ಟೆಸ್ಟ್‌ ನಾಯಕನಾಗಿ ಮೊದಲ ಪಂದ್ಯದಲ್ಲೇ ಶತಕ, ದಿಗ್ಗಜರ ಸಾಲಿಗೆ ಸೇರಿದ ಶುಭ್‌ಮನ್‌ ಗಿಲ್, ದಾಖಲೆ ಬರೆದ ಜೈಸ್ವಾಲ್‌!

Published : Jun 20, 2025, 10:42 PM ISTUpdated : Jun 20, 2025, 11:06 PM IST
Gill and Jaiswal

ಸಾರಾಂಶ

ಭಾರತ ಟೆಸ್ಟ್ ತಂಡದ ನಾಯಕ ಶುಭ್‌ಮನ್ ಗಿಲ್, ಇಂಗ್ಲೆಂಡ್ ವಿರುದ್ಧದ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  

ಹೆಡಿಂಗ್ಲೆ (ಜೂ.20): ಭಾರತ ಟೆಸ್ಟ್‌ ತಂಡದ ನಾಯಕ ಶುಭ್‌ಮನ್‌ ಗಿಲ್‌ ಶುಕ್ರವಾರ, ದಿಗ್ಗಜರ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಭಾರತ ಟೆಸ್ಟ್‌ ತಂಡದ ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ ಕೇವಲ ನಾಲ್ಕನೇ ಆಟಗಾರ ಎನ್ನುವ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಲೀಡ್ಸ್‌ನ ಹೆಡಿಂಗ್ಲೆ ಮೈದಾನದಲ್ಲಿ ಶುಕ್ರವಾರ ಆರಂಭವಾದ ಸಚಿನ್‌-ಆಂಡರ್‌ಸನ್‌ ಟ್ರೋಫಿಯ ಐದು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಟೆಸ್ಟ್‌ನ ಮೊದಲ ದಿನದಲ್ಲಿಯೇ ಶುಭ್‌ಮನ್‌ ಗಿಲ್‌ ಈ ದಾಖಲೆ ಮಾಡಿದ್ದಾರೆ.

ರೋಹಿತ್‌ ಶರ್ಮ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲಿಯೇ ತಂಡ ನಾಯಕರಾಗಿ ಆಯ್ಕೆಯಾಗಿರುವ 25 ವರ್ಷದ ಶುಭ್‌ಮನ್‌ ಗಿಲ್‌, ಇಂಗ್ಲೆಂಡ್‌ನ ಮಹಾ ದಾಳಿಯ ನಡುವೆಯೂ 140 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ಅದರಲ್ಲೂ ಇಂಗ್ಲೆಂಡ್‌ನಲ್ಲಿ ಭಾರತ ಟೆಸ್ಟ್‌ ತಂಡದ ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲಿಯೇ ಶತಕ ಬಾರಿಸಿದ ಮೊದಲ ಆಟಗಾರ ಶುಭ್‌ಮನ್‌ ಗಿಲ್‌ ಆಗಿದ್ದಾರೆ.

1951ರಲ್ಲಿ ವಿಜಯ್‌ ಹಜಾರೆ ಇಂಗ್ಲೆಂಡ್‌ ವಿರುದ್ಧ ದೆಹಲಿಯಲ್ಲಿ ಅಜೇಯ 164 ರನ್‌ ಬಾರಿಸಿರುವುದು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, 1976ರಲ್ಲಿ ಸುನೀನ್‌ ಗವಾಸ್ಕರ್‌ ನ್ಯೂಜೆಂಡ್‌ ವಿರುದ್ಧ ಆಕ್ಲೆಂಡ್‌ನಲ್ಲಿ 116 ರನ್‌ ಬಾರಿಸಿದ್ದು 2ನೇ ಸ್ಥಾನದಲ್ಲಿದೆ. 2014ರಲ್ಲಿ ವಿರಾಟ್‌ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್‌ನಲ್ಲಿ 115 ರನ್‌ ಬಾರಿಸಿದ್ದು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ನಾಯಕನಾಗಿ ಚೊಚ್ಚಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ 23 ನೇ ಆಟಗಾರ ಶುಭ್‌ಮನ್‌ ಗಿಲ್‌ ಆಗಿದ್ದಾರೆ. ಹರ್ಬಿ ಟೇಲರ್, ಅಲಸ್ಟೇರ್ ಕುಕ್ ಮತ್ತು ಸ್ಟೀವನ್ ಸ್ಮಿತ್ ನಂತರ ನಾಲ್ಕನೇ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

ವಿರಾಟ್‌ ಕೊಹ್ಲಿ ನಿವೃತ್ತಿಯಿಂದ ಖಾಲಿಯಾಗಿದ್ದ ನಾಲ್ಕನೇ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಆಡಿದ ಶುಭ್‌ಮನ್‌ ಗಿಲ್‌, ಮತ್ತೊಬ್ಬ ಶತಕವೀರ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ ಜೊತೆ ಅದ್ಭುತ ಇನ್ನಿಂಗ್ಸ್‌ ಆಡಿದರು.

