
ಬೆಲ್‌ಫಾಸ್ಟ್: ಅಂತರರಾಷ್ಟ್ರೀಯ ಟಿ20ಯಲ್ಲಿ ಕ್ಯಾಪ್ಟನ್ ಆಗಿ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಸೋತ ನಾಲ್ಕನೇ ಭಾರತೀಯ ಕ್ಯಾಪ್ಟನ್ ಎಂಬ ಕೆಟ್ಟ ದಾಖಲೆಗೆ ಶ್ರೇಯಸ್ ಅಯ್ಯರ್ ಪಾತ್ರರಾಗಿದ್ದಾರೆ.
ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 34 ರನ್‌ಗಳಿಂದ ಸೋತ ಬೆನ್ನಲ್ಲೇ ಅಯ್ಯರ್ ಈ ಅನಗತ್ಯ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್, ನಿಗದಿತ ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ 18.5 ಓವರ್‌ಗಳಲ್ಲಿ 148 ರನ್‌ಗಳಿಗೆ ಆಲೌಟ್ ಆಯಿತು. 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆದ ಬಳಿಕ ಭಾರತ ಆಡಿದ ಮೊದಲ ಪಂದ್ಯದಲ್ಲೇ ಸೋಲಿನ ಕಹಿಯುಂಡಿದೆ.
ಅಂದಹಾಗೆ ನಾಯಕನಾದ ಮೊದಲ ಪಂದ್ಯದಲ್ಲೇ ಸೋತ ಮೊದಲ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಅಲ್ಲ. ಈ ಹಿಂದೆ ವಿರಾಟ್ ಕೊಹ್ಲಿ, ರಿಷಭ್ ಪಂತ್ ಮತ್ತು ಶುಭಮನ್ ಗಿಲ್ ಕೂಡ ನಾಯಕರಾದ ಮೊದಲ ಪಂದ್ಯದಲ್ಲೇ ಸೋಲಿನ ಕಹಿಯುಂಡಿದ್ದಾರೆ. 2017ರಲ್ಲಿ ಕಾನ್ಪುರದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ನಾಯಕರಾಗಿ ಕೊಹ್ಲಿ ಪದಾರ್ಪಣೆ ಮಾಡಿದ್ದರು, ಆದರೆ ಮೊದಲ ಪಂದ್ಯದಲ್ಲೇ ಸೋಲು ಕಂಡಿದ್ದರು. ನಂತರ 2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕ್ಯಾಪ್ಟನ್ ಆದ ರಿಷಭ್ ಪಂತ್‌ಗೂ ತಂಡವನ್ನು ಗೆಲುವಿನತ್ತ ಮುನ್ನಡೆಸಲು ಸಾಧ್ಯವಾಗಲಿಲ್ಲ. ಇನ್ನು 2024ರಲ್ಲಿ ಜಿಂಬಾಬ್ವೆ ವಿರುದ್ಧ ನಾಯಕರಾದ ಶುಭಮನ್ ಗಿಲ್ ಕಥೆಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಈಗ ಈ ಸಾಲಿಗೆ ಶ್ರೇಯಸ್ ಕೂಡ ಸೇರಿದ್ದಾರೆ.
ಪಂದ್ಯದ ನಂತರ ಸೋಲಿನ ಬಗ್ಗೆ ಮಾತನಾಡಿದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್, ಯಾವುದೇ ಸಬೂಬು ಹೇಳಲು ಹೋಗಲಿಲ್ಲ. ಬದಲಿಗೆ, ತಂಡದ ಕಳಪೆ ಪ್ರದರ್ಶನವನ್ನು ಕಟುವಾಗಿ ಟೀಕಿಸಿದರು. 'ಕ್ರಿಕೆಟ್‌ನಲ್ಲಿ ಏನನ್ನೂ ಮೊದಲೇ ಊಹಿಸಲು ಸಾಧ್ಯವಿಲ್ಲ. ಸುಮ್ಮನೆ ಫೀಲ್ಡಿಗಿಳಿದು ಮ್ಯಾಚ್ ಗೆಲ್ಲಬಹುದು ಎಂದು ಯಾರೂ ಅಂದುಕೊಳ್ಳಬಾರದು. ಅದಕ್ಕಾಗಿ ಕಠಿಣ ಪರಿಶ್ರಮ ಬೇಕು. ಪರಿಸ್ಥಿತಿ ಮತ್ತು ಎದುರಾಳಿಗಳನ್ನು ಎಂದಿಗೂ ಹಗುರವಾಗಿ ತೆಗೆದುಕೊಳ್ಳಬಾರದು. ನಮ್ಮ ಪ್ಲಾನ್‌ಗಳನ್ನು ಸರಿಯಾಗಿ ಜಾರಿಗೊಳಿಸಿದರೆ ಮಾತ್ರ ಗೆಲ್ಲಲು ಸಾಧ್ಯ. ನಾಯಕನಾಗಿ ಮೊದಲ ಪಂದ್ಯದಲ್ಲೇ ಇಂತಹ ಸೋಲು ಸಿಕ್ಕಿದ್ದರೂ, ಇದೊಂದು ಒಳ್ಳೆಯ ಪಾಠ' ಎಂದು ಶ್ರೇಯಸ್ ಹೇಳಿದರು.
