ಗಿಲ್-ಪಂತ್ ಅಮೋಘ ಶತಕ; ಚೆನ್ನೈ ಟೆಸ್ಟ್‌ ಗೆಲ್ಲಲು ಬಾಂಗ್ಲಾಗೆ ಕಠಿಣ ಗುರಿ ಕೊಟ್ಟ ಭಾರತ

By Naveen Kodase  |  First Published Sep 21, 2024, 1:12 PM IST

ಬಾಂಗ್ಲಾದೇಶ ತಂಡಕ್ಕೆ ಚೆನ್ನೈ ಟೆಸ್ಟ್ ಪಂದ್ಯ ಗೆಲ್ಲಲು ಟೀಂ ಇಂಡಿಯಾ ಬರೋಬ್ಬರಿ 515 ರನ್‌ಗಳ ಕಠಿಣ ಗುರಿ ನೀಡಿದೆ. ರಿಷಭ್ ಪಂತ್, ಶುಭ್‌ಮನ್ ಗಿಲ್ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ


ಚೆನ್ನೈ: ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹಾಗೂ ಶುಭ್‌ಮನ್ ಗಿಲ್ ಬಾರಿಸಿದ ಆಕರ್ಷಕ ಶತಕಗಳ ನೆರವಿನಿಂದ ಟೀಂ ಇಂಡಿಯಾ, ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್ ಕಳೆದುಕೊಂಡು 287 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ ಬಾಂಗ್ಲಾದೇಶ ತಂಡಕ್ಕೆ 515 ರನ್‌ಗಳ ಕಠಿಣ ಗುರಿ ನೀಡಿದೆ.

ಎರಡನೇ ದಿನದಾಟದಂತ್ಯದ ವೇಳೆಗೆ ಟೀಂ ಇಂಡಿಯಾ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್ ಕಳೆದು 81 ರನ್ ಬಾರಿಸಿತ್ತು. ಇನ್ನು ಮೂರನೇ ದಿನದಾಟದಲ್ಲಿ ರಿಷಭ್ ಪಂತ್ ಹಾಗೂ ಶುಭ್‌ಮನ್ ಗಿಲ್, ಬಾಂಗ್ಲಾ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. 632 ದಿನಗಳ ಬಳಿಕ ಟೆಸ್ಟ್‌ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ ರಿಷಭ್ ಪಂತ್ 124 ಎಸೆತಗಳನ್ನು ಎದುರಿಸಿ ಟೆಸ್ಟ್ ವೃತ್ತಿಜೀವನದ 6ನೇ ಶತಕ ಪೂರೈಸಿದರು. ನಾಲ್ಕನೇ ವಿಕೆಟ್‌ಗೆ ಪಂತ್-ಗಿಲ್ ಜೋಡಿ 167 ರನ್‌ಗಳ ಜತೆಯಾಟವಾಡಿದರು. ಅಂತಿಮವಾಗಿ ಪಂತ್ 128 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 109 ರನ್ ಬಾರಿಸಿ ಮೆಹದಿ ಹಸನ್ ಮಿರಜ್‌ಗೆ ವಿಕೆಟ್ ಒಪ್ಪಿಸಿದರು.

Latest Videos

ಇನ್ನು ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಶುಭ್‌ಮನ್ ಗಿಲ್ 176 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 119 ರನ್ ಸಿಡಿಸಿದರು. ಇನ್ನು ಗಿಲ್‌ಗೆ ಉತ್ತಮ ಸಾಥ್ ನೀಡಿದ ಕೆ ಎಲ್ ರಾಹುಲ್ ಅಜೇಯ 22 ರನ್ ಸಿಡಿಸಿದರು. 5ನೇ ವಿಕೆಟ್‌ಗೆ ಗಿಲ್-ರಾಹುಲ್ ಜೋಡಿ ಕೇವಲ 51 ಎಸೆತಗಳನ್ನು ಎದುರಿಸಿ ಮುರಿಯದ 53 ರನ್‌ಗಳ ಜತೆಯಾಟ ನಿಭಾಯಿಸಿತು.

click me!