ಭಾರತ ತಂಡದ 92 ರನ್‌ಗೆ 2 ವಿಕೆಟ್‌ ಕಳೆದುಕೊಂಡಿದ್ದ ಹಂತದಲ್ಲಿ ಶುಭ್‌ಮನ್‌ ಗಿಲ್‌ ಕ್ರೀಸ್‌ಗೆ ಇಳಿದಿದ್ದರು. ಆರಂಭಿಕ ಆಟಗಾರ ಕೆಎಲ್‌ ರಾಹುಲ್‌ 78 ಎಸೆತಗಳಲ್ಲಿ 8 ಬೌಂಡರಿಯೊಂದಿಗೆ 42 ರನ್‌ ಬಾರಿಸಿ ಔಟಾದರೆ, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಸಾಯಿ ಸುದರ್ಶನ್‌ 4 ಎಸೆತದಲ್ಲಿ ಶೂನ್ಯ ಸುತ್ತಿದರು. ಎದುರಿಸಿದ 6ನೇ ಎಸೆತದಲ್ಲಿಯೇ ರನ್‌ಔಟ್‌ ಆಗುವ ಅಪಾಯದಿಂದ ಪಾರಾದ ಶುಭ್‌ಮನ್‌ ಗಿಲ್‌ ಮೂರನೇ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್‌ ಜೊತೆ 129 ರನ್‌ ಜೊತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿದರು.

ಐದನೇ ಶತಕ ಸಿಡಿಸಿದ ಜೈಸ್ವಾಲ್‌:, 93 ವರ್ಷದಲ್ಲಿ ಯಾರೂ ಮಾಡದ ದಾಖಲೆ ಮಾಡಿದ ಯಶಸ್ವಿ!

ಇಂಗ್ಲೆಂಡ್‌ ನೆಲದಲ್ಲಿ ತಮ್ಮ ಮೊದಲ ಟೆಸ್ಟ್‌ ಆಡಿದ ಯಶಸ್ವಿ ಜೈಸ್ವಾಲ್‌ 144 ಎಸೆತಗಳಲ್ಲಿ ತಮ್ಮ ಐದನೇ ಟೆಸ್ಟ್‌ ಶತಕ ಸಿಡಿಸಿದರು. ಆ ಮೂಲಕ ದೇಶದ 93 ವರ್ಷಗಳ ಟೆಸ್ಟ್‌ ಇತಿಹಾಸದಲ್ಲಿ ಯಾರೂ ನಿರ್ಮಿಸದ ದಾಖಲೆಯನ್ನು ಅವರು ಮಾಡಿದ್ದಾರೆ. ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ನೆಲದಲ್ಲಿ ತಾವು ಆಡಿದ ಮೊದಲ ಪಂದ್ಯದಲ್ಲಿಯೇ ಶತಕ ಬಾರಿಸಿದ ಮೊದಲ ಆಟಗಾರ ಇವರಾಗಿದ್ದಾರೆ. ಇದಕ್ಕೂ ಮುನ್ನ 2024-25ರ ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿಯ ಪರ್ತ್‌ ಟೆಸ್ಟ್‌ನಲ್ಲಿ ಜೈಸ್ವಾಲ್‌ ಶತಕ ಬಾರಿಸಿದ್ದರು. ಲೀಡ್ಸ್‌ನಲ್ಲಿ 159 ಎಸೆತಗಳ ಇನ್ನಿಂಗ್ಸ್‌ ಆಡಿದ ಜೈಸ್ವಾಲ್‌ 16 ಬೌಂಡರಿ 1 ಸಿಕ್ಸರ್‌ ಇದ್ದ 101 ರನ್‌ ಬಾರಿಸಿದ್ದಾರೆ.

ಮೊದಲ ದಿನದಾಟದಲ್ಲಿ ಭಾರತ 85 ಓವರ್‌ಗಳಲ್ಲಿ 3 ವಿಕೆಟ್‌ಗೆ 359 ರನ್‌ ಬಾರಿಸಿದೆ. 63 ರನ್‌ ಬಾರಿಸಿರುವ ರಿಷಭ್‌ ಪಂತ್‌ ಹಾಗೂ 127 ರನ್ ಬಾರಿಸಿರುವ ನಾಯಕ ಶುಭ್‌ಮನ್‌ ಗಿಲ್‌ 2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌
ಕುಲ್ದೀಪ್-ಪ್ರಸಿದ್ದ್ ಮಾರಕ ದಾಳಿ; ಏಕದಿನ ಸರಣಿ ಗೆಲ್ಲಲು ಭಾರತಕ್ಕೆ ಸ್ಪರ್ಧಾತ್ಮಕ ಗುರಿ