'ಪಂದ್ಯದ ಆರಂಭದಲ್ಲಿ ನಮ್ಮ ಬೌಲರ್‌ಗಳು ಚೆನ್ನಾಗಿ ಬೌಲಿಂಗ್ ಮಾಡಿದರು. ಆದರೆ, ಮಿಡಲ್ ಓವರ್‌ಗಳಲ್ಲಿ ನಮ್ಮ ಪ್ಲಾನ್‌ಗಳನ್ನು ಜಾರಿಗೊಳಿಸುವಲ್ಲಿ ನಾವು ಎಡವಿದೆವು. ಬೌಂಡರಿ ಚಿಕ್ಕದಾಗಿದ್ದ ಕಡೆಗೆ ಅವರು ಸುಲಭವಾಗಿ ಸಿಕ್ಸರ್‌ಗಳನ್ನು ಬಾರಿಸಲು ನಾವು ಅವಕಾಶ ಮಾಡಿಕೊಟ್ಟೆವು. ಅವರನ್ನು 140 ರನ್‌ಗಳಿಗೆ ಕಟ್ಟಿಹಾಕಬೇಕಿತ್ತು. ಆದರೂ, ಇಂತಹ ಪರಿಸ್ಥಿತಿಗಳಲ್ಲಿ ಆಡಿದ್ದು ಒಂದು ದೊಡ್ಡ ಅನುಭವ. ಕ್ಯಾಪ್ಟನ್ ಆಗಿ ಇದು ನನಗೆ ಉತ್ತಮ ಆರಂಭ. ಇದರಿಂದ ಕಲಿಯುವುದು ಬಹಳಷ್ಟಿದೆ,'' ಎಂದು ಅಯ್ಯರ್
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡವು ನಾಯಕ ಲಾರ್ಕನ್ ಟುಕರ್ ಸ್ಪೋಟಕ ಅರ್ಧಶತಕ(50) ಹಾಗೂ ಗೆರಾತ್ ಡೆಲ್ನಿ(49) ಚುರುಕಿನ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿತು. ಭಾರತ ಪರ ಹರ್ಷಿತ್ ರಾಣಾ 24 ರನ್‌ಗಳಿಗೆ ಮೂರು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.
ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ ತಂಡವು ಕೇವಲ 18.5 ಓವರ್‌ಗಳಲ್ಲಿ 148 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ 34 ರನ್‌ಗಳ ಹೀನಾಯ ಸೋಲು ಅನುಭವಿಸಿತು. ಅಭಿಷೇಕ್ ಶರ್ಮಾ 20 ಎಸೆತಗಳಲ್ಲಿ 49 ರನ್ ಸಿಡಿಸಿದ್ದು ಬಿಟ್ಟರೇ, ಉಳಿದ್ಯಾವ ಬ್ಯಾಟರ್‌ಗಳು ಕನಿಷ್ಠ 30 ರನ್ ಬಾರಿಸಲು ಯಶಸ್ವಿಯಾಗಲಿಲ್ಲ. ಸಂಜು ಸ್ಯಾಮ್ಸನ್(5), ಇಶಾನ್ ಕಿಶನ್(1) ನಾಯಕ ಶ್ರೇಯಸ್ ಅಯ್ಯರ್ 3 ರನ್ ಹಾಗೂ ವಾಷಿಂಗ್ಟನ್ ಸುಂದರ್ 9 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು.
ಈ ಸೋಲಿನೊಂದಿಗೆ ಭಾರತ ಎರಡು ಪಂದ್ಯಗಳ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದ್ದು, ಸರಣಿ ಸಮಬಲಗೊಳಿಸಬೇಕಾದರೆ ಮುಂದಿನ ಪಂದ್ಯವನ್ನು ಗೆಲ್ಲುವುದು ಅನಿವಾರ್ಯವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.