್ಬರು ಕ್ರಿಕೆಟಿಗರು ಅಸ್ಟ್ರೇಲಿಯಾ ಪರ ತಲಾ ಎರಡು ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಸ್ಯಾಮ್ ಕ್ವಾಂಟಾಸ್ ಭಾರತ ವಿರುದ್ದ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಅವರು ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದರು. ಇನ್ನು ಜೋಶ್ ಇಂಗ್ಲಿಶ್ ತಾವಾಡಿದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ್ದರು. ಈ ಇಬ್ಬರು ಕ್ರಿಕೆಟಿಗರು, ಇದೀಗ ವಿಂಡೀಸ್ ಟೆಸ್ಟ್ ಸರಣಿಯಲ್ಲಿ ಅಬ್ಬರಿಸಲು ರೆಡಿಯಾಗಿದ್ದಾರೆ.
ವಿಂಡೀಸ್ ಎದುರಿನ ಸರಣಿಗೆ ಹೊಸ ಆರಂಭಿಕ ಜೋಡಿ:
ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಗೆ ಮತ್ತೊಮ್ಮೆ ಆಸ್ಟ್ರೇಲಿಯಾ ತಂಡದಲ್ಲಿ ಹೊಸ ಆರಂಭಿಕ ಜೋಡಿ ಕಣಕ್ಕಿಳಿಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸೀಸ್ ಪರ ಆರಂಭಿಕರಾಗಿ ಮಾರ್ನಸ್ ಲಬುಶೇನ್ ಹಾಗೂ ಉಸ್ಮಾನ್ ಖವಾಜಾ ಕಣಕ್ಕಿಳಿದಿದ್ದರು. ಇದೀಗ ಲಬುಶೇನ್ ತಂಡದಿಂದ ಹೊರಬಿದ್ದಿರುವುದರಿಂದ ಕಾಂಗರೂ ಪಡೆಯ ಪರ ವಿಂಡೀಸ್ ಸರಣಿಯಲ್ಲಿ ಉಸ್ಮಾನ್ ಖವಾಜಾ ಹಾಗೂ ಸ್ಯಾಮ್ ಕ್ವಾಂಟಾಸ್ ಕಾಣಿಸಿಕೊಳ್ಳಲಿದ್ದಾರೆ.
ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯವು ಜೂನ್ 25ರಿಂದ ಆರಂಭವಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.