
ಅಹಮದಾಬಾದ್: ಐಪಿಎಲ್ ಆರಂಭಕ್ಕೂ ಮುನ್ನ, ತಮ್ಮ ಟಿ20 ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಎತ್ತಿದವರಿಗೆ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್‌ಮನ್ ಗಿಲ್ ಖಡಕ್ ಉತ್ತರ ಕೊಟ್ಟಿದ್ದಾರೆ. 'ಕಳೆದ ಮೂರ್ನಾಲ್ಕು ಸೀಸನ್‌ಗಳಲ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದು ನಾನೇ, ಹಾಗಾಗಿ ಯಾರಿಗೂ ಏನನ್ನೂ ಸಾಬೀತುಪಡಿಸುವ ಅಗತ್ಯ ನನಗಿಲ್ಲ' ಎಂದು ಗಿಲ್ ಸ್ಪಷ್ಟಪಡಿಸಿದ್ದಾರೆ. ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಎದುರಾದ ಟೀಕೆಗಳಿಗೆ, ಸೀಸನ್‌ಗೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ರೀತಿ ಪ್ರತಿಕ್ರಿಯಿಸಿದರು.
2022ರಿಂದ ಇಲ್ಲಿಯವರೆಗಿನ ಅಂಕಿಅಂಶಗಳನ್ನು ನೋಡಿದರೆ, ಗಿಲ್ ಐಪಿಎಲ್‌ನಲ್ಲಿ 46.2ರ ಸರಾಸರಿಯಲ್ಲಿ ಮತ್ತು 149.78ರ ಸ್ಟ್ರೈಕ್ ರೇಟ್‌ನಲ್ಲಿ ಬರೋಬ್ಬರಿ 2,449 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ವಿರಾಟ್ ಕೊಹ್ಲಿ (2378 ರನ್) ಮಾತ್ರ ಗಿಲ್ ನಂತರದ ಸ್ಥಾನದಲ್ಲಿದ್ದಾರೆ. ಭಾರತೀಯ ಟಿ20 ತಂಡದಲ್ಲಿ ಓಪನರ್ ಸ್ಥಾನಕ್ಕೆ ಪೈಪೋಟಿ ನೀಡುತ್ತಿರುವ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್‌ಗಿಂತ ಗಿಲ್ ಐಪಿಎಲ್ ರನ್ ಗಳಿಕೆಯಲ್ಲಿ ಸಾಕಷ್ಟು ಮುಂದಿದ್ದಾರೆ. ಇದೇ ವಿಚಾರವನ್ನು ಮುಂದಿಟ್ಟು ಗಿಲ್ ತಮ್ಮ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
'ಕಳೆದ ಕೆಲವು ಸೀಸನ್‌ಗಳ ಲೆಕ್ಕಾಚಾರ ನೋಡಿದರೆ, ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದು ನಾನೇ ಅನ್ನೋದು ಗೊತ್ತಾಗುತ್ತೆ. ಹಾಗಾಗಿ ಈ ಸೀಸನ್‌ನಲ್ಲಿ ನಾನು ವಿಶೇಷವಾಗಿ ಏನನ್ನೂ ಸಾಬೀತುಪಡಿಸಬೇಕಾಗಿಲ್ಲ. ಗುಜರಾತ್ ತಂಡಕ್ಕಾಗಿ ಆಡಿದ ನಾಲ್ಕು ವರ್ಷಗಳಲ್ಲಿ ಒಬ್ಬ ಬ್ಯಾಟ್ಸ್‌ಮನ್ ಆಗಿ ನಾನು ಉತ್ತಮ ಪ್ರದರ್ಶನ ನೀಡಿದ್ದೇನೆ. ಈ ಸೀಸನ್‌ನಲ್ಲೂ ನಮ್ಮ ತಂಡ ಸ್ಥಿರ ಪ್ರದರ್ಶನ ನೀಡಲಿದೆ, ಎರಡನೇ ಟ್ರೋಫಿ ಹೆಚ್ಚು ದೂರವಿಲ್ಲ' ಎಂದು ಗಿಲ್ ಹೇಳಿದರು.
ಬ್ಯಾಟಿಂಗ್‌ನಲ್ಲಿ ಆತ್ಮವಿಶ್ವಾಸವಿದ್ದರೂ, ನಾಯಕನಾಗಿ ಈ ಸೀಸನ್ ಗಿಲ್‌ಗೆ ಬಹಳ ನಿರ್ಣಾಯಕ. ಹಾರ್ದಿಕ್ ಪಾಂಡ್ಯ ತಂಡವನ್ನು ತೊರೆದ ನಂತರ ಗುಜರಾತ್ ಟೈಟಾನ್ಸ್ ತನ್ನ ಹಳೆಯ ಫಾರ್ಮ್‌ಗೆ ಮರಳಲು ಹೆಣಗಾಡುತ್ತಿದೆ. ಕಳೆದ ವರ್ಷ ಏಷ್ಯಾಕಪ್‌ಗೂ ಮುನ್ನ ಸಂಜು ಸ್ಯಾಮ್ಸನ್ ಬದಲು ಭಾರತದ ಟಿ20 ತಂಡದಲ್ಲಿ ಓಪನರ್ ಆಗಿ ಗಿಲ್‌ಗೆ ಅವಕಾಶ ಸಿಕ್ಕಿತ್ತು. ಆದರೆ, ಆ ಅವಕಾಶವನ್ನು ಅವರು ಸರಿಯಾಗಿ ಬಳಸಿಕೊಳ್ಳಲಿಲ್ಲ. ಇದೀಗ ಸಂಜು ಸ್ಯಾಮ್ಸನ್ ಮತ್ತೆ ಓಪನರ್ ಆಗಿ ತಂಡಕ್ಕೆ ಮರಳಿದ್ದಾರೆ. ಈ ಹಿನ್ನೆಲೆಯಲ್ಲಿ ಗಿಲ್, ಐಪಿಎಲ್‌ನಲ್ಲಿನ ತಮ್ಮ ದಾಖಲೆಗಳನ್ನು ಮುಂದಿಟ್ಟು ಟೀಕೆಗಳಿಗೆ ಉತ್ತರ ನೀಡಿದ್ದಾರೆ.
19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಮಾರ್ಚ್ 28ರಿಂದ ಅಧಿಕೃತ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್‌ರೈಸರ್ಸ್ ಹೈದರಾಬಾದ್ ಎದುರು ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಲಿದೆ.
ಇನ್ನು ಶುಭ್‌ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಮಾರ್ಚ್ 31ರಂದು ತನ್ನ ಪಾಲಿನ ಮೊದಲ ಪಂದ್ಯದಲ್ಲೇ ಕಳೆದ ಬಾರಿಯ ರನ್ನರ್ ಅಪ್ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಚಂಢೀಗಢದ ಮುಲ್ಲಾನಪುರ ಸ್ಟೇಡಿಯಂನಲ್ಲಿ ನಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.