
ಶ್ರೀಲಂಕಾ ವಿರುದ್ಧದ ಮಹತ್ವದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಭಾರತ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ನಾಯಕ ಶುಭ್‌ಮನ್ ಗಿಲ್ ಬೆರಳು ಗಾಯದ ಸಮಸ್ಯೆಯಿಂದಾಗಿ ಶ್ರೀಲಂಕಾ ಕ್ರಿಕೆಟ್ ಇಲೆವೆನ್ ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯದ ಮೊದಲ ದಿನದಿಂದ ಹೊರಗುಳಿದಿದ್ದಾರೆ. ಗಿಲ್ ಅಲಭ್ಯತೆಯಲ್ಲಿ ಕನ್ನಡಿಗ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಗುರುವಾರ ಕೊಲೊಂಬೊದಲ್ಲಿ ನಡೆದ ಅಭ್ಯಾಸದ ವೇಳೆ ಶುಭ್‌ಮನ್ ಗಿಲ್ ಅವರಿಗೆ ಎರಡು ಬಾರಿ ಪೆಟ್ಟು ಬಿದ್ದಿತ್ತು. ಮೊದಲು ನೆಟ್ಸ್‌ನಲ್ಲಿ ಎಡಗೈ ವೇಗಿ ಗುರ್ನೂರ್ ಬ್ರಾರ್ ಎಸೆದ ಚೆಂಡು ಗಿಲ್ ಅವರ ಬಲಗೈ ಉಂಗುರದ ಬೆರಳಿಗೆ ಬಲವಾಗಿ ತಾಕಿತ್ತು. ತಕ್ಷಣವೇ ಚಿಕಿತ್ಸೆ ಪಡೆದು ಬ್ಯಾಟಿಂಗ್ ಮುಂದುವರಿಸಿದರಾದರೂ, ನಂತರ ಸ್ಲಿಪ್ ಕ್ಯಾಚಿಂಗ್ ಅಭ್ಯಾಸ ಮಾಡುವಾಗ ಮತ್ತೆ ಅದೇ ಬೆರಳಿಗೆ ಪೆಟ್ಟು ಮಾಡಿಕೊಂಡರು.
ಗಿಲ್ ಅವರ ಗಾಯದ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ, "ನಾಯಕ ಶುಭ್‌ಮನ್ ಗಿಲ್ ಅವರ ಬಲಗೈ ಉಂಗುರದ ಬೆರಳಿಗೆ ಪೆಟ್ಟು ಬಿದ್ದಿದೆ. ಮುಂಜಾಗ್ರತಾ ಕ್ರಮವಾಗಿ ಅವರು ಅಭ್ಯಾಸ ಪಂದ್ಯದ ಮೊದಲ ದಿನ ಕಣಕ್ಕಿಳಿಯುತ್ತಿಲ್ಲ. ಬಿಸಿಸಿಐ ವೈದ್ಯಕೀಯ ತಂಡವು ಅವರ ಮೇಲೆ ನಿಗಾ ಇರಿಸಿದೆ," ಎಂದು ತಿಳಿಸಿದೆ. ಆಗಸ್ಟ್ 15 ರಿಂದ ಗಾಲೆನಲ್ಲಿ ಮೊದಲ ಟೆಸ್ಟ್ ಆರಂಭವಾಗಲಿರುವ ಕಾರಣ, ಗಿಲ್ ಅವರ ವಿಷಯದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಮ್ಯಾನೇಜ್‌ಮೆಂಟ್ ಸಿದ್ಧವಿಲ್ಲ.
ಭಾರತ ತಂಡಕ್ಕೆ ಗಾಯದ ಸಮಸ್ಯೆ ಬೆನ್ನುಬಿಡದೆ ಕಾಡುತ್ತಿದೆ. ಈಗಾಗಲೇ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ತಂಡದಿಂದ ಹೊರಗಿದ್ದಾರೆ. ವಾಷಿಂಗ್ಟನ್ ಸುಂದರ್ ಮತ್ತು ಹರ್ಷಿತ್ ರಾಣಾ ಕೂಡ ಗಾಯದ ಕಾರಣ ಲಭ್ಯವಿಲ್ಲ. ಇನ್ನು ಯುವ ಆಟಗಾರ ಸಾಯಿ ಸುದರ್ಶನ್ ಬೆಂಗಳೂರಿನ ಎನ್‌ಸಿಎನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಗಿಲ್ ಅವರ ಗಾಯ ತಂಡದ ಆತಂಕವನ್ನು ಹೆಚ್ಚಿಸಿದೆ. ಶುಭ್‌ಮನ್ ಗಿಲ್ ಸದ್ಯ ಅಮೋಘ ಫಾರ್ಮ್‌ನಲ್ಲಿದ್ದಾರೆ. ಕಳೆದ 10 ಟೆಸ್ಟ್ ಪಂದ್ಯಗಳಲ್ಲಿ ಅವರು 6 ಶತಕಗಳೂ ಸೇರಿದಂತೆ ಒಟ್ಟು 1,109 ರನ್ ಗಳಿಸಿದ್ದಾರೆ. ಶ್ರೀಲಂಕಾದ ಸ್ಪಿನ್ ಸ್ನೇಹಿ ಪಿಚ್‌ಗಳಲ್ಲಿ ಗಿಲ್ ಅವರ ಬ್ಯಾಟಿಂಗ್ ಭಾರತಕ್ಕೆ ಅತ್ಯಂತ ಅವಶ್ಯಕವಾಗಿದೆ.
ನಾಯಕನ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ಅಭ್ಯಾಸ ಪಂದ್ಯದ ಮೂಲಕ ಶ್ರೀಲಂಕಾದ ವಾತಾವರಣಕ್ಕೆ ಹೊಂದಿಕೊಳ್ಳಲು ಭಾರತೀಯ ಬ್ಯಾಟರ್‌ಗಳಿಗೆ ಇದು ಉತ್ತಮ ಅವಕಾಶವಾಗಿದೆ. ಗಿಲ್ ಶೀಘ್ರವಾಗಿ ಚೇತರಿಸಿಕೊಂಡು ಮೊದಲ ಟೆಸ್ಟ್ ಪಂದ್ಯಕ್ಕೆ ಲಭ್ಯವಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.